ನವದೆಹಲಿ: ಮುಸಲ್ಮಾನ ವ್ಯಕ್ತಿಗೆ ಇಸ್ಲಾಂ ಧರ್ಮ ಪಾಲಿಸಲು ಇರುವ ಮೂಲಭೂತ ಹಕ್ಕಿನ ವ್ಯಾಪ್ತಿಗೆ ದ್ವಿಪತ್ನಿತ್ವ/ ಬಹುಪತ್ನಿತ್ವ ಒಳಪಡುವುದಿಲ್ಲ ಎಂದು ಸುಪ್ರೀಂಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಸಂವಿಧಾನದ ೨೫ನೇ ವಿಧಿಯು ಧಾರ್ಮಿಕ ನಂಬಿಕೆಗೆ ರಕ್ಷಣೆ ನೀಡುತ್ತದೆಯೇ ವಿನಾ ಸಾರ್ವಜನಿಕ ಸುವ್ಯವಸ್ಥೆ, ಆರೋಗ್ಯ ಅಥವಾ ನೈತಿಕತೆಗೆ ವಿರುದ್ಧವಾದ ಯಾವುದೇ ಆಚರಣೆಗೆ ರಕ್ಷಣೆ ನೀಡುವುದಿಲ್ಲ. ಬಹುಪತ್ನಿತ್ವವು ಧರ್ಮದ ಅವಿಭಾಜ್ಯ ಅಂಗವಿಲ್ಲ. ಏಕಪತ್ನಿತ್ನವು ಸಂವಿಧಾನದ ೨೫ನೇ ವಿಧಿಯಡಿ ರಾಜ್ಯಗಳಿಗೆ ದತ್ತವಾಗಿರುವ ಅಧಿಕಾರದಡಿ ಸುಧಾರಿತ ವ್ಯವಸ್ಥೆಯಾಗಿದೆ ಎಂದು ನ್ಯಾಯಮೂರ್ತಿಗಳಾದ ಟಿ.ಎಸ್.ಠಾಕೂರ್ ಮತ್ತು ಎ.ಕೆ.ಗೋಯಲ್ ಅವರ ಪೀಠ ವಿವರಿಸಿದೆ. ಬಹುಪತ್ನಿತ್ವಕ್ಕೆ ಧರ್ಮದಲ್ಲಿ ಅವಕಾಶವಿದೆ ಎಂದ ಮಾತ್ರಕ್ಕೆ ಅದಕ್ಕೆ ಸಂಪೂರ್ಣ ಧಾರ್ಮಿಕ ಸಮ್ಮತಿ ಇದೆ ಎಂದು ಅರ್ಥವಲ್ಲ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯಪಟ್ಟರು.
ಉತ್ತರ ಪ್ರದೇಶ ಸರ್ಕಾರದ ನೀರಾವರಿ ಇಲಾಖೆ ಮೇಲ್ವಿಚಾರಕನಾಗಿದ್ದ ಖುರ್ಷೀದ್ ಅಹಮ್ಮದ್ ಖಾನ್ ಎಂಬಾತ ಮೊದಲನೇ ಮದುವೆ ಇನ್ನೂ ಅಸ್ತಿತ್ವದಲ್ಲಿದಲ್ಲಾಗಲೇ ಅನುಮತಿ ಪಡೆಯದೇ ಎರಡನೇ ಮದುವೆಯಾಗಿದ್ದ. ಈ ಸಂಬಂಧ ಮೊದಲನೇ ಪತ್ನಿಯ ಸಹೋದರಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ನೀಡಿದ್ದ ದೂರಿನ ಅನ್ವಯ, ಪೊಲೀಸರಿಗೆ ತನಿಖೆ ನಡೆಸಲು ಸೂಚಿಸಲಾಗಿತ್ತು.
ನಂತರ, ಇದನ್ನು ದುರ್ವರ್ತನೆ ಎಂದು ಪರಿಗಣಿಸಿದ್ದ ಉತ್ತರ ಪ್ರದೇಶ ಸರ್ಕಾರವು ಆತನನ್ನು ನೌಕರಿಯಿಂದ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಅಹಮ್ಮದ್ ಖಾನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಉತ್ತರ ಪ್ರದೇಶ ಸರ್ಕಾರದ ನಿರ್ಧಾರವನ್ನು ಎತ್ತಿಹಿಡಿದಿದೆ.
ಈ ಹಿಂದೆ ಬಾಂಬೆ, ಗುಜರಾತ್ ಮತ್ತು ಅಲಹಾಬಾದ್ ಹೈಕೋರ್ಟ್ಗಳು ಕೂಡ ಇದೇ ರೀತಿಯ ತೀರ್ಪುಗಳನ್ನು ಪ್ರಕಟಿಸಿವೆ ಎಂಬುದನ್ನು ನ್ಯಾಯಪೀಠ ಈ ಸಂದರ್ಭದಲ್ಲಿ ಉಲ್ಲೇಖಿಸಿತು.
ಉತ್ತರ ಪ್ರದೇಶ ಸರ್ಕಾರವು ದ್ವಿಪತ್ನಿತ್ವ/ ಬಹುಪತ್ನಿತ್ವಕ್ಕೆ ಸಂಬಂಧಿಸಿದಂತೆ ರೂಪಿಸಿರುವ ಸರ್ಕಾರಿ ನೌಕರರ ವರ್ತನಾ ನಿಯಮವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಈ ನಿಯಮವು ಸಂವಿಧಾನದ ೨೫ನೇ ವಿಧಿಯನ್ನು ಉಲ್ಲಂಘಿಸುವುದಿಲ್ಲ ಎಂದು ಪೀಠ ಹೇಳಿದೆ.

1 Comment
Its good judgement supreme court has give about the muslim marriages. Constitution is same for all even which ever the religion or cast he/her she belongs to.