ಕರಾವಳಿ

ಟ್ಯಾಂಕ್ ನಿರ್ಮಿಸಿ ಐದು ವರ್ಷ ಕಳೆದರೂ ನೀರು ಬರಲಿಲ್ಲ: ಟ್ಯಾಂಕ್ ಇದೆ ; ನೀರು ತುಂಬಿದ ಬಾವಿ ಇದೆ; ಆದರೆ ಪೈಪ್ ಲೈನೇ ಇಲ್ಲ

Pinterest LinkedIn Tumblr

KND_JAN.27_5(2)

ಕುಂದಾಪುರ: ನೀವು ನಂಬಿದರೆ ನಂಬಿ ಬಿಟ್ಟರೆ ಬಿಡಿ ಐವತ್ತು ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್‌ವೊಂದನ್ನು ನಿರ್ಮಿಸಿ ಐದು ವರ್ಷ ಕಳೆದರೂ ಇದುವರೆಗೂ ಒಂದು ಹನಿ ನೀರನ್ನೂ ಫಲಾನುಭವಿಗಳಿಗೆ ನೀಡುವಲ್ಲಿ ವಿಫಲವಾದ ಘಟನೆ ಹಟ್ಟಿಯಂಗಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚನೂರಿನಲ್ಲಿ ಬೆಳಕಿಗೆ ಬಂದಿದೆ.

KND_JAN.27_5(1)

2008-09ರ ಸಾಲಿನಲ್ಲಿ ಹೆಮ್ಮಾಡಿಯಿಂದ ವಂಡ್ಸೆಗೆ ಹೋಗುವ ರಾಜ್ಯ ಹೆದ್ದಾರಿಯಲ್ಲಿ ಕೆಂಚನೂರು ಗ್ರಾಮದಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಡಿಯಲ್ಲಿ ಬೃಹತ್ ಗ್ರಾಮೀಣ ಕುಡಿಯುವ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ಐವತ್ತು ಸಾವಿರ ಲೀಟರ್ ಸಾಮರ್ಥ್ಯದ ನೀರಿನ ಟ್ಯಾಂಕ್ ರಚನೆ ಮಾಡಲಾಗಿದೆ. ಆದರೆ ಈ ಪ್ರದೇಶದಲ್ಲಿ ಎಲ್ಲಿಯೂ ನೀರಿನ ಸಂಪನ್ಮೂಲ ಇಲ್ಲದ ಕಾರಣ ಕಳೆದ ವರ್ಷದ ವರೆಗೂ ಟ್ಯಾಂಕ್ ಮಾತ್ರವಿದ್ದು, 2012-13ರ ಸಾಲಿನಲ್ಲಿ ವಂಡ್ಸೆ ಸಮೀಪ ಬೃಹತ್ ಬಾವಿ ನಿರ್ಮಾಣಗೊಂಡಿದ್ದು, ಇದನ್ನೂ ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿಯಲ್ಲಿ ನಿರ್ಮಿಸಲಾಗಿದೆ. ಬಾವಿಯಿಮದ ಸುಮಾರು ಐದು ಕಿ.ಮೀ ದೂರದಲ್ಲಿರುವ ನೀರಿನ ಟ್ಯಾಂಕ್‌ಗೆ ಪೈಪ್‌ಲೈನ್ ಅಳವಡಿಸಲಾಗಿದ್ದು ಟ್ಯಾಂಕಿಗೆ ನೀರು ಸರಬರಾಜಾಗುತ್ತಿದೆ, ಆದರೆ ಟ್ಯಾಂಕ್‌ನಿಂದ ಯೋಜನೆಯ ಉದ್ಧೇಶದ ಫಲಾನುಭವಿಗಳಿಗೆ ಇದುವರೆಗೆ ನೀರು ಸರಬರಾಜು ಮಾಡಲು ಇಲಾಖೆ ವಿಫಲವಾಗಿದೆ.

ಕೇಂಚನೂರು ಪ್ರದೇಶದಲ್ಲಿರುವ ಏಕೈಕ ಪ್ರಾಥಮಿಕ ಶಾಲೆಗೆ ಇದೇ ಟ್ಯಾಂಕಿನಿಂದ ನೀರು ಸರಬರಾಜಾಗಬೇಕಿದ್ದು, ನೀರಿನ ಸಮಸ್ಯೆ ಇಲ್ಲಿಯ ಮಕ್ಕಳನ್ನು ಮತ್ತು ಅಕ್ರದಾಸೋಹ ಕಾರ್ಯಕ್ರಮವನ್ನು ಕಾಡುತ್ತಿದೆ. ಅಲ್ಲದೇ ಸಮೀಪದ ಕೆಂಚನೂರು ಗುಡ್ಡೆಯಲ್ಲಿರುವ ಜನತಾ ಕಾಲೋನಿಯಲ್ಲಿ ವಾಸಿಸುತ್ತಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಸುಮಾರು ಅರವತ್ತಕ್ಕೂ ಹೆಚ್ಚು ಕುಟುಂಬಗಳಿಗೆ ನೀರಿಲ್ಲದಂತಾಗಿದೆ.

ಹಟ್ಟಿಯಂಗಡಿ ಗ್ರಾಮ ಪಂಚಾಯಿತಿಯ ಅನುದಾನದಲ್ಲಿ ಸುಮಾರು ಒಂದು ಕಿಲೋ ಮೀಟರ್ ದೂರದವರೆಗೆ ಅಂದಾಜಿ ಎಂಭತ್ತು ಸಾವಿರ ರೂಪಾಯಿ ವೆಚ್ಚದಲ್ಲಿ ಪೈಪ್ ಲೈನ್ ಅಳವಡಿಸಲಾಗಿದ್ದರೂ ಅನುದಾನದ ಕೊರತೆಯಿಂದಾಗಿ ಪೈಪ್ ಲೈನ್ ಅರ್ಧಕ್ಕೆ ನಿಲ್ಲಿಸಲಾಗಿದೆ. ಇದರಿಂದಾಗಿ ಕೆಂಚನೂರು ಗ್ರಾಮಸ್ಥರಿಗೆ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.

ಈ ಬಗ್ಗೆ ಹಟ್ಟಿಯಂಗಡಿ ಪಂಚಾಯಿತಿಯ ಗ್ರಾಮಸಭೆಯಲ್ಲಿ ನಿರ್ಣಯ ಮಂಡಿಸಲಾಗಿದ್ದು, ಸ್ಥಳೀಯ ಶಾಸಕರಿಗೆ ಹಾಗೂ ಜಿಲ್ಲಾ ಪಂಚಾಯಿತಿಗೆ ಬೇಡಿಕೆ ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.

ಕೆಂಚನೂರು ಗ್ರಾಮಸ್ಥರು ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದಾರೆ. ಫೆಬ್ರುವರಿ ವರೆಗೆ ಆಚೀಚೆ ಮನೆಗಳ ಬಾವಿಯಿಮದ ನೀರು ತರುತ್ತಾರೆ. ಆದರೆ ನಂತರದಲ್ಲಿ ನೀರಿನ ಕೊರತೆಯಿದ್ದು, ಸುಮಾರು ಸುಮಾರು ಮೂರ್ನಾಲ್ಕು ತಿಂಗಳುಗಳ ಕಾಲ ಬರಗಾಲದ ಸ್ಥಿತಿ ನಿರ್ಮಾಣವಾಗುತ್ತದೆ ಜನಪ್ರತಿನಿಧಿಗಳು ಇತ್ತಕಡೆ ತಲೆಕೆಡಿಸಿಕೊಳ್ಳುತ್ತಿಲ್ಲ – ಲಕ್ಷ್ಮಣ, ಗ್ರಾಮಸ್ಥ ಕೆಂಚನೂರು

ಈ ಬಗ್ಗೆ ಗ್ರಾಮ ಪಂಚಾಯಿತಿ ನಿರ್ಣಯ ಕೈಗೊಂಡಿದೆ, ಪಂಚಾಯಿತಿ ಅನುದಾನದಲ್ಲಿ ಸಾಧ್ಯವಿದ್ದಷ್ಟು ಪೈಪ್ ಲೈನ್ ಅಳವಡಿಸುವ ಕೆಲಸವಾಗಿದೆ. ಹೆಚ್ಚಿನ ಅನುದಾನಕ್ಕೆ ತಾ.ಪಂ., ಜಿ.ಪಂ, ಹಾಗೂ ಶಾಸಕರ ಗಮನಕ್ಕೆ ತರಲಾಗಿದ್ದರೂ ಇದುವರೆಗೆ ಯಾವುದೇ ರೀತಿಯ ಸ್ಪಂದನೆ ದೊರಕಿಲ್ಲ. ಗ್ರಾಮಸ್ಥರ ಮೂಲ ಭೂತ ಹಕ್ಕಾದ ಕುಡಿಯುವ ನೀರಿನ ವ್ಯವಸ್ಥೆಗೆ ಇನ್ನಾದರೂ ಕ್ರಮ ಕೈಗೊಳ್ಳಬೇಕಾಗಿದೆ ಕೆಂಚನೂರು ರಾಜೀವ ಶೆಟ್ಟಿ, ಹಟ್ಟಯಂಗಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ

Write A Comment