ಕರ್ನಾಟಕ

ಹೊನ್ನಾಳಿ: ಶಂಕಿತ ಉಗ್ರನ ಬಂಧನ; 2014ರ ಗುವಾಹಟಿ ಬಾಂಬ್‌ ಸ್ಫೋಟದಲ್ಲಿ ಕೈವಾಡ ಶಂಕೆ

Pinterest LinkedIn Tumblr

New-pvec30januhnl3ep

ಹೊನ್ನಾಳಿ (ದಾವಣಗೆರೆ ಜಿಲ್ಲೆ): ಅಸ್ಸಾಂನ ಗುವಾಹಟಿ ನಗರ­ದಲ್ಲಿ ಕಳೆದ ವರ್ಷದ ಅಕ್ಟೋಬರ್‌ನಲ್ಲಿ  ನಡೆದ ಬಾಂಬ್ ಸ್ಫೋಟದ ಪ್ರಮುಖ ಆರೋಪಿ ಮಹ್ಮದ್ ಫಲ್ಬರ್ ಹುಸೇನ್‌­­ನನ್ನು ಹೊನ್ನಾಳಿ ತಾಲ್ಲೂಕಿನ ಸೊರ­ಟೂರು ವ್ಯಾಪ್ತಿಯ ಮಾದೇನಹಳ್ಳಿ ಗ್ರಾಮದಲ್ಲಿ ಗುರುವಾರ ಬಂಧಿಸ­ಲಾಗಿದೆ.

ಆರೋಪಿಯನ್ನು ಸ್ಥಳೀಯ ಜೆಎಂಎಫ್‌ಸಿ ನ್ಯಾಯಾ­ಲಯ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಆತ­ನನ್ನು ದಾವಣಗೆರೆ ಉಪ ಕಾರಾಗೃಹಕ್ಕೆ ಕರೆದೊಯ್ಯ­ಲಾಯಿತು.

ವಿವರ: ಜನವರಿ 27 ರಂದು ರಾತ್ರಿ ಬೆಂಗ­ಳೂರಿನ ಆಂತರಿಕ ಭದ್ರತಾ ವಿಭಾಗ ಹಾಗೂ ರಾಜ್ಯ ಗುಪ್ತ ವಾರ್ತೆ ಅಧಿ­ಕಾ­ರಿಗಳು ನೀಡಿದ ಮಾಹಿತಿ ಮೇರೆಗೆ ಅಸ್ಸಾಮಿನ ಫಲ್ಬರ್ ಹುಸೇನ್ ಹುಡು­ಕಾಟ ಆರಂ­ಭ­ವಾಗಿತ್ತು.

ಈತ ಅಸ್ಸಾಂ ರಾಜ್ಯದ ಬಕ್ಸಾ ಜಿಲ್ಲೆಯ ಪೋಕಲಗಿ ಗ್ರಾಮ­ದವನು. ಬಾಂಬ್ ಸ್ಫೋಟ ಹಾಗೂ ಇತರ ಪ್ರಮುಖ ಪ್ರಕ­ರಣಗಳಲ್ಲಿ ಈತ
ಭಾಗಿ­ಯಾ­ಗಿದ್ದು, ಅಲ್ಲಿನ ಪೊಲೀಸರಿಗೆ ಬೇಕಾ­ಗಿದ್ದ. ಆತ ಹೊನ್ನಾಳಿ ಪೊಲೀಸ್ ಠಾಣೆಯ ವ್ಯಾಪ್ತಿ­ಯಲ್ಲಿ ಇರುವನೆಂಬ ಗುಪ್ತ­ಚರ ಇಲಾಖೆ ಮಾಹಿತಿ ಮೇರೆಗೆ ಶೋಧ ಕಾರ್ಯ ನಡೆಸ­ಲಾ­ಯಿತು.

ದಾವಣಗೆರೆ  ಡಿವೈಎಸ್ಪಿ ನ್ಯಾಮ­ಗೌಡ, ಹೊನ್ನಾಳಿ ಸಿಪಿಐ ನಾಗರಾಜ್ ಮಾಡಳ್ಳಿ, ಪಿಎಸ್ಐ ಅಶ್ವಿನ್ ಕುಮಾರ್ ಅವರನ್ನು ಒಳಗೊಂಡ ವಿಶೇಷ ತನಿಖಾ ತಂಡ ರಚಿಸಿ ಶೋಧ ಕಾರ್ಯ ಕೈಗೊಳ್ಳ­ಲಾಯಿತು.

ಈತನ ಸಹೋದರ ನಜೀಂ ಉಲ್‌ ಹಕ್‌ ಹಲವು ದಿನ­ಗಳಿಂದ ಹೊನ್ನಾಳಿ–ಶಿಕಾರಿಪುರ ರಸ್ತೆ ಕಾಮಗಾರಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಎನ್ನಲಾಗಿದೆ. ಅಸ್ಸಾಂ ಪೊಲೀಸರು ಫಲ್ಬರ್ ಹುಸೇನ್‌ನ ಹುಡುಕಾಟ ಆರಂಭಿ­ಸಿದ್ದರಿಂದ ಆತ ತಲೆ ಮರೆಸಿಕೊಂಡು ಹೊನ್ನಾಳಿಯಲ್ಲಿ­ರುವ ಸಹೋದರನ ಬಳಿ ಬಂದಿದ್ದ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅಸ್ಸಾಂ ಪೊಲೀಸರು ನೀಡಿದ ಉಗ್ರನ ಚಹರೆಯು ಜ. 28 ರಂದು ಸೊರ­ಟೂರು ಗ್ರಾಮದ ವ್ಯಾಪ್ತಿಯಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿದ್ದ ವ್ಯಕ್ತಿಯಲ್ಲಿ ಕಂಡುಬಂತು. ಆತನನ್ನು ವಶಕ್ಕೆ ಪಡೆದುಕೊಳ್ಳಲಾಯಿತು.

ವಿಚಾರಣೆ ವೇಳೆ ಹೆಸರು, ವಿಳಾಸ, ಗುರುತಿನ ಚೀಟಿ, ಮತ್ತು ಮೊಬೈಲ್ ನಂಬರ್ ಪರಿಶೀಲಿಸಲಾಯಿತು. ಅಸ್ಸಾಂ ಪೊಲೀಸರೊಂದಿಗೆ ಸಂಪರ್ಕಿಸಿ, ಆರೋಪಿ ಎಂದು ಖಚಿತಪಡಿಸಿಕೊಳ್ಳ ಲಾಯಿತು ಎಂದು ಸಿಪಿಐ ನಾಗರಾಜ್ ಮಾಡಳ್ಳಿ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ವಿಶೇಷ ತನಿಖಾ ತಂಡದಲ್ಲಿ  ಪೊಲೀಸ್ ಸಿಬ್ಬಂದಿಯಾದ ದೊಡ್ಡ ಬಸಪ್ಪ, ಫೈರೋಜ್ ಖಾನ್, ಕೊಟ್ರೇಶ್, ಹರೀಶ್, ವೆಂಕಟರಮಣ, ರಾಜಶೇಖರ್, ಶಂಕರಗೌಡ ಹಾಗೂ ಅರುಣ್ ಕುಮಾರ್ ಇದ್ದರು.

2008ರಲ್ಲಿ ಇಬ್ಬರು ಉಗ್ರರು ಸಿಕ್ಕಿಬಿದ್ದಿದ್ದರು!
ಹೊನ್ನಾಳಿ: ತಾಲ್ಲೂಕಿನ ಎಚ್.ಕಡದಕಟ್ಟೆ ಗ್ರಾಮದಲ್ಲಿ  2008ರಲ್ಲಿ  ಬೈಕ್‌ನಲ್ಲಿ ಹೋಗುತ್ತಿದ್ದ ಇಬ್ಬರು ಉಗ್ರರು ಸಿಕ್ಕಿಬಿದ್ದಿದ್ದರು.
ಆಕಸ್ಮಿಕವಾಗಿ ಕೆಟ್ಟುಹೋದ ಬೈಕ್ ದುರಸ್ತಿಗಾಗಿ ಕೆಳಗಿಳಿದು ಪರಿಶೀಲಿಸುತ್ತಿದ್ದಾಗ ಅಲ್ಲಿಯೇ ಇದ್ದ ಪೊಲೀಸರು ಸಂಶಯದಿಂದ ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಅವರ ಚಲನವಲನ ಹಾಗೂ ಅವರಿಂದ ದೊರೆತ  ಸಂಶಯಾಸ್ಪದ ವಸ್ತುಗಳಿಂದ ಅವರು ಉಗ್ರರು ಇರಬಹುದು ಎಂದು ಹೆಚ್ಚಿನ ವಿಚಾರಣೆ  ನಡೆಸಲಾಗಿತ್ತು.

ಹೊಸಪೇಟೆಯ ಅಸಾದುಲ್ಲಾ ಹಾಗೂ ಹೈದರಾಬಾದ್‌ನ ರಿಯಾ­ಜುದ್ದೀನ್ ನಾಸಿರ್ ಆ ಸಂದರ್ಭದಲ್ಲಿ ಬಂಧಿತರಾಗಿದ್ದ ಉಗ್ರರು.
ರಿಯಾಜುದ್ದೀನ್ ಪಾಕಿಸ್ತಾನದಲ್ಲಿ ಬಾಂಬ್ ತಯಾರಿಕೆಯಲ್ಲಿ ಪರಿಣತಿ ಪಡೆದು ಭಾರತದಲ್ಲಿ ಉಗ್ರಗಾಮಿ ಚಟು­ವ­ಟಿಕೆ ನಡೆಸಲು  ಬಂದಿದ್ದ ಎನ್ನಲಾಗಿದೆ. ಹುಬ್ಬಳ್ಳಿಯ ನ್ಯಾಯಾಲ­ಯದಲ್ಲಿ ಎರಡು ವರ್ಷಗಳಿಂದ ಇವರಿಬ್ಬರ ವಿಚಾರಣೆ ನಡೆಯುತ್ತಿದೆ.

Write A Comment