ಮಂಗಳೂರು, ಜ.25: ಏಶ್ಯನ್ ಡೆವಲಪ್ಮೆಂಟ್ ಬ್ಯಾಂಕ್(ಎಡಿಬಿ) ಯೋಜನೆಯಡಿ ಪ್ರಥಮ ಹಂತದಲ್ಲಿ ಕೈಗೆತ್ತಿಕೊಳ್ಳ್ಳಲಾಗಿರುವ ಉಳ್ಳಾಲ ಕಡಲ್ಕೊರೆತ ತಡೆ ಕಾಮಗಾರಿ 2016ರ ಜೂನ್ ಅಂತ್ಯಕ್ಕೆ ಪೂರ್ಣಗೊಳ್ಳಲಿದೆ ಎಂದು ಬಂದರು ಹಾಗೂ ಜವಳಿ ಖಾತೆ ಸಚಿವ ಬಾಬುರಾವ್ ಚಿಂಚನಸೂರು ಹೇಳಿದ್ದಾರೆ.
ಶನಿವಾರ ಮಂಗಳೂರಿಗೆ ಆಗಮಿಸಿರುವ ಅವರು, ಬೆಳಗ್ಗೆ ಉಳ್ಳಾಲದಲ್ಲಿ ನಡೆಯುತ್ತಿರುವ ಎಡಿಬಿ ಕಾಮಗಾರಿಯನ್ನು ವೀಕ್ಷಿಸಿ ಸಂಜೆ ಹಳೆ ಬಂದರು ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಉಳ್ಳಾಲ ಕಡಲ ಕಿನಾರೆಯಲ್ಲಿ ನಡೆಯುತ್ತಿರುವ ಕಾಮಗಾರಿ ಉತ್ತಮವಾಗಿದೆ. 223.32 ಕೋ.ರೂ. ಮೊತ್ತದ ಕಾಮಗಾರಿಯಡಿ 25.51 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಇನ್ಶೋರ್ ಬರ್ಮ್ಗಳ ನಿರ್ಮಾಣ, 110 ಕೋಟಿ ರೂ. ವೆಚ್ಚದಲ್ಲಿ ಎರಡು ಆಫ್ಶೋರ್ ರೀಫ್ಗಳ ನಿರ್ಮಾಣ, 40.91 ಕೋಟಿ ರೂ. ವೆಚ್ಚದಲ್ಲಿ 2ಬ್ರೇಕ್ ವಾಟರ್ಗಳ ಪುನರ್ ನಿರ್ಮಾಣ ಹಾಗೂ 18 ಕೋಟಿ ರೂ. ವೆಚ್ಚದಲ್ಲಿ ಮರಳು ಪೋಷಣೆ ಕಾಮಗಾರಿ ನಡೆಯಲಿದೆ.
4 ಇನ್ಶೋರ್ ಬರ್ಮುಗಳಲ್ಲಿ ಈ ವರ್ಷದ ಜೂನ್ ಅಂತ್ಯಕ್ಕೆ ಎರಡು ಬರ್ಮ್ಗಳ ನಿರ್ಮಾಣ ಪೂರ್ಣಗೊಳ್ಳಲಿದೆ. ಈ ಕಾಮಗಾರಿಗಾಗಿ ಈಗಾಗಲೇ 16.12 ಕೋಟಿ ರೂ. ವೆಚ್ಚವಾಗಿದೆ. ಆಫ್ಶೋರ್ ರೀಫ್ ನಿರ್ಮಾಣ ಕಾಮಗಾರಿಯಡಿ 28.52 ಕೋಟಿ ರೂ.ಗಳ ಕಾಮಗಾರಿ ನಡೆದಿದೆ. ಬ್ರೇಕ್ವಾಟರ್ ಕಾಮಗಾರಿಗಾಗಿ ಈವರೆಗೆ 4.09 ಕೋಟಿ ರೂ. ವೆಚ್ಚ ಮಾಡಲಾಗಿದೆ. ಉಳಿದಂತೆ ಮರಳು ಪೋಷಣೆ ಕಾಮಗಾರಿ ಅಂತಿಮ ಹಂತದಲ್ಲಿ ಕೈಗೆತ್ತಿಕೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ದ್ವಿತೀಯ ಹಂತದ ಕಾಮಗಾರಿಯಡಿ ದ.ಕ., ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಂದ 11 ಸ್ಥಳಗಳನ್ನು ಗುರುತಿಸಲಾಗಿದೆ. ಒಟ್ಟು 32 ಕಿ.ಮೀ. ಉದ್ದಕ್ಕೆ ಕಡಲ್ಕೊರೆತ ಪ್ರದೇಶದಲ್ಲಿ ಸುಸ್ಥಿರ ತೀರ ಸಂರಕ್ಷಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು. ದ.ಕ. ಜಿಲ್ಲೆಯ ಸೋಮೇಶ್ವರ, ಉಡುಪಿ ಜಿಲ್ಲೆಯ ಎರ್ಮಾಳ್ ತೆಂಕ, ಉದ್ಯಾವರ, ಕೋಡಿ ಬೆಂಗ್ರೆ, ಕೋಡಿ ಕನ್ಯಾನ, ಗಂಗೊಳ್ಳಿ, ಮರವಂತೆ, ಮೆಡಿಕಲ್, ಶೀರೂರು ಹಾಗೂ ಉತ್ತರ ಕನ್ನಡದ ಮುರ್ಡೇಶ್ವರ ಮತ್ತು ಪಾವಿನಕುರ್ವೆ ಆ 11 ಪ್ರದೇಶಗಳಾಗಿವೆ. ಈಗಾಗಲೇ ಐದು ಪ್ರದೇಶಗಳಲ್ಲಿ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಡಿಸೈನ್ ಕನ್ಸಲ್ಜೆಂಟ್ ವತಿಯಿಂದ ಸಾಧ್ಯತಾ ವರದಿ ತಯಾರಿಸಿ ಪುಣೆಯ ಸಿಡಬ್ಲುಪಿಆರ್ಎಸ್ ಸಂಸ್ಥೆಗೆ ಸಲ್ಲಿಸಲಾಗಿದೆ ಎಂದು ಸಚಿವ ಚಿಂಚನಸೂರು ಹೇಳಿದರು.
ಕಿರು ಬಂದರು ನೀತಿ: ಕ್ರಾಂತಿಕಾರಿ ಹೆಜ್ಜೆ
ರಾಜ್ಯದ 12 ಕಿರು ಬಂದರುಗಳ ಅಭಿವೃದ್ಧಿಗಾಗಿ ಕಿರು ಬಂದರು ನೀತಿಯನ್ನು ಜಾರಿಗೆ ತರುವ ಮೂಲಕ ರಾಜ್ಯ ಸರಕಾರವು ಕ್ರಾಂತಿಕಾರಿ ಹೆಜ್ಜೆ ಇರಿಸಿದೆ. ಖಾಸಗಿಯವರಿಗೆ ಸರಕಾರ ಲೀಸ್ನಲ್ಲಿ ಭೂಮಿ ಒದಗಿಸುವ ಮೂಲಕ ಅವರಿಂದ ಕಿರು ಬಂದರುಗಳ ಅಭಿವೃದ್ಧಿಯಾಗಲಿದೆ. 10,000 ಕೋಟಿ ರೂ.ಗಳ ಬಂಡವಾಳ ಹೂಡಿಕೆಯಾಗಲಿದೆ. ಕಳೆದ 23 ವರ್ಷಗಳಿಂದ ಆಗದ ಕಿರು ಬಂದರು ನೀತಿಯನ್ನು ತಮ್ಮ ಅವಧಿಯಲ್ಲಿ ಮಾಡಲಾಗಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ ಆದಾಯವಾಗಲಿದೆ.
ಮುಂದಿನ ದಿನಗಳಲ್ಲಿ ಮುಂಬೈ, ಗುಜರಾತ್ ಬಂದರುಗಳನ್ನು ಹಿಂದಿಕ್ಕಿ ಕರ್ನಾಟಕ ವಾಣಿಜ್ಯ ಕೇಂದ್ರವಾಗಿ ಬೆಳೆಯಲಿದೆ ಎಂದು ಸಚಿವ ಚಿಂಚನಸೂರು ಭರವಸೆ ವ್ಯಕ್ತಪಡಿಸಿದರು. ಮೆರಿಟೈಮ್ ಬೋರ್ಡ್ ಪ್ರಸ್ತಾಪ ಪ್ರಸ್ತುತ ಕೇಂದ್ರ ಸರಕಾರದ ಗೃಹ ಸಚಿವಾಲಯದಲ್ಲಿದ್ದು, ಅಲ್ಲಿಂದ ರಾಷ್ಟ್ರಪತಿಯ ಅನುಮೋದನೆಗೆ ಹೋಗಬೇಕಿದೆ. ಕುಳಾಯಿಯಲ್ಲಿ ಮೀನುಗಾರಿಕಾ ಬಂದರು ನಿರ್ಮಿಸುವ ಪ್ರಸ್ತಾವನೆಯನ್ನು ಕೇಂದ್ರ ಸರಕಾರದ ಅನುಮೋದನೆಗೆ ಸಲ್ಲಿಸಲಾಗಿದೆ ಎಂದು ಸುದ್ದಿಗಾರರ ಪ್ರಶ್ನೆಗಳಿಗೆ ಬಂದರು ಸಚಿವರು ಪ್ರತಿಕ್ರಿಯಿಸಿದರು.
ಮಂಗಳೂರು ಹಳೆ ಬಂದರ್ನ 2ನೆ ಹಂತದ ಧಕ್ಕೆ ನಿರ್ಮಾಣ ಕಾಮಗಾರಿಯನ್ನು 9.66 ಕೋಟಿ ರೂ. ವೆಚ್ಚದಲ್ಲಿ ಹಮ್ಮಿಕೊಳ್ಳಲಾಗಿದ್ದು, 150 ಮೀ. ಉದ್ದದ ದಕ್ಕೆ ನಿರ್ಮಾಣದ ಕಾಮಗಾರಿ ಮುಕ್ತಾಯದ ಹಂತದಲ್ಲಿದೆ. ಮಂಗಳೂರು ವಾಣಿಜ್ಯ ಬಂದರಿನಲ್ಲಿ 2.44 ಕೋಟಿ ರೂ. ವೆಚ್ಚದ ಬಂದರಿನ ಮೂಲಭೂತ ಸೌಕರ್ಯಗಳ ಉನ್ನತೀಕರಣ ಹಾಗೂ ಡ್ರೆಜ್ಜಿ ಂಗ್ ಕಾಮಗಾರಿಗಳು ಪ್ರಗತಿಯಲ್ಲಿವೆ. ಮಂಗಳೂರಿನ ವಿವಿಧ ಪ್ರದೇಶಗಳಲ್ಲಿ ಒಟ್ಟು 1.33 ಕೋಟಿ ರೂ. ವೆಚ್ಚದಲ್ಲಿ ಕಡವು ಸೇವೆಗಳಿಗಾಗಿ ಜೆಟ್ಟಿಗಳ ನಿರ್ಮಾಣ ಕಾಮಗಾರಿ ಮುಕ್ತಾಯದ ಹಂತದಲ್ಲಿವೆ ಎಂದು ವಿವಿಧ ಯೋಜನೆಗಳ ವಿವರವನ್ನು ಸಚಿವರು ನೀಡಿದರು.
ಲಕ್ಷದ್ವೀಪಕ್ಕೆ ವಾಣಿಜ್ಯ ಜೆಟ್ಟಿ
ಲಕ್ಷದ್ವೀಪಕ್ಕೆ 50 ಕೋಟಿ ರೂ. ವೆಚ್ಚದಲ್ಲಿ ವಾಣಿಜ್ಯ ಜೆಟ್ಟಿ ನಿರ್ಮಾಣಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಲಕ್ಷದ್ವೀಪ ಬಂದರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸಚಿವ ಚಿಂಚನಸೂರು ಹೇಳಿದರು. ಟೆಕ್ಸ್ಟೈಲ್ ಪಾರ್ಕ್ ನಿರ್ಮಾಣಕ್ಕೆ ಸಂಬಂಧಿಸಿ ಐವರು ಮುಂದೆ ಬಂದಿದ್ದು, ಯಾದಗಿರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಜವಳಿ ಪಾರ್ಕ್ ನಿರ್ಮಾಣವಾಗಲಿದೆ ಎಂದು ಸಚಿವ ಚಿಂಚನಸೂರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಉಪಮೇಯರ್ ಕವಿತಾ ವಾಸು, ಇಲಾಖೆಯ ಯೋಜನಾ ಪರಿವೀಕ್ಷಣಾ ಅಧಿಕಾರಿ ಗೋಪಾಲ ನಾಯಕ್, ಬಂದರು ಇಲಾಖೆಯ ನಿರ್ದೇಶಕ ಕ್ಯಾಪ್ಟನ್ ಮೋಹನ್, ವಿಶೇಷ ಅಧಿಕಾರಿ ಡಾ.ಬಸವರಾಜು ಉಪಸ್ಥಿತರಿದ್ದರು.



