
ಬದೌನ್ ಜ.18: ಅತ್ಯಾಚಾರಕ್ಕೆ ಯತ್ನಿಸಿ ವಿಫಲನಾದ ನೀಚ ಪೊಲೀಸ್ ಪೇದೆಯೊಬ್ಬ 17 ವರ್ಷದ ಬಾಲಕಿಯನ್ನು ಪೊಲೀಸ್‌ಠಾಣೆ ಮೇಲಿನಿಂದ ಕೆಳಕ್ಕೆಸೆದ ಪಾಶವೀ ಘಟನೆ ಉತ್ತರ ಪ್ರದೇಶದ ಬದೌನ್‌ನಲ್ಲಿ ನಡೆದಿದೆ. ಆರೋಪಿ ಪೇದೆಯನ್ನು ಪೊಲೀಸರು ಬಂಧಿಸಿದ್ದಾರೆ.
ಮೇಲಿನಿಂದ ಕೆಳಕ್ಕೆ ಬಿದ್ದ ಬಾಲಕಿಯ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಬೆನ್ನೆಲುಬುಗಳು ಮುರಿದಿವೆ. ತೀವ್ರ ರಕ್ತಸ್ರಾವವಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಬಾಲಕಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. 12ನೆ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರಕ್ಕೆ ಯತ್ನಿಸಿ ಕೆಳಕ್ಕೆ ತಳ್ಳಿದ ಘಟನೆ ಜ.15ರಂದು ಉಜ್ಜೈನ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಮನೆಪಾಠಕ್ಕೆ ಹೋಗಿ ವಾಪಸಾಗುತ್ತಿದ್ದಾಗ ಈ ದುಷ್ಟ ಪೇದೆ ನನ್ನ ಮಗಳನ್ನು ಠಾಣೆಗೆ ಕರೆದು, ಮೇಲಕ್ಕೆಳೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಅವಳು ವಿರೋಧಿಸಿದಾಗ ಕೆಳಕ್ಕೆಸೆದಿದ್ದಾನೆ. ಪೇದೆ ಗೌರವ್ ಟೈಟ್ಲರ್ ಇನ್ನೂ ಕೆಲವು ಹುಡುಗಿಯರನ್ನೂ ಚುಡಾಯಿಸುತ್ತಿದ್ದ ಎಂದು ಬಾಲಕಿಯ ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಪೇದೆಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಬಾಲಕಿಯ ಹೇಳಿಕೆ ಪಡೆಯಲು ಪೊಲೀಸರು ಕಾಯುತ್ತಿದ್ದಾರೆ. ಪ್ರಕರಣ ಗಂಭೀರವಾಗಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. 14 ವರ್ಷದ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಇಬ್ಬರು ಪೊಲೀಸ್ ಪೇದೆಗಳನ್ನು ಬಂಧಿಸಿದ ಘಟನೆ ಮಾಸುವ ಮೊದಲೇ ಈ ಘಟನೆ ನಡೆದಿದೆ. ಉತ್ತರ ಪ್ರದೇಶದಲ್ಲಿ ಮಹಿಳೆಯರು ಬಾಲಕಿಯರ ಮೇಲಿನ ಇಂತಹ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಜನರಲ್ಲಿ ಭೀತಿ ಆವರಿಸಿದೆ.