ಕರ್ನಾಟಕ

ಅಂಬಾನಿ, ಅದಾನಿಗಳಿಗಾಗಿ ನೀತಿ: ಬೆಂಗಳೂರಿನಲ್ಲಿ ಕೇಜ್ರಿ­ವಾಲ್‌

Pinterest LinkedIn Tumblr

AAP_2275705g

ಬೆಂಗಳೂರು: ಕೇಂದ್ರ ಸರ್ಕಾರವು ಅಂಬಾನಿ, ಅದಾನಿ­ಉದ್ದಿಮೆ ಸಂಸ್ಥೆಗಳಿಗೆ ನೆರವಾಗುವಂತಹ ಆರ್ಥಿಕ ನೀತಿಗಳನ್ನೇ ರೂಪಿಸುತ್ತಿದೆ ಎಂದು ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರವಿಂದ ಕೇಜ್ರಿ­ವಾಲ್‌ ಆರೋಪಿಸಿ­ದರು.

ಬೆಂಗಳೂರಿನ ಖಾಸಗಿ ಹೋಟೆಲ್‌­ನಲ್ಲಿ ಪಕ್ಷಕ್ಕೆ ದೇಣಿಗೆ ನೀಡಿದವರನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಆಮ್‌ ಆದ್ಮಿ ಪಕ್ಷವು ಜನಸಾಮಾನ್ಯ­ರಿ-ಗಾಗಿ ನೀತಿಗಳನ್ನು ರೂಪಿಸಲಿದೆ’ ಎಂದರು.

ರಾಜಕೀಯ ಪಕ್ಷಗಳ ದೇಣಿಗೆ ಸಂಗ್ರ­ಹದ ಬಗ್ಗೆ ಮಾತನಾಡಿದ ಕೇಜ್ರಿ­ವಾಲ್‌, ‘ಕಳೆದ ಲೋಕಸಭಾ ಚುನಾವಣೆ­ಯಲ್ಲಿ ಬಿಜೆಪಿಯು ಮಾಧ್ಯಮ­ಗಳಲ್ಲಿ ಜಾಹೀ­ರಾತು ನೀಡುವುದಕ್ಕಾಗಿಯೇ ರೂ. 10 ಸಾವಿರ ಕೋಟಿ ಖರ್ಚು ಮಾಡಿದೆ. ಒಟ್ಟು ರೂ. 25 ಸಾವಿರ ಕೋಟಿ ವೆಚ್ಚ ಮಾಡಿದೆ.   ಇದನ್ನು ಕೊಟ್ಟವರು ಯಾರು?’ ಎಂದು ಪ್ರಶ್ನಿಸಿದರು.

‘ಬಿಜೆಪಿ, ಕಾಂಗ್ರೆಸ್‌ ಪಕ್ಷಗಳು ಜನರಿಂದ ದೇಣಿಗೆ ಸಂಗ್ರ­ಹಿ­ಸುವುದಿಲ್ಲ. ಇವುಗಳಿಗೆ ದೇಶದ ನಾಲ್ಕೈದು ಮಂದಿ ಹಣ ಕೊಡುತ್ತಾರೆ. ಅದು ದೇಣಿಗೆ ಅಲ್ಲ. ಬಂಡ­ವಾಳ ಹೂಡಿಕೆ. ಈಗ ರೂ. 20 ಸಾವಿರ ಕೋಟಿ ನೀಡಿದರೆ, ಐದು ವರ್ಷಗಳಲ್ಲಿ ಅವರು ಮೂರು ಲಕ್ಷ ಕೋಟಿ ಸಂಪಾದಿಸುತ್ತಾರೆ. ಸರ್ಕಾರಗಳು ಅವರಿಗೆ ಪೂರಕ­ ನೀತಿಗಳನ್ನೇ  ರೂಪಿಸುತ್ತವೆ’ ಎಂದು ದೂರಿದರು.

‘ಬಿಜೆಪಿಯು ದೆಹಲಿ ಚುನಾವಣೆ ವೆಚ್ಚಕ್ಕಾಗಿ ಅಲ್ಲಿನ ವಿದ್ಯುತ್‌ ಕಂಪೆನಿಗಳ ಮಾಲೀಕರಿಂದ ದುಡ್ಡು ಪಡೆದಿದೆ. ಇದೇ ಕಾರಣಕ್ಕಾಗಿ 24 ಗಂಟೆಗಳ ವಿದ್ಯುತ್‌ ನೀಡುವ ಭರವಸೆಯನ್ನು ಮೋದಿ ಅವರು ದೆಹಲಿಯ ಜನತೆಗೆ ನೀಡಿದ್ದಾರೆ’ ಎಂದು ಹೇಳಿದರು.

‘ಬಿಜೆಪಿ ಮುಖಂಡರು ಚುನಾವಣೆ­ಗಾಗಿ ರೂ. 3 ಸಾವಿರ ಕೋಟಿ ವೆಚ್ಚ ಮಾಡಲು ಹೊರಟಿದ್ದಾರೆ. ನಾವು ಕನಿಷ್ಠ ಕೆಲವು ಕೋಟಿಗಳನ್ನಾದರೂ ಖರ್ಚು ಮಾಡಬೇಕಾ­ಗುತ್ತದೆ. ಅದಕ್ಕೆ ದೇಣಿಗೆ  ಅಗತ್ಯವಾಗಿದೆ’ ಎಂದರು.

‘ರಾಷ್ಟ್ರ ರಾಜಧಾನಿಯಲ್ಲಿ ಕಾಂಗ್ರೆಸ್‌ ಅಸ್ತಿತ್ವ ಕಳೆದು­ಕೊಂಡಿದೆ. ಚುನಾವಣೆ­ಯಲ್ಲಿ ಎಎಪಿ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಇದೆ. ಪಕ್ಷ ಸ್ಪಷ್ಟ ಬಹುಮತ ಪಡೆದು ಸರ್ಕಾರ ರಚಿಸಲಿದೆ. ವಿರೋಧಿ­ಗಳು ಕೂಡ ಇದೇ ಮಾತನ್ನು ಹೇಳುತ್ತಿದ್ದಾರೆ’ ಎಂದು  ಹೇಳಿದರು.
ಭ್ರಷ್ಟಾಚಾರ ಮುಕ್ತ ಆಡಳಿತ ಗುರಿ: ‘49 ದಿನಗಳ ಎಎಪಿ ಆಡಳಿತಾವಧಿ­ಯಲ್ಲಿ ದೆಹಲಿಯಲ್ಲಿ ಲಂಚಗು­ಳಿತನ ಇರಲಿಲ್ಲ. ಜನರು ಸರ್ಕಾರಿ ಅಧಿಕಾರಿ­ಗಳಿಗೆ ತಮ್ಮ ಕೆಲಸಗಳಿಗಾಗಿ ಹಣ ಕೊಡುತ್ತಿರಲಿಲ್ಲ’ ಎಂದರು.

‘ದೇಶದ ಜನರಲ್ಲಿ ಯಾವುದೇ ಸಮಸ್ಯೆ ಇಲ್ಲ. ವ್ಯವಸ್ಥೆಯಲ್ಲಿ ದೋಷ ಇದೆ. ಅದನ್ನು ಸರಿ ಪಡಿಸಬೇಕು. ಪಕ್ಷವು ಈ ನಿಟ್ಟಿನಲ್ಲಿ ಕೆಲಸ ಮಾಡಲಿದೆ’ ಎಂದರು.

‘ಬೊಂಬಾಟ್‌ ಬೆಂಗಳೂರು’ಗೆ ಚಾಲನೆ: ಸ್ಥಳೀಯ ಆಡ­ಳಿ­ತದಲ್ಲಿ ನೀತಿ ರೂಪಿಸುವ ಪ್ರಕ್ರಿಯೆಯ ಚರ್ಚೆಯಲ್ಲಿ ಜನರ ಭಾಗವಹಿಸುವಿಕೆಗೆ ಅವಕಾಶ ನೀಡುವಂತಹ ‘ಬೊಂಬಾಟ್‌ ಬೆಂಗಳೂರು’ ಎಂಬ ವಿಶಿಷ್ಟ ಚರ್ಚಾ ವೇದಿಕೆಗೆ ಕೇಜ್ರಿವಾಲ್‌ ಅವರು ಇದೇ ಸಂದರ್ಭದಲ್ಲಿ ಚಾಲನೆ ನೀಡಿದರು.

200 ದಾನಿಗಳೊಂದಿಗೆ ಭೋಜನ, 25 ಜನರೊಂದಿಗೆ ಸೆಲ್ಫಿ!

ಒಂದೇ ದಿನದಲ್ಲಿ ಅರವಿಂದ ಕೇಜ್ರಿವಾಲ್‌ ಅವರು ಪಕ್ಷಕ್ಕಾಗಿ ಸುಮಾರು ರೂ. 70 ಲಕ್ಷ ದೇಣಿಗೆ ಸಂಗ್ರಹಿಸಿದ್ದಾರೆ ಎಂದು ಎಎಪಿ ಮೂಲಗಳು ತಿಳಿಸಿವೆ. ಕೇಜ್ರಿವಾಲ್‌ ಜೊತೆ ಮಧ್ಯಾಹ್ನದ ಭೋಜನ ಸವಿಯಲು ಬೆಂಗಳೂರಿನ 200 ಮಂದಿ ತಲಾ ರೂ. 20 ಸಾವಿರ ತೆತ್ತು ನೋಂದಣಿ ಮಾಡಿಕೊಂಡಿದ್ದರು.

ಅಲ್ಲದೇ, ಎಎಪಿ ಮುಖ್ಯಸ್ಥರ ಜೊತೆ ಸೆಲ್ಫಿ ತೆಗೆಸಿಕೊಳ್ಳುವುದಕ್ಕಾಗಿ 1,000 ಜನರು ರೂ. 500 ಕೊಟ್ಟು ಮೊದಲೇ ನೋಂದಣಿ ಮಾಡಿಕೊಂಡಿದ್ದರು. ಈ ಪೈಕಿ, ಕೇವಲ 25 ಮಂದಿಗೆ ಮಾತ್ರ ಸೆಲ್ಫಿಗೆ ಅವಕಾಶ ಸಿಕ್ಕಿತು. ಲಕ್ಕಿ ಡ್ರಾ ಮೂಲಕ ಈ ಅದೃಷ್ಟಶಾಲಿಗಳನ್ನು ಆಯ್ಕೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ­ ಇತರರು ಕೂಡ ಸ್ವಯಂ ಪ್ರೇರಿತರಾಗಿ ತಮ್ಮ ಶಕ್ತಿಯಾನುಸಾರ ದೇಣಿಗೆ ನೀಡಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Write A Comment