ಕನ್ನಡ ವಾರ್ತೆಗಳು

ಕೊಂಕಣಿ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ |ಕೊಂಕಣಿ ಭಾಷೆ ಕೊಂಕಣಿಗರ ಅಭಿಮಾನದ ಭಾಷೆ: ನೃಪತುಂಗ ಪ್ರಶಸ್ತಿ ವಿಜೇತ ಕುಂ.ವೀರಭದ್ರಪ್ಪ

Pinterest LinkedIn Tumblr

konkani_sahitya_sammelana4

ಮಂಗಳೂರು, ಡಿ.21: ಭಾರತದ ಕರೆನ್ಸಿ (ನೋಟು)ಯ ಹದಿನೈದು ಭಾಷೆಗಳಲ್ಲಿ ಆರನೆ ಸ್ಥಾನದಲ್ಲಿರುವ, ಇಪ್ಪತ್ತೆರಡು ಪ್ರಾದೇಶಿಕ ಭಾಷೆಗಳಲ್ಲಿ ಒಂದಾಗಿರುವ ಕೊಂಕಣಿ ಭಾಷೆ ಕೊಂಕಣಿಗರ ಅಭಿಮಾನದ ಭಾಷೆ ಎಂದು ನೃಪತುಂಗ ಪ್ರಶಸ್ತಿ ವಿಜೇತ ಕುಂ. ವೀರಭದ್ರಪ್ಪ ಅಭಿಪ್ರಾಯಿಸಿದ್ದಾರೆ.

ಅವರು ಇಂದು ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ಅಬ್ದುಲ್‌ರಹೀಂ ಇರ್ಶಾದ್ ಸಭಾಂಗಣದ ಲುವಿಸ್ ಮಸ್ಕರೇನ್ಹಸ್ ವೇದಿಕೆಯಲ್ಲಿ ಕೊಂಕಣಿ ಸಾಹಿತ್ಯ ಅಕಾಡಮಿ ಆಶ್ರಯದಲ್ಲಿ ನಡೆದ ಕೊಂಕಣಿ ಸಾಹಿತ್ಯ ಸಮ್ಮೇಳನವನ್ನು ಖಡ್ಗ ರೂಪದಲ್ಲಿದ್ದ ಲೇಖನಿಯನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು.

konkani_sahitya_sammelana1

ಕೊಂಕಣಿ ಭಾಷೆಯಲ್ಲಿ ಕೆಲ ವಾಕ್ಯಗಳ ಮೂಲಕ ಮಾತು ಆರಂಭಿಸಿದ ಅವರು, ಕುಮಾರವ್ಯಾಸನ ಮಹಾಭಾರತದಲ್ಲೂ ಕೊಂಕಣಿ ಶಬ್ದಗಳ ಬಳಕೆಯಾಗಿದ್ದು, ಸ್ಕಂದ ಪುರಾಣದಲ್ಲಿಯೂ ಕೊಂಕಣಿಯ ಉಲ್ಲೇಖವಿದೆ. ಗುಪ್ತರ ಕಾಲದಲ್ಲೂ ಪ್ರಚಲಿತದಲ್ಲಿದ್ದ ಭಾಷೆಗಳಲ್ಲಿ ಕೊಂಕಣಿ ಕೂಡಾ ಒಂದೆಂದು ಶಾಸನಗಳಲ್ಲಿ ಹೇಳಲಾಗಿದೆ. ಇಂತಹ ಕೊಂಕಣಿಯ ಭಾಷೆಯ ಜತೆಗೆ ತುಳು, ಕೊಡವ, ಬ್ಯಾರಿ ಸೇರಿದಂತೆ ಪ್ರಾದೇಶಿಕ ಭಾಷೆಗಳ ಸಂರಕ್ಷಣೆಯನ್ನು ಕರ್ನಾಟಕ ಸರಕಾರ ಮಾಡಬೇಕು. ಗ್ರಾಮಾಂತರ ಪ್ರದೇಶಗಳಲ್ಲಿ ನಿಘಂಟುಗಳನ್ನು ತಯಾರಿಸಬೇಕಾಗಿದೆ ಎಂದು ಅವರು ಹೇಳಿದರು.

konkani_sahitya_sammelana2

 

ಭಾಷೆ ಮತ್ತು ಸಮಾಜ ಪರಸ್ಪರ ಅನ್ಯೋನ್ಯವಾಗಿದ್ದರೆ ಭಾಷೆ ಅವಲಂಬಿತವಾದ ಸಮಾಜ ಬೆಳೆಯಲು ಸಾಧ್ಯ. ಸಮಾಜ ಬೆಳೆದರೆ ಅದನ್ನು ಅವಲಂಬಿಸಿರುವ ಭಾಷೆ ಬೆಳೆಯುತ್ತದೆ. ಕನ್ನಡಕ್ಕೆ ಹೊಂದಿಕೊಂಡು ನೂರಕ್ಕೂ ಅಧಿಕ ಪ್ರಾದೇಶಿಕ ಭಾಷೆಗಳಿವೆ. ಎಲ್ಲಾ ಭಾಷೆಗಳನ್ನು ತನ್ನೆಡೆಗೆ ಸೆಳೆದು ಪೋಷಿಸುವ ಗುಣ ಕನ್ನಡದ್ದು. ಇಂತಹ ಭಾಷಾ ಸಹಿಷ್ಣುತೆ ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ ಸೇರಿದಂತೆ ಬೇರೆಲ್ಲಿಯೂ ಕಾಣಲು ಸಾಧ್ಯವಿಲ್ಲ ಎಂದವರು ಕನ್ನಡ ನಾಡಿನ ವೈಶಿಷ್ಟವನ್ನು ಬಣ್ಣಿಸಿದರು.

konkani_sahitya_sammelana3

 

ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ ಸ್ವಾಗತಿಸಿ, ಮುಂದಿನ ಪೀಳಿಗೆಗೆ ಕೊಂಕಣಿ ಭಾಷೆ ಯನ್ನು ಉಳಿಸಬೇಕಾದರೆ ಶಾಲಾ ಕಾಲೇಜು ಮಟ್ಟದಲ್ಲಿ ಕೊಂಕಣಿಯಲ್ಲಿ ಶಿಕ್ಷಣ ನೀಡುವುದು ಅನಿವಾರ್ಯ ಎಂದರು.

konkani_sahitya_sammelana5

 

ಈಗಾಗಲೇ ಅಕಾಡಮಿ ವತಿಯಿಂದ ಪ್ರೌಢಶಾಲೆ, ಕಾಲೇಜುಗಳಲ್ಲಿ ಕೊಂಕಣಿ ಐಚ್ಛಿಕ ಭಾಷೆಯಾಗಿ ಕಲಿಸಲಾಗುತ್ತಿದೆ. ಸಾಹಿತ್ಯ ಕ್ಷೇತ್ರದಲ್ಲಿ ಸ್ವಲ್ಪ ಮಟ್ಟಿನ ಸಾಧನೆಯಾಗಿದ್ದರೂ ಮಾಧ್ಯಮ ಮತ್ತು ಸಿನೆಮಾ ಕ್ಷೇತ್ರದಲ್ಲಿ ಕೊಂಕಣಿ ಬಹಳಷ್ಟು ಹಿಂದುಳಿದಿದೆ ಎಂದು ಅವರು ಹೇಳಿದರು.

konkani_sahitya_sammelana6

 

ಈ ಸಂದರ್ಭ ಎಡ್ವಿನ್ ಜೆ.ಎಫ್.ಡಿಸೋಜರ ‘ಉಣ್ಯಾ ಭಾವಾಡ್ತಾಚೆ’ ಹಾಗೂ ಆ್ಯಂಡ್ರೂ ಎಲ್. ಡಿಕುನ್ನಾರ ‘ಆಯೆರಾಚೊ ಬುಕ್’ ಕೃತಿಗಳನ್ನು ಅನಾವರಣಗೊಳಿಸಿ ಲೇಖಕರನ್ನು ಅಭಿನಂದಿಸಲಾಯಿತು.

konkani_sahitya_sammelana7 konkani_sahitya_sammelana8

 

ಎಡ್ವಿನ್ ನೆಟ್ಟೊ ಅಧ್ಯಕ್ಷತೆ ವಹಿಸಿದ್ದರು. ಧಾರವಾಡದ ಕರ್ನಾಟಕ ವಿಶ್ವ ವಿದ್ಯಾನಿಲಯದ ಸಹ ಪ್ರಾಧ್ಯಾಪಕಿ ಡಾ.ಶೋಭಾ ಎಸ್.ನೀಲಾವರ್, ಬಿಷಪ್ ಪ್ರತಿನಿಧಿ ರೆ.ಫಾ. ಮೊನ್ಸಿಂಜರ್ ಡೆನಿಸ್ ಮೊರಾಸ್ ಪ್ರಭು, ಬಸ್ತಿ ವಾಮನ ಶೆಣೈ, ರಿಜಿಸ್ಟ್ರಾರ್ ಡಾ.ದೇವದಾಸ್ ಪೈ ಉಪಸ್ಥಿತರಿದ್ದರು.

ಸಮ್ಮೇಳನದ ಸಂಚಾಲಕ ಸಿರಿಲ್ ಜೆ.ಎಸ್.ತಾಕೊಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ವಿತೊರಿ ಕಾರ್ಕಳ ಕಾರ್ಯಕ್ರಮ ನಿರೂಪಿಸಿದರು.

Write A Comment