ಕರ್ನಾಟಕ

ಸುಗಮ ಕಲಾಪಕ್ಕಾಗಿ ಇಂದು ಸದನದ ನಾಯಕರ ಸಭೆ: ಪ್ರತಿಭಟನೆ ಕೈ ಬಿಟ್ಟು ಚರ್ಚೆಗೆ ಬನ್ನಿ: ಸ್ಪೀಕರ್ ಮನವಿ

Pinterest LinkedIn Tumblr

speaker

ಬೆಳಗಾವಿ, ಡಿ. 8: ಹದಿನಾಲ್ಕನೆ ವಿಧಾನ ಸಭೆಯ ಐದನೆಯ ಅಧಿವೇಶನದ ಕಲಾಪವನ್ನು ಸುಮಗವಾಗಿ ನಡೆಸಿ ಸದ್ಬಳಕೆ ಮಾಡಿಕೊಳ್ಳುವ ಕುರಿತಂತೆ ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪಅವರು ಡಿಸೆಂಬರ್ 9ರಂದು ಸದನದ ನಾಯಕರ ಸಭೆಯನ್ನು ಕರೆದಿದ್ದಾರೆ.

ಇಲ್ಲಿನ ಸುವರ್ಣ ಸೌಧದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಬಹಿರಂಗಪಡಿಸಿದ ಕಾಗೋಡು ತಿಮ್ಮಪ್ಪ, ಮಂಗಳವಾರದಿಂದ ಹತ್ತು ದಿನಗಳ ಕಾಲ ನಡೆಯಲಿರುವ ಕಲಾಪಗಳ ವಿವರಗಳನ್ನು ನೀಡಿದ ಅವರು ಪ್ರತಿದಿನವೂ ಪ್ರಶ್ನೋತ್ತರ ಕಲಾಪ ಇರುತ್ತದೆ ಎಂದರು.

ವಂದೇ ಮಾತರಂ ಗೀತೆಯೊಂದಿಗೆ ಪ್ರಾರಂಭಗೊಳ್ಳಲಿರುವ ಸಭೆಯ ಕಲಾಪದಲ್ಲಿ ಕಳೆದ ಅಧಿವೇಶನದಿಂದ ಈ ಅಧಿವೇಶನದ ಅವಧಿಯಲ್ಲಿ ಅಗಲಿದ ಸದಸ್ಯರು ಹಾಗೂ ವಿವಿಧ ಕ್ಷೇತ್ರದ ಗಣ್ಯರಿಗೆ ಸಂತಾಪ ನಿರ್ಣಯ ಅಂಗೀಕರಿಸಲಾಗುವುದು ಎಂದರು.

ಕಲಾಪದ ಅವಧಿ 60ಕ್ಕೂ ಹೆಚ್ಚು ದಿನಗಳ ಕಾಲ ನಡೆಸಬೇಕೆಂದು ಉದ್ದೇಶಿಸಲಾಗಿತ್ತು. ಆದರೆ, ಸರಕಾರ ಹತ್ತು ದಿನಗಳ ಕಾಲ ಕಲಾಪ ನಡೆಸಲು ನಿರ್ಧರಿಸಿದ್ದು, ಈ ಅವಧಿಯಲ್ಲಿ ಈ ಭಾಗದ ಸಮಸ್ಯೆಗಳೂ ಒಳಗೊಂಡಂತೆ ರಾಜ್ಯದ ಜ್ವಲಂತ ಸಮಸ್ಯೆಗಳನ್ನು ಸದನದಲ್ಲಿ ಚರ್ಚೆ ನಡೆಸಿ ಪರಿಹಾರ ಕಂಡು ಹಿಡಿಯಲು ಅವಕಾಶ ಇದೆ ಎಂದು ಅವರು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ಶಾಸನ ಸಭೆ ಶ್ರೇಷ್ಠವಾದ ಚರ್ಚಾ ವೇದಿಕೆಯಾಗಿದೆ. ಈ ವೇದಿಕೆಯಲ್ಲಿ ಜನಹಿತ ಕುರಿತಂತೆ ಚರ್ಚೆ ನಡೆಯಬೇಕು. ಈ ವೇದಿಕೆ ಸದ್ಬಳಕೆಯಾದಲ್ಲಿ ಎಲ್ಲರ ಶ್ರಮ ಸಾರ್ಥಕವಾಗುತ್ತದೆ ಎಂದು ಅವರು ನುಡಿದರು.

ಕಳೆದ ಎಂಟು ಹತ್ತು ವರ್ಷಗಳಲ್ಲಿ ಕಲಾಪದ ಅವಧಿ ಭಾರೀ ಕಡಿಮೆ ಇತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ ನಡೆಯಲಿರುವ ಈ ಹತ್ತು ದಿನಗಳ ಕಲಾಪ ಸೇರಿ 53 ದಿನಗಳ ಕಲಾಪ ನಡೆಯುತ್ತಿರುವುದು ಒಂದು ರೀತಿಯ ದಾಖಲೆಯಾಗಿದೆ. ಇದು ಒಂದು ರೀತಿಯ ಸಮಾಧಾನಕರ ಸಂಗತಿ ಎಂದರು. ರಾಜಧಾನಿಯ ಹೊರಗಡೆ ಅತ್ಯುತ್ತಮ ವೇದಿಕೆ ಸಜ್ಜಾಗಿರು ವುದರಿಂದ ಎಲ್ಲ ಸದಸ್ಯರೂ ಸದನದಲ್ಲಿ ಹಾಜರಿದ್ದು, ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕೆಂದು ಸಭಾಧ್ಯಕ್ಷರು ಸದಸ್ಯರಲ್ಲಿ, ಚುನಾಯಿತ ಪ್ರತಿನಿಧಿಗಳಲ್ಲಿ ಮನವಿ ಮಾಡಿದರು.

ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯಲ್ಲಿ 73 ಸದಸ್ಯರು ಹಾಗೂ ಬೆಳಗಾವಿ ಯಲ್ಲಿ 115 ಸದಸ್ಯರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ರಾಜ್ಯ ವಿಧಾನ ಸಭೆಯ ಕಲಾಪದ ದಿನದಂದೇ ಪ್ರತಿಪಕ್ಷವಾದ ಭಾರತೀಯ ಜನತಾ ಪಕ್ಷವು ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕುವುದಾಗಿ ತಿಳಿಸಿರುವ ಹಿನ್ನೆಲೆಯಲ್ಲಿ, ಬೆಳಗಾವಿ ಜಿಲ್ಲಾಧಿಕಾರಿ ಜಯರಾಂ ಹಾಗೂ ಪೊಲೀಸ್ ಆಯುಕ್ತ ರವಿಕಾಂತೇಗೌಡ ಅವರು ಭದ್ರತೆ ಕುರಿತಂತೆ ಸಕಲ ಸಿದ್ಧತೆ ಮಾಡಿದ್ದಾರೆ.

ಆದಕಾರಣ, ಯಾವುದೇ ಆಂತಕದ ವಾತಾವರಣವಿಲ್ಲ. ಸುಗಮ ಕಲಾಪ ನಡೆಯಲಿದೆ ಎಂದು ಕಾಗೋಡು ತಿಮ್ಮಪ್ಪವಿಶ್ವಾಸ ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ, ಸರಕಾರಿ ಮುಖ್ಯ ಸಚೇತಕ ಪಿ.ಎಂ. ಅಶೋಕ್, ಕಳೆದ ಅಧಿವೇಶನಕ್ಕಿಂತಲೂ ಈ ಬಾರಿ ಅಧಿಕ ಸಂಖ್ಯೆಯಲ್ಲಿ ಶಾಸಕರು ಕಲಾಪ ದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.

Write A Comment