ಮಂಗಳೂರು, ಡಿಸೆಂಬರ್ 1: ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ರಾಜ್ಯ ಮಾಡುವುದೇ ನಮ್ಮ ಮೊದಲ ಗುರಿ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯದ ಉಸ್ತುವಾರಿ ಮುರಲೀಧರ್ ರಾವ್ ಹೇಳಿದ್ದಾರೆ.
ಸೋಮವಾರ ಮಂಗಳೂರಿನಲ್ಲಿ ದ.ಕ.ಜಿಲ್ಲಾ ಬಿಜೆಪಿಯ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದ್ದು, ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರೋಸಿ ಹೋಗಿರುವ ರಾಜ್ಯದ ಜನತೆ ಬದಲಾವಣೆಯನ್ನು ಬಯಸುತ್ತಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕಾಮಾಗಾರಿಗಳು ಕುಂಠಿತಗೊಂಡಿವೆ. ತಮ್ಮ ತಮ್ಮಲ್ಲೇ ಕಚ್ಚಾಡಿಕೊಂಡು ಅಭಿವೃದ್ಧಿ ಕಾರ್ಯದ ಕಡೆ ಗಮನ ಕೊಡದೆ ಕಾಂಗ್ರೆಸ್ ಸರಕಾರವನ್ನು ರಾಜ್ಯದ ಜನತೆಯೇ ನಿರ್ಮೂಲನ ಮಾಡುವ ಮೂಲಕ `ಕಾಂಗ್ರೆಸ್ ಮುಕ್ತ ಕರ್ನಾಟಕ’ ಮಾಡಲಿದ್ದಾರೆ ಎಂದರು.
ಮಹಾರಾಷ್ಟ್ರ ಮತ್ತು ಹರ್ಯಾಣದಲ್ಲಿ ವಿಜಯ ಪತಾಕೆ ಹಾರಿಸಿರುವ ಬಿಜೆಪಿಯ ಮುಂದಿನ ಗುರಿ ಕರ್ನಾಟಕ. ಕರ್ನಾಟಕದಲ್ಲಿ ಕೂಡ ಮುಂದಿನ ದಿನಗಳಲ್ಲಿ ಬಿಜೆಪಿ ಜಯಭೇರಿ ಬಾರಿಸುವ ಮೂಲಕ ಕಾಂಗ್ರೆಸ್ ಮುಕ್ತ ರಾಜ್ಯ ಮಾಡುವುದು ಖಂಡಿತ ಎಂದು ಅವರು ಹೇಳಿದರು.
ರಾಜ್ಯದ ಜನತೆಯ ಹಿತದೃಷ್ಠಿಯಿಂದ ಡಿ.7 ರಂದು ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ಕಾಂಗ್ರೆಸ್ ಸರಕಾರದ ದುರಾಡಳಿತದ ವಿರುದ್ಧ ಬಿಜೆಪಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಅವರು ಹೇಳಿದರು.
ಆರು ಕೋಟಿಗೂ ಹೆಚ್ಚು ಸದಸ್ಯತ್ವ ಗುರಿ :
ಒಂದು ಮಿಸ್ ಕಾಲ್ ನೀಡುವುದರ ಮೂಲಕ ಸದಸ್ಯತ್ವ ನೀಡುವ ಪಕ್ಷದ ಹೊಸ ಪ್ರಯೋಗಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈಗಾಗಲೇ 1 ಕೋಟಿ ಸದಸ್ಯರ ನೋಂದಾವಣೆ ಆಗಿದ್ದು, ಚೀನಾದ ಕಮ್ಯುನಿಸ್ಟ್ ಪಕ್ಷದ ಸದಸ್ಯತ್ವದ ದಾಖಲೆ(6 ಕೋಟಿ)ಯನ್ನು ಮುರಿಯುವ ಗುರಿ ಹಾಕಿಕೊಳ್ಳಲಾಗಿದೆ ಎಂದು ಮುರಲೀಧರ್ ಹೇಳಿದರು.ಈ ಬಾರಿಯ ಚುನಾವಣೆಯಲ್ಲಿ ಪಕ್ಷವು ಒಟ್ಟು 17 ಕೋಟಿ ಮತಗಳನ್ನು ಗಳಿಸಿದ್ದು, ಇದು ಕಳೆದ ಚುನಾವಣೆಯಲ್ಲಿ ಪಕ್ಷ ಗಳಿಸಿದ ಒಟ್ಟು ಮತಗಳಿಗಿಂತ 9 ಕೋಟಿ ಅಧಿಕವಾಗಿದೆ. ಮಾರ್ಚ್ 31, 2015 ನಂತರ ಬಿಜೆಪಿ ವಿಶ್ವದಲ್ಲೇ ಅತೀ ದೊಡ್ಡ ಪಕ್ಷವಾಗಿ ಮೂಡಿ ಬರಲಿದೆ ಎಂದು ಅವರು ತಿಳಿಸಿದರು.
ಸದಸ್ಯತ್ವ ನೋಂದಾವಣೆಯಲ್ಲಿ ದೇಶದಲ್ಲೇ ಕರ್ನಾಟಕ ನಂ.1 ಆಗಿದ್ದು, ಜಿಲ್ಲಾವಾರು ಪ್ರಕಾರ ದಕ್ಷಿಣ ಕನ್ನಡ ನಂ.1 ಜಿಲ್ಲೆಯಾಗಿದೆ.ದೇಶದ ಯಾವ ಯಾವ ಭಾಗಗಳಲ್ಲಿ ಬಿಜೆಪಿ ಕ್ಷೀಣವಾಗಿದೆಯೋ ಆ ರಾಜ್ಯಗಳತ್ತ ಹೆಚ್ಚಿನ ಗಮನ ಕೇಂದ್ರೀಕರಿಸಲಾಗುವುದು. ತಮಿಳುನಾಡು, ತೆಲಂಗಾಣ, ಕೇರಳ, ಆಂಧ್ರ ಪ್ರದೇಶ, ಈಶಾನ್ಯ ರಾಜ್ಯಗಳಾದ ಪಶ್ಚಿಮ ಬಂಗಾಲ, ಒರಿಸ್ಸಾ, ಅಸ್ಸಾಂ ರಾಜ್ಯಗಳಲ್ಲಿ ಪಕ್ಷವನ್ನು ಬಲಪಡಿಸುವ ಗುರಿ ಹಾಕಿಕೊಳ್ಳಲಾಗಿದೆ ಎಂದರು.
ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಬಂಗಾಳ, ಅಸ್ಸಾಂ ಮತ್ತು ಒಡಿಶಾ, ಪೂರ್ವ ರಾಜ್ಯಗಳು ಸೇರಿದಂತೆ “ಬಿಜೆಪಿ ದುರ್ಬಲವಾಗಿರುವ ರಾಜ್ಯಗಳಲ್ಲಿ ಬಿಜೆಪಿಯನ್ನು ಬಲಿಷ್ಟ ಪಡಿಸುವುದಕ್ಕೆ ಗಮನ ಹರಿಸಲಾಗಿದೆ. ಈ ರೀತಿ ಪಕ್ಷವನ್ನು ಬಲವರ್ಧನೆ ಮಾಡಿ ನರೇಂದ್ರ ಮೋದಿ ಅವರ ಸ್ಪಷ್ಟ ಪರಿಕಲ್ಪನೆಯೊಂದಿಗೆ ದೇಶವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯಲಾಗುವುದು ಎಂದು ಮುರಲೀಧರ್ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ ನಾಯಕ್, ಮಾಜಿ ಶಾಸಕ ಯೋಗೀಶ್ ಭಟ್, ನಾಗರಾಜ ಶೆಟ್ಟಿ, ಪಕ್ಷದ ಪ್ರಮುಖರಾದ ಸಂಜೀವ ಮಠಂದೂರು, ಕಿಶೋರ್ ರೈ, ಶೈಲಜಾ ಭಟ್, ಡಾ.ಭರತ್ ಶೆಟ್ಟಿ, ದಿವಾಕರ ಸಾಮಾನಿ, ಸಂಜಯ್ ಪ್ರಭು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.








