ವಿಶಾಖಪಟ್ಟಣ, ಅ.15: ಉತ್ತರ ಆಂಧ್ರದ ಕರಾವಳಿ ಜಿಲ್ಲೆಗಳಲ್ಲಿ ಹುದ್‌ಹುದ್ ಚಂಡಮಾರುತದ ಪ್ರಕೋಪದಿಂದ 70 ಸಾವಿರ ಕೋಟಿ ರೂ.ನಷ್ಟು ಹಾನಿಯಾಗಿದೆಯೆಂದು ಪ್ರಾಥಮಿಕ ವರದಿಗಳು ಅಂದಾಜಿಸಿದ್ದರೂ, ನಾಶ, ನಷ್ಟದ ನಿಖರ ಮೊತ್ತವನ್ನು ಇನ್ನಷ್ಟೇ ಲೆಕ್ಕ ಹಾಕಬೇಕಾಗಿದೆಯೆಂದು ಆಂಧ್ರಪ್ರದೇಶದ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ತಿಳಿಸಿದ್ದಾರೆ.
ಚಂಡಮಾರುತದ ಹಾವಳಿಗೆ ತತ್ತರಿಸಿದ ಜಿಲ್ಲೆಗಳಲ್ಲಿ ಪರಿಸ್ಥಿತಿ ಇನ್ನೂ ಗಂಭೀರವಾಗಿದೆ. ವಿದ್ಯುತ್ ಪೂರೈಕೆ ವ್ಯವಸ್ಥೆ ಯನ್ನು ಸಹಜ ಸ್ಥಿತಿಗೆ ತರಲು ಎಲ್ಲ ರೀತಿಯ ಪ್ರಯತ್ನವನ್ನು ನಡೆಸಲಾಗುತ್ತಿದೆಯೆಂದು ಅವರು ಹೇಳಿದ್ದಾರೆ.
ಚಂಡಮಾರುತದಿಂದ ಜರ್ಝರಿತವಾಗಿರವ ವಿಶಾಖಪಟ್ಟಣದ ವಿವಿಧ ಪ್ರದೇಶಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡುತ್ತಿದ್ದ ನಾಯ್ಡು, ‘‘ಚಂಡಮಾರುತದಿಂದ ಉಂಟಾಗಿರುವ ಹಾನಿ ಹಾಗೂ ನಷ್ಟವನ್ನು ಅಂದಾಜಿಸುವುದು ತೀರಾ ಕಷ್ಟ. ಉಂಟಾಗಿರುವ ನಾಶ, ನಷ್ಟದ ಮೊತ್ತ 60 ಸಾವಿರ ಕೋಟಿಯೇ ಅಥವಾ 70 ಸಾವಿರ ಕೋಟಿಯೇ ಎಂಬ ಬಗ್ಗೆ ಇನ್ನಷ್ಟೇ ನಿಖರವಾದ ವರದಿಗಳು ಬರಬೇಕಿವೆ. ಈಗಲೇ ಈ ಬಗ್ಗೆ ಸರಿಯಾದ ಅಂಕಿಸಂಖ್ಯೆಗಳನ್ನು ನೀಡಲು ಸಾಧ್ಯವಿಲ್ಲ’’ ಎಂದರು. ಚಂಡಮಾರುತ ಬಾಧಿತ ಪ್ರದೇಶಗಳಲ್ಲಿ ರಕ್ಷಣೆ ಹಾಗೂ ಪರಿಹಾರ ಕಾರ್ಯಾಚರಣೆಗಳನ್ನು ನಡೆಸುವುದಕ್ಕೆ ಮಾತ್ರವೇ ಸರಕಾರವು ತಕ್ಷಣಕ್ಕೆ ಆದ್ಯತೆ ನೀಡುವುದಾಗಿ ನಾಯ್ಡು ಹೇಳಿದರು.
ಕಳೆದ ಮೂರು ದಿನಗಳಿಂದ ಹುದ್‌ಹುದ್ ಚಂಡಮಾರುತದ ಪ್ರಕೋಪಕ್ಕೆ ನಡುಗಿದ್ದ ವಿಶಾಖಪಟ್ಟಣಂ ಬುಧವಾರ ನಿಧಾನವಾಗಿ ಸಹಜತೆಯತ್ತ ಮರಳಲಾರಂಭಿಸಿದೆ. ವಿದ್ಯುತ್, ನಳ್ಳಿ ನೀರು ವ್ಯವಸ್ಥ್ಥೆಗಳನ್ನು ಮರುಸ್ಥಾಪಿಸಲಾಗುತ್ತಿದೆ. ಸಾರ್ವಜನಿಕ ಸಾರಿಗೆ ಬಸ್‌ಗಳೂ ರಸ್ತೆಗಿಳಿಯಲಾರಂಭಿಸಿವೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಉತ್ತರ ಆಂಧ್ರ ಕರಾವಳಿಯ ಜಿಲ್ಲೆಗಳಾದ ಶ್ರೀಕಾಕುಳಂ, ವಿಜಯನಗರ ಹಾಗೂ ವಿಶಾಖಪಟ್ಟಣಂಗಳಲ್ಲಿ ಚಂಡಮಾರುತ ಅಪ್ಪಳಿಸಿದ ಬಳಿಕ ಸಾವಿರಾರು ಮರಗಳು ಬುಡಮೇಲಾಗಿ ,ಟ್ರಾನ್ಸ್‌ಮಿಶನ್ ಲೈನ್‌ಗಳ ಮೇಲೆ ಬಿದ್ದ ಪರಿಣಾಮವಾಗಿ ವಿದ್ಯುತ್ ಪೂರೈಕೆ ಸಂಪೂರ್ಣವಾಗಿ ಕಡಿದುಹೋಗಿತ್ತು.ಮೊಬೈಲ್ ಟವರ್‌ಗಳೂ ಕುಸಿದುಬಿದ್ದಿರುವ ಪರಿಣಾಮವಾಗಿ ಮೊಬೈಲ್ ಸಂಪರ್ಕ ಜಾಲವೂ ಸ್ಥಗಿತಗೊಂಡಿದೆ.
ಏತನ್ಮಧ್ಯೆ ವಿಶಾಖಪಟ್ಟಣಂನಲ್ಲಿ ಹಾಲು, ಬ್ರೆಡ್ ಮತ್ತಿತರ ದೈನಂದಿನ ಆವಶ್ಯಕ ಆಹಾರವಸ್ತುಗಳ ಅಭಾವ ತಲೆದೋರಿದೆ. ಪರಿಹಾರ ಕಾರ್ಯಾಚರಣೆಗಳ ಮೇಲುಸ್ತುವಾರಿ ನೋಡಿಕೊಳ್ಳಲು ವಿಶಾಖಪಟ್ಟಣಂನಲ್ಲಿ ಮೊಕ್ಕಾಂ ಹೂಡಿರುವ ಚಂದ್ರಬಾಬು ನಾಯ್ಡು ಅವರು, ಚಂಡಮಾರುತ ಸಂತ್ರಸ್ತರಿಗೆ ಅಕ್ಕಿ, ತೊಗರಿಬೇಳೆ, ಖಾದ್ಯ ಎಣ್ಣೆ ಹಾಗೂ ತರಕಾರಿ ಮತ್ತಿತರ ಆಹಾರ ವಸ್ತುಗಳ ಪ್ಯಾಕೇಜ್‌ಗಳನ್ನು ಪೂರೈಕೆ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಈ ನಡುವೆ ದೈನಂದಿನ ಆವಶ್ಯಕತೆಯ ಆಹಾರ ವಸ್ತುಗಳನ್ನು ಅಂಗಡಿ ಮಾಲಕರು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆಂಬ ದೂರುಗಳು ಕೇಳಿಬಂದಿರುವ ಹಿನ್ನೆಲೆಯಲ್ಲಿ, ಮುಖ್ಯಮಂತ್ರಿಯವರು ಸಂತ್ರಸ್ತ ಪ್ರದೇಶಗಳಲ್ಲಿ ತರಕಾರಿಗಳನ್ನು ಅತ್ಯಂತ ಕಡಿಮೆ ಬೆಲೆಗೆ ಮಾರಾಟ ಮಾಡುವಂತೆ ಆದೇಶಿಸಿದ್ದಾರೆ.
ರಸ್ತೆಗಳಿಗೆ ಉರುಳಿಬಿದ್ದ ಮರಗಳು ಮತ್ತಿತರ ಭಗ್ನಾವಶೇಷಗಳನ್ನು ತೆರವುಗೊಳಿಸಲಾಗುತ್ತಿದ್ದು, ವಿಶಾಖಪಟ್ಟಣಂನಲ್ಲಿ ವಾಹನ ಸಾರಿಗೆ ಪುನಾರಂಭಗೊಂಡಿದೆೆ ಹಾಗೂ ಗ್ರಾಮಾಂತರ ಪ್ರದೇಶಗಳಿಂದ ಹಾಲು ಮತ್ತು ತರಕಾರಿಗಳು ಬರತೊಡಗಿವೆಯೆಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯ ಕೇಂದ್ರ ರೈಲ್ವೆಯು ವಿಜಯವಾಡ-ವಿಶಾಖಪಟ್ಟಣಂ ವಿಭಾಗದ ರೈಲು ಹಳಿಗಳಲ್ಲಿ ಉಂಟಾಗಿದ್ದ ಬಿರುಕುಗಳನ್ನು ಸರಿಪಡಿಸಿದ ಬಳಿಕ ವಿಶಾಖಪಟ್ಟಣಂಗೆ ರೈಲು ಸಂಚಾರ ಪುನಾರಂಭಗೊಂಡಿದೆ.
ಭಾರೀ ಮಳೆ ಹಾಗೂ 180 ಕಿ.ಮೀ. ವೇಗದಲ್ಲಿ ಬೀಸುತ್ತಿದ್ದ ಗಾಳಿಯೊಂದಿಗೆ ಉತ್ತರ ಆಂಧ್ರ ಕರಾವಳಿಗೆ ಅಪ್ಪಳಿಸಿದ ಹುದ್ ಹುದ್ ಚಂಡಮಾರುತವು ಎಣಿಕೆಗೂ ಮೀರಿದ ನಾಶನಷ್ಟವನ್ನುಂಟು ಮಾಡಿದೆ.
ಚಂಡಮಾರುತ ಪೀಡಿತ ಜಿಲ್ಲೆಗಳಲ್ಲಿ ಮರಗಳು ಹಾಗೂ ವಿದ್ಯುತ್, ಟೆಲಿಫೋನ್ ಕಂಬಗಳು ನೆಲಕ್ಕುರುಳಿ ಬಿದ್ದಿರುವ ದೃಶ್ಯಗಳು ಎಲ್ಲೆಲ್ಲೂ ಕಂಡುಬರುತ್ತಿವೆಯೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. 1.35 ಲಕ್ಷಕ್ಕೂ ಅಧಿಕ ಮಂದಿ ಚಂಡಮಾರುತ ಸಂತ್ರಸ್ತರಿಗೆ ಪರಿಹಾರ ಶಿಬಿರಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ ಹಾಗೂ 50 ಸಾವಿರಕ್ಕೂ ಅಧಿಕ ಮಂದಿಗೆ ಆಹಾರವನ್ನು ಪೂರೈಕೆ ಮಾಡಲಾಗುತ್ತಿದೆಯೆಂದವರು ತಿಳಿಸಿದರು.