File Photo
ಜಮ್ಮು, ಅ.12: ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿರುವ ಮುಂಚೂಣಿ ಠಾಣೆಗಳ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ಪಾಕಿಸ್ತಾನವು ಮತ್ತೆ ಕದನವಿರಾಮವನ್ನು ಉಲ್ಲಂಘನೆ ಮಾಡಿದೆ.
ಪೂಂಛ್ ಜಿಲ್ಲೆಯ ಬನ್ವಾತ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಮುಂಚೂಣಿ ಠಾಣೆಗಳ ಮೇಲೆ ಶನಿವಾರ ಮಧ್ಯಾಹ್ನ ಒಂದು ಗಂಟೆ ಹೊತ್ತಿಗೆ ಪಾಕಿಸ್ತಾನದ ಪಡೆಗಳು ಗುಂಡು ಹಾರಿಸಿವೆ ಎಂದು ಹಿರಿಯ ಸೇನಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಡಿಯಲ್ಲಿ ಕರ್ತವ್ಯನಿರತವಾಗಿರುವ ಭಾರತೀಯ ಪಡೆಗಳು ಇದಕ್ಕೆ ಪ್ರತಿಯಾಗಿ ಗುಂಡು ಹಾರಿಸಿದ್ದು, ಗುಂಡಿನ ಚಕಮಕಿ ಈಗಲೂ ಮುಂದುವರಿದಿದೆ. ನಮ್ಮ ಕಡೆಯಿಂದ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅವರು ತಿಳಿಸಿದ್ದಾರೆ.
ಕಥುವಾ ಜಿಲ್ಲೆಯ ಹೀರಾನಗರ್ ಸೆಕ್ಟರ್‌ನಲ್ಲಿ ನಾಲ್ಕು ಬಿಎಸ್‌ಎಫ್ ಗಡಿ ಹೊರಠಾಣೆಗಳನ್ನು ಗುರಿಯಾಗಿಸಿಕೊಂಡು ಗುರುವಾರ ರಾತ್ರಿ 20 ನಿಮಿಷಗಳ ಕಾಲ ಪಾಕ್ ಪಡೆಗಳು ಗುಂಡು ಹಾರಿಸಿದ್ದವು. ಅದರ ನಂತರ ಗಡಿ ಪ್ರದೇಶದಲ್ಲಿ ಗುಂಡಿನ ಚಕಮಕಿ ಎರಡು ದಿನ ತಣ್ಣಗಾಗಿತ್ತು.
