ಮನೋರಂಜನೆ

ಇಂದಿನಿಂದ ಭಾರತದಲ್ಲಿ ಸೂಪರ್ ಲೀಗ್ : ಕೋಲ್ಕತಾದಲ್ಲಿ ಚಾಲನೆ |ಎಂಟು ತಂಡಗಳ ಹಣಾಹಣಿ

Pinterest LinkedIn Tumblr

Football_Match_start

ಭಾರತವನ್ನು ಜಾಗತಿಕ ಫುಟ್ಬಾಲ್‌ನ ಶಕ್ತಿಯನ್ನಾಗಿಸುವುದು ಮತ್ತು 2016ರ ಫಿಫಾ ವಿಶ್ವಕಪ್‌ಗೆ ಅರ್ಹತೆಯನ್ನು ಗಿಟ್ಟಿಸಿಕೊಡುವ ದ್ಯೇಯದೊಂದಿಗೆ ಉದಯಿಸಿರುವ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಟೂರ್ನಮೆಂಟ್‌ಗೆ ರವಿವಾರ ಕೋಲ್ಕತಾದಲ್ಲಿ ಚಾಲನೆ ದೊರೆಯಲಿದ್ದು, ಭಾರತದಲ್ಲಿ ಇನ್ನೂ ಎಪ್ಪತ್ತು ದಿನಗಳ ಕಾಲ ಫುಟ್ಬಾಲ್ ಹಬ್ಬ.ಚೊಚ್ಚಲ ಆವೃತ್ತಿಯ ಐಎಸ್‌ಎಲ್‌ನಲ್ಲಿ ಪ್ರಶಸ್ತಿಗಾಗಿ ಎಂಟು ತಂಡಗಳು ಹಣಾಹಣಿ ನಡೆಸಲಿವೆ.

ಜಾಗತಿಕ ಮಟ್ಟದಲ್ಲಿ ಅತ್ಯಂತ ಜನಪ್ರಿಯ ಕ್ರೀಡೆಯಾಗಿರುವ ಫುಟ್ಬಾಲ್ ಭಾರತದಲ್ಲಿ ಪ್ರೋತ್ಸಾಹದ ಕೊರತೆಯಿಂದಾಗಿ ದೊಡ್ಡ ಬೆಳವಣಿಗೆ ಕಂಡಿಲ್ಲ.ಕ್ರಿಕೆಟ್‌ನ ಜನಪ್ರಿಯತೆಯ ಮುಂದೆ ಉಳಿದೆಲ್ಲಾ ಕ್ರೀಡೆಗಳು ತನ್ನ ಅಸ್ತಿತ್ವವನ್ನು ಉಳಿಸಲು ಹೆಣಗಾಡುತ್ತಿವೆ.

ಜಾಗತಿಕ ಮಟ್ಟದಲ್ಲಿ ಭಾರತ ಕ್ರಿಕೆಟ್‌ನಲ್ಲಿ ಸೂಪರ್ ಪವರ್ ರಾಷ್ಟ್ರವಾಗಿದೆ. ವಿಶ್ವ ಕ್ರಿಕೆಟ್‌ನ್ನು ನಿಯಂತ್ರಿಸುವ ಶಕ್ತಿ ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿಗಿದೆ. ಬಿಸಿಸಿಐ ಹುಟ್ಟು ಹಾಕಿದ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್) ಚಿನ್ನದ ಮೊಟ್ಟೆ ಇಡುವ ಕೋಳಿಯಾಗಿದೆ. ದೇಶ ವಿದೇಶದ ಕ್ರಿಕೆಟಿಗರು ಐಪಿಎಲ್ ಮೂಲಕ ಕೈತುಂಬಾ ಹಣ ಸಂಪಾದಿಸಿದ್ದಾರೆ.

ಭಾರತದಲ್ಲಿ ಐಪಿಎಲ್ ಜನಪ್ರಿಯವಾಗಿದ್ದೇ ತಡ ಆಸ್ಟ್ರೇಲಿಯ, ಬಾಂಗ್ಲಾದೇಶ, ಶ್ರೀಲಂಕಾ, ದಕ್ಷಿಣ ಆಫ್ರಿಕ , ಪಾಕಿಸ್ತಾನ ಮತ್ತಿತರ ದೇಶಗಳಲ್ಲಿ ಐಪಿಎಲ್ ಮಾದರಿಯ ಲೀಗ್ ಉದಯಿಸಿದ್ದರೂ, ಅದು ವೀಕ್ಷಕರ ಕೊರತೆ ಮತ್ತು ಹಣಕಾಸಿನ ಸಮಸ್ಯೆಯಿಂ ದಾಗಿ ಅಷ್ಟೇನು ದೊಡ್ಡ ಮಟ್ಟಕ್ಕೆ ಬೆಳೆದಿಲ್ಲ.

ಭಾರತದಲ್ಲಿ ಐಪಿಎಲ್ ಮಾದರಿಯಲ್ಲಿ ಉದಯಿಸಿದ ಬ್ಯಾಡ್ಮಿಂಟನ್, ಹಾಕಿ, ಕಬಡ್ಡಿ ಲೀಗ್‌ಗಳು ಯಶಸ್ವಿಯಾಗಿದ್ದು, ಇದೇ ಮಾದರಿಯಲ್ಲಿ ಫುಟ್ಬಾಲ್‌ನ್ನು ಭಾರತ ದಲ್ಲಿ ಜನಪ್ರಿಯಗೊಳಿಸಲು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಉದಯಿಸಿದೆ.

ಮೊದಲ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್‌ನಲ್ಲಿ ದಿಲ್ಲಿ, ಮುಂಬೈ, ಪುಣೆ, ಕೊಚ್ಚಿ , ಗುವಾಹಟಿ, ಗೋವಾ,ಚೆನ್ನೈ ಕೋಲ್ಕತಾ ತಂಡಗಳು ಪ್ರಶಸ್ತಿಗಾಗಿ ಹಣಾಹಣಿ ನಡೆಸಲಿದೆ. ಬಾಲಿವುಡ್ ತಾರೆಯರು ಮತ್ತು ಖ್ಯಾತ ಕ್ರಿಕೆಟಿಗರು ವಿವಿಧ ತಂಡಗ ಳಲ್ಲಿ ಸಹ ಮಾಲಕರಾಗಿ ಗುರು ತಿಸಿಕೊಂಡು ಭಾರತದಲ್ಲಿ ಫುಟ್ಬಾಲ್‌ನ ಅಭಿವೃದ್ಧಿಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದ್ದಾರೆ. ಫುಟ್ಬಾಲ್‌ನಲ್ಲಿ ಹೆಚ್ಚು ಅಭಿವೃದ್ಧಿ ಸಾಧಿಸಿರುವ ಪ್ರಪಂಚದ ಹಲವು ರಾಷ್ಟ್ರಗಳ ಫುಟ್ಬಾಲ್ ಆಟಗಾರರು ಐಎಸ್‌ಎಲ್‌ನ ವಿವಿಧ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ.

ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಗೋವಾ, ಕೇರಳ ರಾಜ್ಯಗಳಲ್ಲಿ ವೃತ್ತಿಪರ ಫುಟ್ಬಾಲ್ ಲೀಗ್‌ಗಳು ಹಲವು ದಶಕಗಳ ಹಿಂದೆ ಹುಟ್ಟಿಕೊಂಡು ಕಾರ್ಯಾಚರಿ ಸುತ್ತಿದ್ದರೂ, ಅವುಗಳ ವ್ಯಾಪ್ತಿ ಸೀಮಿತವಾಗಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಪ್ರತಿಭಾವಂತ ಫುಟ್ಬಾಲ್ ಆಟಗಾರರಿದ್ದರೂ, ಅವರಿಗೆ ಬೆಳೆಯಲು ತರಬೇತಿ ಹಾಗೂ ಪ್ರೋತ್ಸಾಹ ದೊರೆಯುತ್ತಿಲ್ಲ.ಎಐಎಫ್‌ಎಫ್‌ಗೆ ಇನ್ನೂ ಬಲಿಷ್ಠ ಫುಟ್ಬಾಲ್ ತಂಡವನ್ನು ರೂಪಿಸಲು ಸಾಧ್ಯವಾಗಲಿಲ್ಲ. ಭಾರತದ ರಾಷ್ಟ್ರೀಯ ಫುಟ್ಬಾಲ್ ತಂಡ ನಾನಾ ಕಾರಣಗಳಿಂದಾಗಿ ಸಂಕಷ್ಟದಲ್ಲಿದೆ. ತಂಡದಲ್ಲಿರುವ ಫುಟ್ಬಾಲ್ ತಾರೆಯರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸುವಲ್ಲಿ ವಿಫಲರಾಗಿದ್ದಾರೆ.
ಜಾಗತಿಕ ಮಟ್ಟದಲ್ಲಿ ಫುಟ್ಬಾಲ್‌ನ ಹೀರೊಗಳೆನಿಸಿಕೊಂಡಿರುವ ಮೆಸ್ಸಿ, ರೂನಿ, ನೇಮಾರ್ ಮತ್ತು ರೊನಾಲ್ಡೊ ಭಾರತದಲ್ಲಿ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿ ದ್ದಾರೆ. ಇವರ ಜನಪ್ರಿಯತೆಯ ಮುಂದೆ ಭಾರತದ ಫುಟ್ಬಾಲ್ ಆಟಗಾರರ ಸಾಧನೆ ಮಸುಕಾಗಿದೆ. ತಂಡದ ಬಹುತೇಕ ಮಂದಿ ಆಟಗಾರರು ಇನ್ನೂ ಅಪರಿಚಿತರಾಗಿ ಉಳಿದಿದ್ದಾರೆ.

1950 ಮತ್ತು 1960ರ ದಶಕದಲ್ಲಿ ಭಾರತ ಫುಟ್ಬಾಲ್ ತಂಡ ಒಲಿಂಪಿಕ್ಸ್‌ನಲ್ಲಿ ನಾಲ್ಕನೆ ಸ್ಥಾನ ಪಡೆದಿತ್ತು.ಬರಿಗಾಲಲ್ಲಿ ಆಡುತ್ತಾ ಯಶಸ್ಸು ಗಳಿಸಿದ್ದ ಭಾರತದ ಫುಟ್ಬಾಲ್ ತಂಡ 1950ರಲ್ಲಿ ಬ್ರೆಝಿಲ್‌ನಲ್ಲಿ ನಡೆದ ವಿಶ್ವಕಪ್‌ಗೂ ಅರ್ಹತೆ ಪಡೆದಿತ್ತು. ಆದರೆ ಬರಿಗಾಲಲ್ಲಿ ಆಡಲು ವಿಶ್ವಕಪ್‌ನಲ್ಲಿ ಅವಕಾಶ ಇಲ್ಲದ ಕಾರಣದಿಂದಾಗಿ ವಿಶ್ವಕಪ್ ಆಡುವ ನಿರ್ಧಾರದಿಂದ ಭಾರತ ಹಿಂದೆ ಸರಿಯಿತು.ಎರಡು ಬಾರಿ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಪಡೆದಿದ್ದ ಭಾರತದ ಫುಟ್ಬಾಲ್ ತಂಡ ಬಳಿಕ ದಿನದಿಂದ ದಿನಕ್ಕೆ ಸೊರಗಿತು. ಈಗ ವಿಶ್ವ ಫುಟ್ಬಾಲ್ ರ್ಯಾಂಕಿಂಗ್‌ನಲ್ಲಿ 158ನೆ ಸ್ಥಾನಕ್ಕೆ ತಲುಪಿದೆ.

ಆಲ್ ಇಂಡಿಯಾ ಫುಟ್ಬಾಲ್ ಫೆಡರೇಶನ್‌ನ ಕನಸಿನ ಕೂಸಾಗಿರುವ ಐಎಸ್‌ಎಲ್ ರಿಲಯನ್ಸ್ ಗ್ರೂಪ್‌ನ ಪ್ರಾಯೋಜಕತ್ವದಲ್ಲಿ ಕಾರ್ಯಾಚರಿಸುತ್ತಿದೆ.

ಭಾರತದಲ್ಲಿ ಐಎಸ್‌ಎಲ್ ಮೂಲಕ ಫುಟ್ಬಾಲ್‌ನ್ನು ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಅಖಿಲ ಭಾರತೀಯ ಫುಟ್ಬಾಲ್ ಒಕ್ಕೂಟ (ಎಐಎಫ್‌ಎಫ್) 2010ರಲ್ಲಿ ಐಎಂಜಿ- ರಿಲಯನ್ಸ್ ಸಂಸ್ಥೆಯ ಜೊತೆ 15 ವರ್ಷಗಳ ಅವಧಿಗೆ 700 ಕೋಟಿ ರೂ.ಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಒಂದು ರೀತಿಯಲ್ಲಿ ಐಎಂಜಿ-ರಿಲಯನ್ಸ್ ಸಂಸ್ಥೆಯು ಭಾರತದ ಫುಟ್ಬಾಲ್‌ನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದೆ.

ಕೋಟ್ಯಂತರ ಮಂದಿ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿರುವ ಭಾರತದಲ್ಲಿ ಫುಟ್ಬಾಲ್‌ನ್ನು ತಳಮಟ್ಟದಿಂದಲೇ ಬೆಳೆಸುವ ಐಎಸ್‌ಎಲ್ ಯೋಜನೆ ಯಶಸ್ವಿಯಾಗಬಹುದೇ?ಎನ್ನುವ ಪ್ರಶ್ನೆ ಮೂಡುವುದು ಸಹಜ. ಇತರ ದೇಶಗಳಲ್ಲಿ ಹಿಂದೆ ಫುಟ್ಬಾಲ್‌ನ್ನು ಜನಪ್ರಿ ಯತೆಗೊಳಿಸುವ ನಿಟ್ಟಿನಲ್ಲಿ ಹುಟ್ಟಿಕೊಂಡ ಫುಟ್ಬಾಲ್ ಲೀಗ್‌ಗಳು ತನ್ನ ಉದ್ದೇಶವನ್ನು ಈಡೇರಿಸುವಲ್ಲಿ ಯಶಸ್ವಿಯಾಗಿದೆ. ಅಮೆರಿಕದಲ್ಲಿ 1970 ಮತ್ತು 1990ರ ದಶಕದಲ್ಲಿ ಹುಟ್ಟಿಕೊಂಡ ನಾರ್ತ್ ಅಮೆರಿಕನ್ ಸಾಕರ್ ಲೀಗ್ ಮತ್ತು ಎಂಎಲ್‌ಎಸ್, 1990ರಲ್ಲಿ ಜಪಾನ್‌ನಲ್ಲಿ ಜೆ -ಲೀಗ್ ಮತ್ತು 2000ರಲ್ಲಿ ಆಸ್ಟ್ರೇಲಿಯದಲ್ಲಿ ಉದಯಿಸಿದ ಎ- ಲೀಗ್ ಈ ನಿಟ್ಟಿನಲ್ಲಿ ಯಶಸ್ವಿಯಾಗಿದೆ. ಭಾರತದಲ್ಲಿ ತಡವಾಗಿ ಉದಯಿಸಿರುವ ಐಎಸ್‌ಎಲ್ ಭಾರತದ ಫುಟ್ಬಾಲ್‌ನ ದೌರ್ಬಲ್ಯವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ.

ಸೂಪರ್ ಲೀಗ್‌ನ ತಂಡಗಳು
ಅಟ್ಲಾಟಿಕೊ ಡಿ ಕೋಲ್ಕತಾ (ಕೋಲ್ಕತಾ) / ಚೆನ್ನೈಯಿನ್ ಎಫ್‌ಸಿ ( ಚೆನ್ನೈ) / ಡೆಲ್ಲಿ ಡೈನಮೋಸ್ (ದಿಲ್ಲಿ)  /ಎಫ್‌ಸಿ ಗೋವಾ (ಗೋವಾ) / ಕೇರಳ ಬ್ಲಾಸ್ಟರ್ಸ್‌/ ಎಫ್‌ಸಿ ( ಕೊಚ್ಚಿ)/ ಮುಂಬೈ ಸಿಟಿ ಎಫ್‌ಸಿ (ಮುಂಬೈ)  / ನಾರ್ತ್ ಈಸ್ಟ್ ಯುನೈಟೆಡ್ (ಗುವಾಹಟಿ)  / ಎಫ್‌ಸಿ ಪುಣೆ ಸಿಟಿ (ಪುಣೆ).

ಇಂಡಿಯನ್ ಸೂಪರ್ ಲೀಗ್ ದಿನಾಂಕ: ಅ.12,2014-ಡಿ.20, 2014.
ತಂಡಗಳು :8
ಒಟ್ಟು ಪಂದ್ಯಗಳು: 61 ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಪ್ರಶಸ್ತಿಯ ಮೊತ್ತ 15 ಕೋಟಿ ರೂ.
ಚಾಂಪಿಯನ್: 8 ಕೋಟಿ ರೂ.
ಎರಡನೆ ಸ್ಥಾನ: 4 ಕೋಟಿ ರೂ.
ಸೆಮಿಫೈನಲ್‌ನಲ್ಲಿ ಸೋತ ಎರಡು ತಂಡಗಳಿಗೆ ತಲಾ 1.5 ಕೋಟಿ ರೂ.

ಧೋನಿಯ ಫುಟ್ಬಾಲ್ ಸೇವೆ !

ಐಪಿಎಲ್‌ನಲ್ಲಿ ಚೆನ್ನೈ ತಂಡದ ನಾಯಕರಾಗಿ ಚೆನ್ನೈನ ಕ್ರಿಕೆಟ್ ಅಭಿಮಾನಿಗಳಿಗೆ ಹೆಚ್ಚು ಹತ್ತಿರವಾಗಿರುವ ಟೀಮ್ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿ ಇದೀಗ ಇಂಡಿಯನ್ ಸೂಪರ್ ಲೀಗ್ ತಂಡದ ಸಹ ಮಾಲಕರಾಗಿ ಗಮನ ಸೆಳೆದಿದ್ದಾರೆ.

ಹಾಗೆ ನೋಡಿದರೆ ಧೋನಿ ಕ್ರಿಕೆಟ್‌ಗೆ ಬಂದದ್ದೇ ಆಕಸ್ಮಿಕ. ಚಿಕ್ಕವರಿದ್ದಾಗ ಅಂದರೆ ಶಾಲಾ ದಿನಗಳಲ್ಲಿ ಫುಟ್ಬಾಲ್‌ನಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡಿದ್ದ ಧೋನಿ ಉತ್ತಮ ಗೋಲು ಕೀಪರ್ ಆಗಿದ್ದರು. ಗೋಲು ಕೀಪಿಂಗ್‌ನಲ್ಲಿ ಧೋನಿಯ ಕೈಚಳಕವನ್ನು ಗಮನಿಸಿದ್ದ ಕೋಚ್ ಅವರಿಗೆ ಕ್ರಿಕೆಟ್‌ನಲ್ಲಿ ವಿಕೆಟ್ ಕೀಪಿಂಗ್‌ನ ಕಡೆಗೆ ಗಮನ ಹರಿಸುವಂತೆ ಸಲಹೆ ನೀಡಿದ್ದರು. ಕ್ರಿಕೆಟ್‌ನ ಕಡೆಗೆ ಗಮನ ಹರಿಸಿದ ಧೋನಿ ವಿಕೆಟ್ ಕೀಪರ್ ಆಗಿ ಎತ್ತರಕ್ಕೆ ಬೆಳೆದರು.

ಧೋನಿ ಕ್ರಿಕೆಟ್‌ನಲ್ಲಿ ಬೆಳೆದಿದ್ದರೂ, ಫುಟ್ಬಾಲ್ ಆಡುವ ಹವ್ಯಾಸದಿಂದ ದೂರ ಸರಿಯಲಿಲ್ಲ. ಸಮಯ ಸಿಕ್ಕಿದಾಗ ಫುಟ್ಬಾಲ್ ಆಡುತ್ತಿದ್ದರು. ಧೋನಿ ಐಎಸ್‌ಎಲ್‌ನ ಚೆನ್ನೈ ತಂಡದ ಮೂಲಕ ಭಾರತದ ಫುಟ್ಬಾಲ್‌ನ್ನು ತಳಮಟ್ಟದಿಂದಲೇ ಬೆಳೆಸಲು ಗಮನ ಹರಿಸುವುದಾಗಿ ಹೇಳಿದ್ದಾರೆ.

ವರದಿ ಕೃಪೆ : VB

Write A Comment