
ವರದಿ: ಎಂ.ಇಕ್ಬಾಲ್ ಉಚ್ಚಿಲ, ದುಬೈ
ಫೋಟೋ: ಅಶೋಕ್ ಬೆಳ್ಮಣ್
ದುಬೈ, ಅ.2: ಕಲಾವಿದ ಉಮೇಶ್ ನಂತೂರುರವರ ಸ್ಮಾರಣಾರ್ಥ ದುಬೈಯ ಸಂಗಮ ಕಲಾವಿದರು ಆಯೋಜಿಸಿದ್ದ ‘ಪುಷ್ಪಾಂಜಲಿ’ ಸಂಗೀತ-ನೃತ್ಯ-ಹಾಸ್ಯಮಯ ಕಾರ್ಯಕ್ರಮ ಬಹಳ ಸುಂದರವಾಗಿ ಮೂಡಿಬಂತು.
ದುಬೈಯ ಶೇಖ್ ರಾಶಿದ್ ಆಡಿಟೋರಿಯಂನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದುಬೈಯ ಸ್ಥಳೀಯ ಗಾಯಕರು, ಕಲಾವಿದರು ಹಾಗೂ ನೃತ್ಯಪಟುಗಳು ತಮ್ಮ ಕಲಾನೈಪುಣ್ಯತೆಯನ್ನು ಪ್ರೇಕ್ಷಕರ ಮುಂದಿಟ್ಟರು.











ದುಬೈ ಅಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ನ ಆಡಳಿತ ನಿರ್ದೇಶಕ, ಹೆಸರಾಂತ ಗಾಯಕರಾದ ಹರೀಶ್ ಶೇರಿಗಾರ್, ಅಕ್ಷತಾ ರಾವ್, ಮೆಲ್ವಿನ್ ಡಿಸೋಜ, ಜೋಷಲ್, ಡೋನಿ-ಆಶಾ ಕೊರೇಯಾ, ಮಲ್ಲಿಕಾ, ಜಮೀಲ್, ಗಣೇಶ್ ಪ್ರಸಾದ್ ಸೇರಿದಂತೆ ಹಲವಾರು ಗಾಯಕರು ತಮ್ಮ ಸುಮಧುರ ಕಂಠದ ಮೂಲಕ ಸಂಗೀತದಲೆಯಲ್ಲಿ ತೇಲುವಂತೆ ಮಾಡಿದರು.
ಹಾಸ್ಯ ಕಲಾವಿದ ಚಿದಾನಂದ ಪೂಜಾರಿ ತಂಡದವರ ‘ಕಸಲೋ ಕುಸಲ್’ ಹಾಸ್ಯಪ್ರಹಸನವು ನಗೆಯಹೊನಲು ಹರಿಸಿತು. ಜೊತೆಗೆ ಸ್ಥಳೀಯ ಕಲಾವಿದರಿಂದ ನೃತ್ಯ ಕಾರ್ಯಕ್ರಮವು ಪ್ರದರ್ಶನಕ್ಕೆ ಇನ್ನಷ್ಟು ಮೆರುಗು ನೀಡಿತು.
ಇದಕ್ಕೂ ಮೊದಲು ಕಾರ್ಯಕ್ರಮವನ್ನು ದಿವಂಗತ ಉಮೇಶ್ ನಂತೂರುರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ ಗಣ್ಯಾತಿಗಣ್ಯರು ಚಾಲನೆ ನೀಡಿದರು.

















ಈ ಸಂದರ್ಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಎಂಎಲ್ಸಿ ಐವನ್ ಡಿಸೋಜರನ್ನು ಸನ್ಮಾನಿಸಲಾಯಿತು. ಈ ವೇಳೆ ಮಾತನಾಡಿದ ಅವರು, ಅನಿವಾಸಿ ಭಾರತೀಯರು ತವರಿಗೆ ಬರುವ ವೇಳೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇಂಥವರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಮಂಗಳೂರು ಸೇರಿದಂತೆ ಎಲ್ಲ ಕಡೆಗಳಲ್ಲಿ ಕಚೇರಿಗಳನ್ನು ತೆರುವಂತೆ ಸರಕಾರದ ಮೇಲೆ ಒತ್ತಡ ಹಾಕಲಾಗುವುದು. ಜೊತೆಗೆ ಮುಂದಿನ ಅಧಿವೇಶನದಲ್ಲೂ ಒತ್ತಾಯಿಸುತ್ತೇನೆ ಎಂದರು.
ಮಂಗಳೂರು ಪಾಸ್ಪೋರ್ಟ್ ಕಚೇರಿಯ ಸಮಸ್ಯೆಯನ್ನು ಈಗಾಗಲೇ ಪರಿಹರಿಸಿದ್ದೇನೆ. ಜೊತೆಗೆ ಅನಿವಾಸಿ ಭಾರತೀಯರಿಗೆ ಯಾವುದೇ ರೀತಿಯ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲಾಗುವುದು ಎಂದರು.
















ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಸಿನಿಮಾ-ರಂಗಭೂಮಿ ನಿರ್ದೇಶಕ, ಕಲಾವಿದ ವಿಜಯಕುಮಾರ್ ಕೋಡಿಯಾಲ್ಬೈಲ್, ದುಬೈ ಅಕ್ಮೆ ಬಿಲ್ಡಿಂಗ್ ಮೆಟೀರಿಯಲ್ಸ್ನ ಆಡಳಿತ ನಿರ್ದೇಶಕ ಹರೀಶ್ ಶೇರಿಗಾರ್, ಸಿನಿಮಾ ನಟಿ ತಾರಾ, ಪತ್ರಕರ್ತ ವಾಲ್ಟರ್ ನಂದಳಿಕೆ, ಫೋರ್ಚುನ್ ಗ್ರೂಪ್ ಆಫ್ ಹೊಟೇಲ್ಸ್ನ ಪ್ರವೀಣ್ ಶೆಟ್ಟಿ, ಮೈಕಲ್ ಡಿಸೋಜ, ಉಮೇಶ್ ನಂತೂರುರ ಪತ್ನಿ ಶೈಲಜಾ, ಸಂಘಟಕ ನೊಯೆಲ್ ಅಲ್ಮೇಡಾ ಉಪಸ್ಥಿತರಿದ್ದರು. ನವೀನ್ ಕುಮಾರ್ ಕೊಪ್ಪ ಕಾರ್ಯಕ್ರಮ ನಿರೂಪಿಸಿದರು.
























