ಕರಾವಳಿ

ಕುಂದಾಪುರ | ಚೌತಿಯಂದು ಕುಂಭಾಶಿ ದೇವಸ್ಥಾನದಲ್ಲಿ ಕಳವುಗೈದಿದ್ದ ಚಿನ್ನದ ಸರ ಸ್ವಾಧೀನಪಡಿಸಿಕೊಂಡ ಪೊಲೀಸರು

Pinterest LinkedIn Tumblr

ಕುಂದಾಪುರ: ಸೆ.14 ರಂದು ನಡೆದ ಗಣೇಶ ಚತುರ್ಥಿಯ ದಿನ ಕುಂಭಾಶಿಯ ಶ್ರೀ ವಿನಾಯಕ ದೇವಸ್ಥಾನದೊಳಗೆ ಜನ ಜಂಗುಳಿಯ ಮಧ್ಯೆ ಪ್ರದಕ್ಷಿಣೆ ಹಾಕುತ್ತಿದ್ದಾಗ ಆರೋಪಿಗಳು ಮಹಿಳೆಯ ಚಿನ್ನದ ಸರ ಕಳವು ಮಾಡಿದ್ದು ಚಿನ್ನವನ್ನು ಸ್ವಾಧೀನಕ್ಕೆ ಪಡೆಯುವ ಪ್ರಕ್ರಿಯೆಯನ್ನು ಕುಂದಾಪುರ ಪೊಲೀಸರು ಪೂರ್ಣಗೊಳಿಸಿದ್ದಾರೆ.

ಬೈಂದೂರು ತಾಲೂಕು  ನಾಡ ಗುಡ್ಡೆಯಂಗಡಿ ನಿವಾಸಿ 75 ವರ್ಷ ಪ್ರಾಯದ ಮುತ್ತು‌ ಎನ್ನುವರ ಕುತ್ತಿಗೆಯಲ್ಲಿದ್ದ  ಚಿನ್ನದ ಸರವನ್ನು ಚೌತಿಯಂದು ದುಷ್ಕರ್ಮಿಗಳು ಸುಲಿಗೆ ಮಾಡಿಕೊಂಡು ಹೋಗಿದ್ದ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ವೇಳೆ ಈ ಪ್ರಕರಣದಲ್ಲಿ ಚಿನ್ನದ ಸರವನ್ನು  ದೋಚಿದ್ದ ತಮಿಳುನಾಡು ಮೂಲದ ವಲ್ಲಿಯಮ್ಮ, ದೇವಿ ಅಲಿಯಾಸ್ ತಿಲೋತ್ತಮ, ಪೊನ್ನಿ ಎನ್ನುವರನ್ನು ಕೇರಳ  ರಾಜ್ಯದ ವಯನಾಡು ಜಿಲ್ಲೆಯ ಮಾನಂತವಾಡಿ ತಾಲೂಕಿನ ತಿರುನೆಲ್ಲಿ ಪೊಲೀಸ್‌ ಠಾಣೆಯ ಪೊಲೀಸರು ಬಂಧಿಸಿದ್ದು ತಿಳಿದುಬಂದಿತ್ತು.

ಬಳಿಕ ನಡೆದ ಕಾನೂನು ಪ್ರಕ್ರಿಯೆಯಲ್ಲಿ ಕುಂದಾಪುರ ಪೊಲೀಸ್ ಉಪವಿಭಾಗದ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿಯವರ ನಿರ್ದೇಶನದಂತೆ, ಕುಂದಾಪುರ ನಗರ ಠಾಣೆ ಪೊಲೀಸ್‌ ನಿರೀಕ್ಷಕ ಜಯರಾಮ ಡಿ. ಗೌಡ ಅವರು ತನಿಖೆ ಕೈಗೊಂಡಿದ್ದು ನ್ಯಾಯಾಲಯದ ಆದೇಶ ಪಡೆದು ಅರೊಪಿಗಳನ್ನು ಈ ಪ್ರಕರಣಕ್ಕೆ ಸಂಬಂಧಿಸಿ ಕೇರಳದ ವಯನಾಡ್‌ ಜಿಲ್ಲೆಯ ಮಾನಂತವಾಡಿ ಜೈಲಿನಿಂದ ವಶಕ್ಕೆ ಪಡೆದು ಕುಂದಾಪುರಕ್ಕೆ ತರೆತಂದು ತನಿಖೆ ನಡೆಸಿದ್ದು ಅವರು ಸುಲಿಗೆ ಮಾಡಿದ ಸುಮಾರು 2 ಲಕ್ಷ ರೂಪಾಯಿ ಮೌಲ್ಯದ 15.340 ಗ್ರಾಂ ತೂಕದ ಚಿನ್ನದ ಸರವನ್ನು  ಸ್ವಾಧೀನಪಡಿಸಿಕೊಂಡಿದ್ದಾರೆ.

ಪ್ರಕರಣದ ತನಿಖೆಯಲ್ಲಿ  ಕುಂದಾಪುರ ಪೊಲೀಸ್‌ ಠಾಣೆಯ ಉಪನಿರೀಕ್ಷಕರುಗಳು ಹಾಗೂ  ಸಿಬ್ಬಂದಿಗಳು ಸಹಕರಿಸಿದ್ದರು.

Comments are closed.