ಕರ್ನಾಟಕ

ಕುಮಾರಕೃಪಾ ಅತಿಥಿ ಗೃಹ ಇನ್ನುಮುಂದೆ ‘ಗಂಗಾ’: ಸಿಎಂ ಡಿ.ಕೆ. ಶಿವಕುಮಾರ್‌ ಅವರ ಅಧೀಕೃತ ಸರ್ಕಾರಿ ನಿವಾಸ

Pinterest LinkedIn Tumblr

ಬೆಂಗಳೂರು: ಬೆಂಗಳೂರಿನಲ್ಲಿರುವ ಕುಮಾರಕೃಪಾ ಅತಿಥಿಗೃಹವನ್ನು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ಗಂಗಾ’ ಎಂದು ಮರುನಾಮಕರಣ ಮಾಡಿ, ಅದನ್ನು ಮುಖ್ಯಮಂತ್ರಿಯವರ ಅಧಿಕೃತ ಸರ್ಕಾರಿ ನಿವಾಸವನ್ನಾಗಿ ಸೋಮವಾರ ಘೋಷಿಸಿದ್ದಾರೆ.

ಪರಂಪರೆಯನ್ನು ಉಳಿಸಿಕೊಂಡು ಈ ಕಟ್ಟಡವನ್ನು ಮರು ವಿನ್ಯಾಸಗೊಳಿಸಲಾಗಿದೆ. ಕಡಿಮೆ ವೆಚ್ಚದ ಗ್ರಾನೈಟ್ ಹಾಗೂ ಶೇ. 90ರಷ್ಟು ಸ್ವಂತ ಖಾಸಗಿ ಪೀಠೋಪಕರಣಗಳನ್ನು ಬಳಸಿ ಇದನ್ನು ಸಿದ್ಧಪಡಿಸಲಾಗಿದೆ ಎಂದು ಸಿಎಂ ತಿಳಿಸಿದ್ದಾರೆ.

ಈ ಬಗ್ಗೆ ಸೋಮವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ನಾನು ತೆಗೆದುಕೊಂಡಿದ್ದ ಸರ್ಕಾರಿ ನಿವಾಸ ಚಿಕ್ಕದಾಗಿತ್ತು, ಈ ಮಧ್ಯೆ ಕುಮಾರಕೃಪ ಅತಿಥಿ ಗೃಹ ಉಪಯೋಗವಾಗದ ಕಾರಣ ನಾನು ಇದನ್ನು ಅಧಿಕೃತ ನಿವಾಸವಾಗಿ ಪರಿವರ್ತಿಸಿ ಇಂದು ಖಾಸಗಿ ಪೂಜೆ ನೆರವೇರಿಸಿದ್ದೇನೆ. ಗುರುವಾರ ರಾಜ್ಯದ 224 ಶಾಸಕರು, ರಾಜ್ಯದ ಸಂಸದರು, ವಿಧಾನ ಪರಿಷತ್ ಸದಸ್ಯರನ್ನು ಆಹ್ವಾನಿಸುವೆ. ಆ ನಂತರ ನಾನು ಈ ಮನೆಯಲ್ಲಿ ಎಲ್ಲರನ್ನು ಭೇಟಿ ಮಾಡುವೆ. ಈ ನಿವಾಸಕ್ಕೆ ಗಂಗಾ ಎಂದು ನಾಮಕರಣ ಮಾಡಿರುವೆ” ಎಂದು ತಿಳಿಸಿದರು.

ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರೆದುಕೊಂಡಿರುವ ಅವರು, ‘ಇಂದು ಕುಮಾರಕೃಪಾ ರಸ್ತೆಯಲ್ಲಿರುವ ಸರ್ಕಾರಿ ಅಧಿಕೃತ ನಿವಾಸದ ಗೃಹಪ್ರವೇಶ ನೆರವೇರಿಸಿ, ವಿಶೇಷ ಪೂಜೆ ಸಲ್ಲಿಸಲಾಯಿತು. ನಮ್ಮ ಸಂಸ್ಕೃತಿಯಲ್ಲಿ ನದಿಗಳಿಗೆ ವಿಶೇಷ ಗೌರವ ಮತ್ತು ಪೂಜ್ಯಭಾವವಿದೆ. ಅದೇ ಆಶಯದೊಂದಿಗೆ ಈ ಸರ್ಕಾರಿ ನಿವಾಸಕ್ಕೆ ʻಗಂಗಾʻ ಎಂದು ನಾಮಕರಣ ಮಾಡಲಾಗಿದೆ. ಇಲ್ಲಿನ ಪ್ರತಿಯೊಂದು ಕೊಠಡಿಗೂ ಕಬಿನಿ, ಹೇಮಾವತಿ, ಶಿಂಷಾ ಹಾಗೂ ತುಂಗಭದ್ರಾ ಸೇರಿದಂತೆ ನಮ್ಮ ನಾಡಿನ ಜೀವನಾಡಿ ನದಿಗಳ ಹೆಸರನ್ನಿಡಲಾಗಿದೆ’ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬರೆದುಕೊಂಡಿದ್ದಾರೆ.

ನಮ್ಮ ನಾಡಿನ ಹೆಮ್ಮೆಯ ಮುಖ್ಯಮಂತ್ರಿಗಳಾದ ಎಸ್‌. ನಿಜಲಿಂಗಪ್ಪ ಅವರು ವಾಸ್ತವ್ಯ ಹೂಡಿದ್ದ ಈ ಕಟ್ಟಡದ ಮೂಲ ಸ್ವರೂಪಕ್ಕೆ ಯಾವುದೇ ಧಕ್ಕೆಯಾಗದಂತೆ, ಅದರ ಮಹತ್ವವನ್ನು ಕಾಪಾಡಿಕೊಂಡೇ ನವೀಕರಿಸಿ ಮತ್ತಷ್ಟು ಮೆರುಗು ನೀಡಲಾಗಿದೆ.

ಸಾರ್ವಜನಿಕರ ಅಹವಾಲುಗಳನ್ನು ಆಲಿಸಲು, ಸ್ವೀಕರಿಸುವ ದಾಖಲೆಗಳನ್ನು ನಿರ್ವಹಿಸಲು ಹಾಗೂ ಸಭೆ-ಸಮಾರಂಭಗಳ ಆಯೋಜನೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ನಿಮಗಾಗಿ, ನಿಮ್ಮ ಸೇವೆಗಾಗಿ ʻಗಂಗಾʼ ಬಾಗಿಲು ಸದಾ ತೆರದಿರುತ್ತದೆ’ ಎಂದು ಡಿಕೆಶಿ ತಮ್ಮ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

Comments are closed.