ಕರಾವಳಿ

ಕುಂದಾಪುರ| ನೇರಳಕಟ್ಟೆಯ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನ-ಬೆಳ್ಳಿ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ

Pinterest LinkedIn Tumblr

ಕುಂದಾಪುರ: ತಾಲೂಕಿನ ಕರ್ಕುಂಜೆ ಗ್ರಾಮದ ನೇರಳಕಟ್ಟೆ ಎಂಬಲ್ಲಿ ನಡೆದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ. ತಲೆಮರೆಸಿಕೊಂಡ ಇನ್ನೋರ್ವ ಆರೋಪಿ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ಬ್ರಹ್ಮಾವರ ಕಾಡೂರು ಗ್ರಾಮದ ತಂತ್ರಾಡಿಯ ವಿಜಯ ಶೆಟ್ಟಿ(32) ಹಾಗೂ ಕಾರ್ಕಳ ಇಂದಾರು ನಿವಾಸಿ ಅರ್ಜುನ ಪೂಜಾರಿ (29) ಬಂಧಿತ ಆರೋಪಿಗಳು.

ಮೇ 23ರಂದು ಕರ್ಕುಂಜೆ ಗ್ರಾಮದ ನೇರಳಕಟ್ಟೆ ಎಂಬಲ್ಲಿರುವ ನಿರಂಜನ್ ಭಟ್ ಎಂಬವರ ಮನೆಗೆ ನುಗ್ಗಿದ ಕಳ್ಳರು, ಚಿನ್ನ, ಬೆಳ್ಳಿ ಹಾಗೂ ಹಣವನ್ನು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಜೂ.3ರಂದು ವಿಜಯ ಶೆಟ್ಟಿಯನ್ನು ವಶಕ್ಕೆ ಪಡೆದು ಆತನಿಂದ ಸುಮಾರು 9 ಲಕ್ಷ ರೂ. ಮೌಲ್ಯದ 66.22 ಗ್ರಾಂ ಚಿನ್ನ, 175.4 ಗ್ರಾಂ ಬೆಳ್ಳಿ ವಶಪಡಿಸಿಕೊಳ್ಳಲಾಗಿದೆ.

ಬಳಿಕ ತನಿಖೆ ಮುಂದುವರೆಸಿ, ಅರ್ಜುನ ಪೂಜಾರಿನನ್ನು ವಶಕ್ಕೆ ಪಡೆದು ಆತನಿಂದ ಸುಮಾರು 2 ಲಕ್ಷ ಮೌಲ್ಯದ 18.200 ಗ್ರಾಂ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸ ಲಾಗಿದೆ. ಪ್ರಕರಣದ ಪ್ರಮುಖ ಆರೋಪಿ ಅಶ್ರಫ್ ಎಂಬಾತನು ತಲೆಮರೆಸಿಕೊಂಡಿದ್ದು ಆತನಿಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ ಎಂದು ತಿಳಿದುಬಂದಿದೆ.

ಕುಂದಾಪುರ ಡಿವೈಎಸ್ಪಿ ಎಚ್.ಡಿ.ಕುಲಕರ್ಣಿ ಹಾಗೂ ಕುಂದಾಪುರ ವೃತ್ತ ನಿರೀಕ್ಷಕ ಸಂತೋಷ ಎ.ಕಾಯ್ಕಿಣಿ ನೇತೃತ್ವದಲ್ಲಿ ಕುಂದಾಪುರ ಗ್ರಾಮಾಂತರ ಎಸ್ಸೆಗಳಾದ ನಿರಂಜನ್ ಗೌಡ, ಚಂದ್ರಕಲಾ ಪತ್ತಾರ ಮತ್ತು ಸಿಬ್ಬಂದಿ ರಾಜು ಬಿ.ಮೌನೇಶ್, ಶ್ರೀಧರ್ ಪಾಟೀಲ್, ಕಿರಣ ಪಾಟೀಲ್‌, ಶಂಕರನಾರಾಯಣ ಪೊಲೀಸ್ ಸಿಬ್ಬಂದಿ ಜಯರಾಮ, ಅಮಾಸೆಬೈಲು ಪೊಲೀಸ್ ಸಿಬ್ಬಂದಿ ಸುಧಾಕರ, ಚಂದ್ರ ಹಾಗೂ ಕುಂದಾಪುರ ಪೊಲೀಸ್‌ ಠಾಣಾ ಸಿಬ್ಬಂದಿ ಸಂತೋಷ, ಪ್ರಿನ್ಸ್, ಕೊಲ್ಲೂರು ಪೊಲೀಸ್‌ ಠಾಣೆಯ ಸಿಬ್ಬಂದಿ ನಾಗೇಂದ್ರ, ಬೈಂದೂರು ಪೊಲೀಸ್‌ ಠಾಣೆಯ ಚಿದಾನಂದ, ಮಾಳಪ್ಪ ಈ ಕಾರ್ಯಾಚರಣೆ ನಡೆಸಿದ್ದಾರೆ.

Comments are closed.