ಕರಾವಳಿ

ಮುನಿಯಾಲು ಶ್ರೀಮನ್ನಾಗಮಂಡಲದಲ್ಲಿ ‘ರೈತಪೀಠ’ ಪ್ರಶಸ್ತಿ ಪ್ರದಾನ‌ | ಸಾವಯವ ಕೃಷಿಯಿಂದ ಮಾತ್ರ ಬದುಕು ಉಳಿಯಲಿದೆ: ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ‌ ಅಭಿಮತ

Pinterest LinkedIn Tumblr

ಹೆಬ್ರಿ: ಪ್ರಕೃತಿ ನಾಶ ಮಾಡಿದರೆ, ಮನುಷ್ಯ ನಾಶವಾದಂತೆ. ಪ್ರಕೃತಿ ಚೆನ್ನಾಗಿದ್ದರೆ ನಾವೆಲ್ಲರೂ ಚೆನ್ನಾಗಿದ್ದೇವೆ ಎಂದರ್ಥ.  ಪ್ರಕೃತಿಯನ್ನು ನಾಶ ಮಾಡಿ ಬೆಳವಣಿಗೆ ಎನ್ನುವುದು ಅಸಾಧ್ಯ. ಮುಂದಿನ ಪೀಳಿಗೆಗೆ ನಾವು ಪರಿಶುದ್ಧ ಪ್ರಕೃತಿಯನ್ನು ಬಿಟ್ಟುಹೋಗಬೇಕು, ಅಂತಹ ಮಹಾನ್‌ ಕಾರ್ಯವನ್ನು ಮುನಿಯಾಲು ಸಂಜೀವಿನಿ ಗೊಧಾಮದ ಮೂಲಕ ರಾಮಕೃಷ್ಣ ಆಚಾರ್ಯರು ಮಾಡುತ್ತಿದ್ದಾರೆ. ಕೃಷಿಯಿಂದಲೇ ದೇಶದ ಭವ್ಯ ಬೆಳವಣಿಗೆ ಸಾಧ್ಯವಿದೆ. ಅದು ಮುಂದಿನ ಅನಿವಾರ್ಯ ಕೂಡ ಆಗಲಿದೆ, ಅಂತಹ ಮಹಾನ್‌ ಕಾರ್ಯಗಳು ನಮ್ಮಿಂದಲೇ ಆರಂಭವಾಗಬೇಕು. ಗೋಧಾಮದಲ್ಲಿ  ಕೃಷಿ ಪೂರಕ ಉತ್ತಮ ಚಟುವಟಿಕೆ ನಡೆಯುತ್ತಿರುವುದು  ಅಭಿನಂದನೆ ಎಂದು ಮಹಾರಾಷ್ಟ್ರ ಕೊಲ್ಲಾಪುರ ಸಿದ್ದಗಿರಿ ಮಠದ  ಪೂಜ್ಯಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ನುಡಿದರು.

ಅವರು ಮುನಿಯಾಲು ಸಂಜೀವಿನಿ ಗೋಧಾಮದಲ್ಲಿ ಫೆಬ್ರವರಿ 21ರ ತನಕ ನಡೆಯುವ ಪಾರಂಪರಿಕ ಸಂಪ್ರದಾಯದಂತೆ ದೊಂದಿ ಬೆಳಕಿನಲ್ಲಿ ನಡೆಯುವ ಭಕ್ತಿಭಾವಪೂರ್ಣ ಏಕಪವಿತ್ರ ಶ್ರೀಮನ್ನಾಗಮಂಡಲದಲ್ಲಿ ಫೆಬ್ರವರಿ ಶುಕ್ರವಾರ ಸಂಜೆ ಶ್ರೀನಿವಾಸ ಸಭಾಮಂಟಪದಲ್ಲಿ ರೈತಪೀಠ ಪ್ರಶಸ್ತಿಯನ್ನು ಪ್ರಧಾನ ಸಡಗರದಲ್ಲಿ ಆಶೀರ್ವಚನ ನೀಡಿದರು.

ಮಣ್ಣಿನಲ್ಲಿ ಸ್ವಾಯಿಲ್‌ ಕಾರ್ಬನ್‌ ಹೆಚ್ಚಿಸುವ ಕಾರ್ಯ ನಡೆದಾಗ ಅಂತರ್ಜಲ ಉಳಿಯುತ್ತದೆ, ಊರಿನ ಸಮಸ್ಯೆ ಕಾಡುವುದಿಲ್ಲ, ಅದರಿಂದ ಕೃಷಿ ಸಮೃದ್ಧವಾಗುತ್ತದೆ. ರಾಸಾಯನಿಕ ರಸಗೊಬ್ಬರ ಹಾಕಿ ಬೆಳೆಸಿದ ವಿಷಯುಕ್ತ ಆಹಾರಗಳೇ ಭಾರತದ ಜನರ ಬದುಕನ್ನು ನಾಶ ಪಡಿಸುತ್ತಿದೆ. ನಾವೆಲ್ಲ ಊಟ ಮಾಡುವ ಅನ್ನ ಮತ್ತು ನೀರು ಸರಿಯಿಲ್ಲ, ಹಾಗಾಗಿಯೇ ಬಹುತೇಕರ ಬದುಕು ಅತಂತ್ರವಾಗುತ್ತಿದೆ, ಮುಂದೆ ಎಲ್ಲರೂ ಸಾವಯವ ಭತ್ತ ಬೇಸಾಯ ಮತ್ತು ಕೃಷಿಯನ್ನು ಮಾಡಿದಾಗ ಬದುಕು ಉಳಿಯುತ್ತದೆ. ಪುರಾತನ ಭತ್ತ ತಳಿಗಳನ್ನು ಉಳಿಸಬೇಕು, ಅದೇ ಅನ್ನವನ್ನು ಉಂಡಾಗ ಮಾತ್ರ ನಮ್ಮ ಜೀವ ಉಳಿಯುತ್ತದೆ. ಮೊದಲು ನಾವೇ ನಮ್ಮ ಆರೋಗ್ಯದ ಬೆಲೆ ತಿಳಿದು ಕಾಪಾಡಬೇಕು, ಮುಂದೆ ಕೃಷಿಯು ಪುನಶ್ಚೇತನವಾಗಲಿದೆ ಎಂದು ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿ ಹೇಳಿದರು.

240ಕ್ಕೂ ಹೆಚ್ಚು ಭಾರತೀಯ ಭತ್ತದ ತಳಿಗಳನ್ನು ಸಂರಕ್ಷಣೆ ಮಾಡಿದ ಅಪರೂಪದ ಕೃಷಿಕ ಋಷಿ ಬಿ.ಕೆ.ದೇವರಾಯ ಮಿತ್ತಬಾಗಿಲು ಅವರು ಮೂಡಬಿದರೆ ಎಸ್‌ ಕೆಎಫ್‌ ಸಂಸ್ಥೆ ನೀಡುವ ನೂತನ ಪ್ರಥಮ ರೈತಪೀಠ ಪ್ರಶಸ್ತಿಯನ್ನು ಮುನಿಯಾಲು ಸಂಜೀವಿನಿ ಗೊಧಾಮದಲ್ಲಿ ಶುಕ್ರವಾರ ಸ್ವೀಕರಿದರು.

ಮುನಿಯಾಲು ಗೋಧಾಮ ಮತ್ತು ಮೂಡಬಿದರೆ ಎಸ್‌ ಕೆಎಫ್‌ ಸಮೂಹ ಸಂಸ್ಥೆಯ ಸಂಸ್ಥಾಪಕ ಡಾ.ಜಿ.ರಾಮಕೃಷ್ಣ ಆಚಾರ್‌ ಮಾತನಾಡಿ, ತಮ್ಮ ಬದುಕನ್ನೇ ಕೃಷಿ ಕಾಯಕಕ್ಕೆ ಅರ್ಪಿಸಿರುವ ರೈತರ ತ್ಯಾಗ, ಪರಿಶ್ರಮ ಮತ್ತು ರೈತರ ಮಹತ್ವವನ್ನು ಗುರುತಿಸುವ ಮಹತ್ವದ ಉದ್ದೇಶದಿಂದ “ರೈತಪೀಠ” ಎಂಬ ಗೌರವ ಪ್ರಶಸ್ತಿಯನ್ನು ಸ್ಥಾಪಿಸಿ ರೈತರನ್ನು ಗೌರವಿಸುವುದು ನಮ್ಮ ಮುಖ್ಯ ಉದ್ದೇಶ. ನಮ್ಮ ಯುವ ಸಮುದಾಯ ಕೃಷಿಯತ್ತ ಆಕರ್ಷಿತರಾಗಬೇಕು, ಕೃಷಿಯನ್ನೂ ಕೂಡ ಕಾರ್ಪೋರೇಟ್‌ ವ್ಯವಸ್ಥೆಯ ಹಂತಕ್ಕೆ ಬೆಳೆಸಬೇಕು, ಮುನಿಯಾಲಿನ ಗೋಧಾಮ ಎಂಬ ಕೃಷಿಲೋಕವನ್ನು ಕಂಡು ಯುವಕರು ಕೃಷಿಯಲ್ಲಿ ತೊಡಗಿ ಸುಂದರ ಬದುಕು ಕಟ್ಟಿಕೊಳ್ಳಬೇಕು ಎಂದು ಪ್ರಕೃತಿಯಿಂದ ಪ್ರಕೃತಿಗೆ ಎಂಬ ವಿನೂತನ ಪರಿಕಲ್ಪನೆಯಲ್ಲಿ‌ ಶ್ರೀಮನ್ನಾಗಮಂಡಲದಲ್ಲಿ ರೈತಪೀಠ ಪ್ರಶಸ್ತಿ ಪ್ರದಾನ ಮಾಡಿದ್ದೇವೆ ಎಂದು ಹೇಳಿದರು.

ಅಧ್ಯಕ್ಷತೆಯನ್ನು ಮೂಡಬಿದರೆ ಆಳ್ವಾಸ್ ಎಜುಕೇಶನ್ ಫೌಂಡೇಶನ್ ಅಧ್ಯಕ್ಷ  ಡಾ. ಎಂ ಮೋಹನ್ ಆಳ್ವ ವಹಿಸಿ ಮಾತನಾಡಿ, ರಾಮಕೃಷ್ಣ ಆಚಾರ್ಯರು ಹೊಸತನದ ನಾಗಮಂಡಲವನ್ನು ಮಾಡಿಸಿ ನಾಡಿಗೆ ಮಾದರಿಯಾಗಿದ್ದಾರೆ, ಅನೇಕ ನಾಗಮಂಡಲ ನಡೆದರು ಇದೊಂದು ಕೃಷಿಗೆ ಹೆಚ್ಚು ಆದ್ಯತೆ ನೀಡಿದ ನಾಗಮಂಡಲ.  ಕೃಷಿಯನ್ನು ಮುಂದಿನ ಜನಾಂಗಕ್ಕೆ ಆದರ್ಶವಾಗುವಂತೆ ಕೃಷಿ ನಿರಾಶದಾಯಕವಾಗಿಲ್ಲ ಎಂದು ಗೋದಾಮದಲ್ಲಿ ನಡೆದಿರುವ ವಿವಿಧ ರೀತಿಯ ಸಮಗ್ರ ಕೃಷಿಗಳೇ ಕಾರಣ. ಮುಂದೆ ಬಹುಜನರನ್ನು ಆಕರ್ಷಿಸುವ ತಾಣವಾಗಿ ಬೆಳೆಯಲಿ. ನಾಗಮಂಡಲದ ಮೂಲಕ ಕೃಷಿ ಕ್ಷೇತ್ರದ  ಬೆಳವಣಿಗೆಗೆ ಈ ಕಾರ್ಯಕ್ರಮ ನಾಂದಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಬೆಳಗಾವಿ ನಿಡಸೋಸಿ ಶ್ರೀ ದುರದುಂಡೀಶ್ವರ ಸಿದ್ಧಸಂಸ್ಥಾನ ಮಠದ ಪೂಜ್ಯಶ್ರೀ ನಿಜಲಿಂಗೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿ,  ಡಾ. ಜಿ . ರಾಮಕೃಷ್ಣ ಆಚಾರ್ ಅವರೊಬ್ಬ ವಿಸ್ಮಯ, ಕಡುಬಡತನದಲ್ಲಿ ಬೆಳೆದು ಆದರ್ಶ ಪಾಲಿಸಿಕೊಂಡು ಅನುಷ್ಠಾನ ಮಾಡಿಕೊಂಡು, ಕೃಷಿಗೆ ನೆಚ್ಚಿನ ಮಹತ್ವ ನೀಡುತ್ತಾ, ನಾನೊಬ್ಬನೇ ಬೆಳೆಯದೆ ಎಲ್ಲರನ್ನು ಬೆಳೆಸುತ್ತಾ ಸಾಧಕರನ್ನು ಗೌರವಿಸಿ ಸಂಸ್ಕೃತಿಯನ್ನು, ಸಂಸ್ಕಾರವನ್ನು ಪ್ರೋತ್ಸಾಹಿಸಿ ನಮ್ಮ ಏನು ಜಗತ್ತಿಗೆ ನೀಡಬೇಕೆಂದು ಎಲ್ಲರೂ ತಮ್ಮ ನಾಗಮಂಡಲ ಕೆಲಸ ಮಾಡುತ್ತಿದ್ದಾರೆ. ರೈತರಿಗೆ ಕೃಷಿಪೀಠ ಅಭಿನಂದನೀಯ ಎಂದರು.

ಗೋಧಾಮದ ಪ್ರವರ್ತಕ ಡಾ. ಜಿ ರಾಮಕೃಷ್ಣ ಆಚಾರ್ಯ ಅವರ ಸಾಧನೆ ಯಶೋಗಾಥೆಯನ್ನು ದಾಖಲಿಸಿದ ಡಾ. ನರೇಂದ್ರ ರೈ ದೆರ್ಲ ರಚಿಸಿರುವ ‘ರೈತಪೀಠ ಇದು ಈ ನೆಲದ ಜ್ಞಾನಪೀಠ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಕಳದ ಕಾಂಗ್ರೆಸ್‌ ನಾಯಕ ಮುನಿಯಾಲು ಉದಯಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್‌ ಟ್ರಸ್ಟ್‌ ಅಧ್ಯಕ್ಷ ಉದಯ ಕುಮಾರ್‌ ಶೆಟ್ಟಿ, ಗೋಧಾಮದ ಪ್ರವರ್ತಕ ಡಾ. ಜಿ. ರಾಮಕೃಷ್ಣ ಆಚಾರ್, ಸವಿತಾ ಆರ್.‌ ಆಚಾರ್, ಪ್ರಜ್ವಲ್‌ ಆರ್.‌ ಆಚಾರ್‌, ಮಂಗಳೂರು ವಿಶ್ವಕರ್ಮ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಹರೀಶ ಆಚಾರ್ಯ ಜಲಕದಕಟ್ಟೆ, ಮಂಗಳೂರು ಎಸ್ ಕೆ ಜಿ ಐ ಕೋಆಪರೇಟಿವ್ ಸೊಸೈಟಿ ಅಧ್ಯಕ್ಷ ಪೆರ್ಡೂರು ಉಪೇಂದ್ರ ಆಚಾರ್ಯ, ಬಿ.ಕೆ.ದೇವರಾಯ ಮಿತ್ತಬಾಗಿಲು ದಂಪತಿಗಳು. ಶ್ರೀಮನ್ನಾಗಮಂಡಲ ಸೇವಾ ಸಮಿತಿಯ ಅಧ್ಯಕ್ಷ ದೇವಿ ಪ್ರಸಾದ ಶೆಟ್ಟಿ ಸಾಣೂರುಗುತ್ತು, ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಶೆಟ್ಟಿ ಕಾರ್ಕಳ ಉಪಸ್ಥಿತರಿದ್ದರು.

ದೇವಿ ಪ್ರಸಾದ ಶೆಟ್ಟಿ ಸಾಣೂರುಗುತ್ತು ಸ್ವಾಗತಿಸಿದರು. ಬಾರ್ಕೂರು ದಾಮೋಧರ ಶರ್ಮ ನಿರೂಪಿಸಿದರು.

Comments are closed.