ಕರಾವಳಿ

ಆನ್‌ಲೈನ್ ಬೆಟ್ಟಿಂಗ್‌ನಲ್ಲಿ ಗೆದ್ದ 15 ಲಕ್ಷ ಹಣ ನೀಡದೆ ಜೀವಬೆದರಿಕೆ ಹಾಕಿದ ಪ್ರಕರಣ: ಐದು ಮಂದಿ ಆರೋಪಿಗಳ ಬಂಧನ

Pinterest LinkedIn Tumblr

ಉಡುಪಿ: ಆನ್‌ಲೈನ್‌ ಬೆಟ್ಟಿಂಗ್‌ನಲ್ಲಿ ಗೆದ್ದ 15ಲಕ್ಷ ರೂ. ಹಣ ನೀಡದೆ ಜೀವಬೆದರಿಕೆ ಹಾಕಿರುವ ಪ್ರಕರಣಕ್ಕೆ ಸಂಬಂಧಿಸಿ ಕೋಟ ಪೊಲೀಸರು ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಶಿರಿಯಾರ ಗ್ರಾಮದ ಎತ್ತಿನಟ್ಟಿಯ ರೂಪೇಶ್(23), ಮನೋಜ್(25), ಕೊಳ್ಳೆಬೈಲುವಿನ ಸೃಜನ್ ಶೆಟ್ಟಿ(28), ಪಡುಮುಂಡುವಿನ ರಾಘವೇಂದ್ರ (37), ಶಿರಿಯಾರ ಕುಶಲ(38) ಬಂಧಿತ ಆರೋಪಿಗಳು. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬಿಲ್ಲಾಡಿಯ ಸಂದೇಶ್ ಕುಲಾಲ್ ಎಂಬವರಿಗೆ ಸುಮಾರು ಒಂದು ವರ್ಷದ ಹಿಂದೆ ಆನ್‌ಲೈನ್ ಬೆಟ್ಟಿಂಗ್ ನಡೆಸುತ್ತಿದ್ದ ಶಿರಿಯಾರ ನಿವಾಸಿ ಪ್ರದೀಪ್ ಎಂಬಾತನ ಪರಿಚಯವಾಗಿತ್ತು. ಸಂದೇಶ್ ಕುಲಾಲ್, ಪ್ರದೀಪ್‌ ಸೂಚನೆಯಂತೆ ರೂಪೇಶ್, ಮನೋಜ್, ಧೀರಜ್, ಹರೀಶ, ವಿದೇಶ್ ಹಾಗೂ ಇತರೆ ವ್ಯಕ್ತಿಗಳ ಮೊಬೈಲ್ ನಂಬರ್‌ಗಳಿಗೆ ಆನ್‌ಲೈನ್ ಮೂಲಕ ಹಣ ವರ್ಗಾವಣೆ ಮಾಡಿದ್ದರು. ಸಂದೇಶ್ ಕುಲಾಲ್ ಬೆಟ್ಟಿಂಗ್‌ನಲ್ಲಿ ಸುಮಾರು 15 ಲಕ್ಷ ರೂ. ಹಣವನ್ನು ಗೆದ್ದಿದ್ದು ಈ ಹಣವನ್ನು ಇವರು ನೀಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ.

ಒಂದು ತಿಂಗಳ ಹಿಂದೆ ಶಿರಿಯಾರದಲ್ಲಿ ಪ್ರದೀಪ್‌ನನ್ನು ಭೇಟಿ ಮಾಡಿ ಗೆದ್ದ 15ಲಕ್ಷ ರೂ. ಹಣ ನೀಡುವಂತೆ ಕೇಳಿದ್ದು, ಆಗ ಪ್ರದೀಪ್, ಆತನ ತಂಡವರು ಹಣವನ್ನು ನೀಡಲು ನಿರಾಕರಿಸಿ ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Comments are closed.