ಕರಾವಳಿ

ಯುವ ಕ್ರಿಕೆಟಿಗ ಕುಂದಾಪುರ ಗುಲ್ವಾಡಿ‌ ಮೂಲದ ಮೊಹಮ್ಮದ್ ಫಾಹಿಮ್ ಶ್ರೀಲಂಕಾಗೆ

Pinterest LinkedIn Tumblr

ಬೆಂಗಳೂರು/ಕುಂದಾಪುರ: ಬೆಂಗಳೂರಿನ ಪ್ರತಿಷ್ಠಿತ ಕರ್ನಾಟಕ ಇನ್ಸ್ಟಿಟ್ಯುಟ್ ಆಫ್ ಕ್ರಿಕೆಟ್ (KIOC) ಶ್ರೀಲಂಕಾದ ಬಿಯಾಗಮ ಕ್ರಿಕೆಟ್ ಕ್ಲಬ್ ವಿರುದ್ಧ 8 ಏಕದಿನ ಪಂದ್ಯಗಳ ಸರಣಿಯಲ್ಲಿ ಆಡಲು ತೆರಳುವ 19 ರ ಕೆಳಹರೆಯದ ತಂಡಕ್ಕೆ ಪ್ರಸ್ತುತ ಬೆಂಗಳೂರಿನಲ್ಲಿ  ವಾಸವಾಗಿರುವ ಕುಂದಾಪುರ ತಾಲೂಕಿನ ಗುಲ್ವಾಡಿ ಗ್ರಾಮದ  ಇಸ್ಮಾಯಿಲ್ ಮತ್ತು ವಾಜಿದ ತಬಸ್ಸುಮ್ ದಂಪತಿಗಳ ಮಗನಾದ ಪ್ರಸ್ತುತ ಮೊದಲ ವರ್ಷದ ಇಂಜನಿಯರಿಂಗ್ ವಿದ್ಯಾರ್ಥಿಯು ಆಗಿರುವ ಮೊಹಮ್ಮದ್ ಫಾಹಿಮ್ ಆಯ್ಕೆಯಾಗಿದ್ದಾರೆ.

1996 ರಲ್ಲಿ ಸ್ಥಾಪನೆಯಾದ ಕರ್ನಾಟಕ ಇನ್ಸ್ಟಿಟ್ಯುಟ್ ಆಫ್ ಕ್ರಿಕೆಟ್ ಕರ್ನಾಟಕ ಅಲ್ಲದೆ ಭಾರತದ ಪ್ರತಿಷ್ಠಿತ ಸಂಸ್ಥೆಯಾಗಿದೆ. ಇಲ್ಲಿ ತರಬೇತಿ ಪಡೆದ ರಾಬಿನ್ ಉತ್ತಪ್ಪ, ಮನೀಷ್ ಪಾಂಡೆ ಮತ್ತು ಮಹಿಳ ತಂಡದ ವೇದ ಕೃಷ್ಣಮೂರ್ತಿ ಸೇರಿದಂತೆ ಅನೇಕ ಆಟಗಾರರು ರಣಜಿ ಟ್ರೋಪಿ ಮತ್ತು ರಾಷ್ಟ್ರೀಯ ತಂಡ ಅಲ್ಲದೆ ದೇಶದಾದ್ಯಂತ ನಡೆಯುವ ಪ್ರತಿಷ್ಠಿತ ಟೂರ್ನಿಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದಾರೆ.

ಕೆಲವು ವರ್ಷಗಳಿಂದ ತಾನು ಓದುತ್ತಿರುವ ಕಾಲೇಜು ಪರವಾಗಿ ಆಡುತ್ತಿದ್ದ ಮೊಹಮ್ಮದ್ ಫಾಹಿಮ್  ಕಳೆದ ಒಂದೂವರೆ ವರ್ಷದಿಂದ ಈ ಪ್ರತಿಷ್ಠಿತ ಕರ್ನಾಟಕ ಇನ್ಸ್ಟಿಟ್ಯುಟ್ ಆಫ್ ಕ್ರಿಕೆಟ್‌ನಲ್ಲಿ ತರಬೇತಿ ಪಡೆಯುವುತ್ತಿದ್ದು ಇಲ್ಲಿಯ ಮುಖ್ಯ ತರಬೇತುದಾರ ಇರ್ಫಾನ್ ಸೇಠ್ ಭಾರತ,ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯ ಮಟ್ಟದ 1,2 ಮತ್ತು 3 ಕೋಚಿಂಗ್ ನಲ್ಲಿ ಪ್ರತಿಷ್ಠಿತ ಪ್ರಮಾಣಪತ್ರಗಳನ್ನು ಪಡೆದುಕೊಂಡವರಾಗಿದ್ದಾರೆ. ಮೊಹಮ್ಮದ್ ಫಾಹಿಮ್ ಈ ಹಿಂದೆ ತಾನು ಪ್ರತಿನಿಧಿಸುತ್ತಿದ್ದ ಶಾಲಾ ಹಾಗೂ ಕಾಲೇಜು ಮಟ್ಟದ ಟೂರ್ನಿಯಲ್ಲಿ ಅತ್ಯುತ್ತಮ  ಬೌಲಿಂಗ್ ಪ್ರದರ್ಶನ ನೀಡುತ್ತ ಬಂದಿದ್ದ ಕಾರಣ ಕೆಐಒಸಿಯಲ್ಲಿ ಅತ್ಯಂತ ಬೇಗನೆ ಅಲ್ಲಿನ ತರಬೇತುದಾರರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು ಬೌಲಿಂಗ್‌ನಲ್ಲಿ ವಿಶೇಷವಾಗಿ ಮಧ್ಯಮ ವೇಗದ ಜೊತೆಗೆ ಔಟ್ ಸ್ವಿಂಗ್ ಮತ್ತು ಯಾರ್ಕರ್ ಎಸೆತಗಳ ಮೂಲಕ ಬ್ಯಾಟ್ಸ್‌ಮನ್‌ಗಳನ್ನು ದಿಗ್ಭ್ರಮೆಗೊಳಿಸುವ ಕಾರಣಕ್ಕೆ ಇದೀಗ ಶ್ರೀಲಂಕಾ ಕ್ರಿಕೆಟ್ ನಿಯಂತ್ರಣ ಮಂಡಳಿಯ ಮಾನ್ಯತೆ ಪಡೆದಿರುವ ಬಿಯಾಗಮ  ಕ್ರಿಕೆಟ್ ಕ್ಲಬ್ ವಿರುದ್ಧ ಕೊಲಂಬೊ ಸೇರಿದಂತೆ ಶ್ರೀಲಂಕಾದ ವಿವಿಧ ನಗರಗಳಲ್ಲಿ ಜುಲೈ 21 ರಿಂದ 29 ರ ವರಗೆ ನಡೆಯುವ ಟೂರ್ನಿಯಲ್ಲಿ ಭಾಗವಹಿಸುವ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ.

ಆರುಷ್ ಚೌಧರಿ, ಲಕ್ಷ್ಮೀ ವರಪ್ರಸಾದ್,ಭರತ್ ಗೌಡ, ವತ್ಸಲ್ ಸಿ, ಮೊಹಮ್ಮದ್ ಫಾಹಿಮ್, ಸೂರಜ್, ಶ್ರೇಯಾಂಶ್, ಮೋಕ್ಷ, ಭವಿತ್, ತೃತ್ಯ, ಗಗನ್ ರೆಡ್ಡಿ, ಆದಿತ್ಯ ಸೇರಿದಂತೆ ತಂಡದ ಮುಖ್ಯ ತರಬೇತುದಾರ ಮೊಹಮ್ಮದ್ ನಾಸಿರುದ್ದೀನ್ ಜೊತೆಗೆ 12 ಆಟಗಾರರ ತಂಡ ಜುಲೈ 20ರ ರಾತ್ರಿ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶ್ರೀಲಂಕಾದ ರಾಜಧಾನಿ ಕೊಲಂಬೊಗೆ ಪ್ರಯಾಣ ಬೆಳೆಸಿದೆ ಎಂದು ತಿಳಿದುಬಂದಿದೆ.

Comments are closed.