ಕರಾವಳಿ

ಮಹಿಳೆಯರ ಮೇಲೆ ಹಲ್ಲೆ ಆರೋಪ: ಕೋಟ ಕ್ರೈಮ್ ಪಿಎಸ್ಐ ಕರ್ತವ್ಯದಿಂದ ವಜಾಗೊಳಿಸಲು ದಸಂಸ, ಸಮಾನ ಮನಸ್ಕ ಸಂಘಟನೆಗಳ ಆಗ್ರಹ

Pinterest LinkedIn Tumblr

ಉಡುಪಿ: ಇಲ್ಲಿನ ಕೋಟ ಪೊಲೀಸ್ ಠಾಣೆಯಲ್ಲಿ ಕೂಲಿ ಕಾರ್ಮಿಕರಾದ ಆಶಾ ಮತ್ತು ಸುಜಾತ ಎನ್ನುವರ ಮೇಲೆ ಪೊಲೀಸ್ ಉಪನಿರೀಕ್ಷಕಿ ದೌರ್ಜನ್ಯ‌ ಎಸಗಿದ್ದಾರೆಂದು ಆರೋಪಿಸಿ ಕ್ರೈಂ ವಿಭಾಗದ ಪಿ.ಎಸ್.ಐ. ಸುಧಾ ಪ್ರಭು ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಅ.28 ರಂದು ಶನಿವಾರ ಕೋಟ ಪೊಲೀಸ್ ಠಾಣೆ ಎದುರು ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್ ಮಾತನಾಡಿ, ಕೂಲಿಕಾರ್ಮಿಕ ಮಹಿಳೆಯರ ಮೇಲೆ ನಡೆದ ಪೊಲೀಸ್ ದೌರ್ಜನ್ಯ ಖಂಡನೀಯ. ಇಲಾಖೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿಲ್ಲ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದೂರುದಾರರಿಗೂ ಪೂರಕ ಸ್ಪಂದನೆ ನೀಡಿಲ್ಲ. ಪಿಎಸ್ಐ ರಕ್ಷಿಸುವ ಸಲುವಾಗಿ ಹೋರಾಟಗಾರರಿಗೆ ನೋಟೀಸು ನೀಡುವ, ಪ್ರತಿಭಟನೆ ಹತ್ತಿಕ್ಕುವ ಯತ್ನ ಮಾಡಿದ್ದಾರೆ. ರಾಜಕೀಯ ಷಡ್ಯಂತ್ರ ಕೂಡ ಮೇಲ್ನೋಟಕ್ಕೆ ಕಾಣುತ್ತಿದೆ. ಸಂತ್ರಸ್ತರ ತೇಜೋವಧೆ ನಡೆದಿದೆ. ಶೀಘ್ರ ಈ ಬಗ್ಗೆ ನಿಸ್ಪಕ್ಷಪಾತ ತನಿಖೆ ನಡೆದು ನ್ಯಾಯ ಒದಗಿಸಿಕೊಡದಿದ್ದಲ್ಲಿ ಮುಂದಿನ ದಿನದಲ್ಲಿ ಎಸ್ಪಿ ವಿರುದ್ಧ ಅವರ ಕಚೇರಿ ಎದುರು ಹೋರಾಟ, ಉಸ್ತುವಾರಿ ಸಚಿವರ ಸಹಿತ ಸರಕಾರ ಪ್ರತಿನಿಧಿಗಳು ಜಿಲ್ಲೆಗೆ ಬಂದಾಗ ಘೇರಾವ್ ಹಾಕುವುದು, ಕಪ್ಪು ಪಟ್ಟಿ ಪ್ರದರ್ಶಿಸುವ ಮೂಲಕ ಪ್ರತಿಭಟನೆ ತೀವ್ರಗೊಳ್ಳಲಿದೆ ಎಂದರು.

ದಲಿತ ಸಂಘರ್ಷ ಸಮಿತಿಯ ಐಕ್ಯ ಹೋರಾಟ ಸಮಿತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಟಿ.ಮಂಜುನಾಥ ಗಿಳಿಯಾರ್ ಮಾತನಾಡಿ, ಅಮಾಯಕ ಮಹಿಳೆಯರ ಮೇಲೆ ಅಮಾನವೀಯ ಪೊಲೀಸ್ ಉಪನಿರೀಕ್ಷಕಿ ನಡೆಸಿದ ದೌರ್ಜನ್ಯ ಸಹಿಸಲು ಅಸಾಧ್ಯ. ಇದರಿಂದ ಇಬ್ಬರು ಮಹಿಳೆಯರ ಕುಟುಂಬಿಕ ಜೀವನ ಕೂಡ ನೋವಲ್ಲಿದೆ. ಕೋಟ ಠಾಣೆಯಲ್ಲಿ ನಡೆದ ಮಹಿಳಾ ದೌರ್ಜನ್ಯ ಅತ್ಯಂತ ಹೇಯ ಕೃತ್ಯವಾಗಿದೆ. ಸಂತ್ರಸ್ತ ಮಹಿಳೆಯರಿಗೆ ನ್ಯಾಯಕ್ಕಾಗಿ ಆಗ್ರಹಿಸಿ ದಸಂಸ ಮುಂದೆ ಬಂದಿದೆ. ನಮ್ಮ ದಸಂಸ ಹೋರಾಟದ ಶಕ್ತಿ ಪೊಲೀಸ್ ಮೇಲಾಧಿಕಾರಿಗಳಿಗೆ ತೋರಿಸುವ ಕೆಲಸ ಕಾನೂನಾತ್ಮಕವಾಗಿ ಹಾಗೂ ಅಂಬೇಡ್ಕರ್ ಸಂವಿಧಾನದ ಅಡಿಯಲ್ಲಿ ಹೋರಾಟ ಹಮ್ಮಿಕೊಳ್ಳಲಾಗುತ್ತದೆ. ಜನವಿರೋಧಿ ಅಧಿಕಾರಿಗಳ‌ ಮೇಲೆ ಕ್ರಮ ಶೀಘ್ರ ಆಗಬೇಕು ಎಂದವರು ಆಗ್ರಹಿಸಿದರು.

ಈ ಸಂದರ್ಭ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬ್ರಹ್ಮಾವರ ವೃತ್ತನಿರೀಕ್ಷಕ ಪಿ.ಎಂ ದಿವಾಕರ್ ಅವರಿಗೆ ಪ್ರತಿಭಟನಾಕಾರರು ಮನವಿ ನೀಡಿದರು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜೊತೆಗೆ, ಸಿ.ಐ.ಟಿ.ಯು.‌ಹಾಗೂ ಜನವಾದಿ ಮಹಿಳಾ ಸಂಘಟನೆ, ಪ್ರಗತಿಪರ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ನೀಡಿದ್ದರು.

ದಸಂಸ ರಾಜ್ಯ ಮಹಿಳಾ ಸಂಘಟನಾ ಸಂಚಾಲಕಿ ವಸಂತಿ ಶಿವಾನಂದ, ಉಡುಪಿ ಜಿಲ್ಲಾ ದಸಂಸ ಸಂಘಟನಾ ಸಂಚಾಲಕರಾದ ಶ್ಯಾಮಸುಂದರ್ ತೆಕ್ಕಟ್ಟೆ, ಪರಮೇಶ್ವರ ಉಪ್ಪೂರು, ಅಖಿಲ ಭಾರತ ಜನವಾದಿ ಮಹಿಳಾ‌ಸಂಘಟನೆ ಜಿಲ್ಲಾ ಕಾರ್ಯದರ್ಶಿ ಶೀಲಾವತಿ, ಬೈಂದೂರು ತಾಲೂಕು ಅಧ್ಯಕ್ಷೆ ನಾಗರತ್ನಾ, ಕುಂದಾಪುರ ತಾಲೂಕು ಅಧ್ಯಕ್ಷೆ ಬಲ್ಕಿಷ್, ಸಾಲಿಗ್ರಾಮ ಘಟಕಾಧ್ಯಕ್ಷೆ ಶಾರದಾ, ಸಿಐಟಿಯು ಜಿಲ್ಲಾ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ಜಿಲ್ಲಾ ಪ್ರ.ಕಾರ್ಯದರ್ಶಿ ವೆಂಕಟೇಶ ಕೋಣಿ, ಸಿಐಟಿಯು ಜಿಲ್ಲಾ ಮುಖಂಡ ಚಂದ್ರಶೇಖರ್, ದಸಂಸ ಕುಂದಾಪುರ ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ, ಬೈಂದೂರು ತಾ| ಸಂಚಾಲಕ ನಾಗರಾಜ್ ಉಪ್ಪುಂದ, ಬ್ರಹ್ಮಾವರ ತಾ| ಸಂಚಾಲಕ ಶ್ರೀನಿವಾಸ ವಡ್ಡರ್ಸೆ, ಕಾಪು ತಾ| ಸಂಚಾಲಕ ವಿಠ್ಠಲ್, ಹೆಬ್ರಿ ಸಂಚಾಲಕ ದೇವಣ್ಣ ಹೆಬ್ರಿ, ಬೈಂದೂರು ತಾ| ಮಹಿಳಾ ಸಂಘಟನೆಯ ವಿನಯಾ ಮಾಸ್ತಿಕಟ್ಟೆ, ದಸಂಸ ಸಂಘಟನೆ ಕೋಟ ಸಂಚಾಲಕ ನಾಗರಾಜ ಪಡುಕೆರೆ, ಪ್ರಮುಖರಾದ ಸುರೇಶ್ ಹಕ್ಲಾಡಿ, ಗೋಪಾಲಕೃಷ್ಣ ನಾಡ, ವಿಜಯ ಗಿಳಿಯಾರು, ಗೋವಿಂದ, ಶ್ರೀಧರ್ ಕುಂಜಿಬೆಟ್ಟು, ಕೀರ್ತಿಕುಮಾರ್, ಲಕ್ಷ್ಮಣ್ ಬೈಂದೂರು, ಮಂಜುನಾಥ ಹಳಗೇರಿ, ಶ್ರೀನಿವಾಸ ಮಲ್ಯಾಡಿ, ಭಾಸ್ಕರ ಕೆರ್ಗಾಲು, ಕುಮಾರ ಕೋಟ, ಸುರೇಶ್ ಅಂಪಾರು, ಸತೀಶ್ ರಾಮನಗರ, ಶಿವಾನಂದ, ಮೋಹನ್ ಮೂಡುಬೆಟ್ಟು ಇದ್ದರು.

ಖಾಕಿ ಬಟ್ಟೆ ಹಾಕಿ ಕಾನೂನು ರಕ್ಷಣೆ ಮಾಡಬೇಕಾದ ಪೊಲೀಸ್ ಅಧಿಕಾರಿ ವಿರುದ್ಧ ಪ್ರತಿಭಟನೆ ಮಾಡಬೇಕಾಗಿದ್ದು ದೌರ್ಭಾಗ್ಯ. ಹೊಟ್ಟೆಪಾಡಿಗಾಗಿ ಕೆಲಸ ಮಾಡುವ ಮಹಿಳೆಯರ ಅಂತಕರಣ ಅರ್ಥಮಾಡಿಕೊಳ್ಳಲಾಗದ, ಬಂಡವಾಳಶಾಹಿಗಳ ಬಾಡಿಗೆ ಗೂಂಡಾಗಳಂತೆ ವರ್ತಿಸುವ ಮಹಿಳಾ ಅಧಿಕಾರಿ ಪೊಲೀಸ್ ಇಲಾಖೆಗೆ ನಾಲಾಯಕ್. ಇಂತವರನ್ನು ಮೇಲಾಧಿಕಾರಿಗಳು ತಕ್ಷಣ ವಜಾ ಮಾಡಬೇಕು. ದಕ್ಷ ಅಧಿಕಾರಿ ಎಂದು ಜಿಲ್ಲೆಯಲ್ಲಿ ಕರೆಸಿಕೊಳ್ಳುವ ಎಸ್ಪಿಯವರು ಹೋರಾಟಗಾರರ ಬಳಿಯೇ ಸಾಕ್ಷಿ ಕೇಳುತ್ತಾರೆ. ಹಿರಿಯ ಅಧಿಕಾರಿಗಳು ಬಡವರಿಗೆ ನ್ಯಾಯ ಒದಗಿಸಿಕೊಡುವ‌ ಮೂಲಕ ಕರ್ತವ್ಯಪ್ರಜ್ಞೆ ಮೆರೆಯಬೇಕು. ಇಲ್ಲವಾದಲ್ಲಿ ರಾಜ್ಯ ಮಟ್ಟದಲ್ಲಿ ಹೋರಾಟ ಖಚಿತ.
-ವಾಸುದೇವ ಮುದೂರು (ದಸಂಸ ಜಿಲ್ಲಾ ಸಂಘಟನಾ ಸಂಚಾಲಕ)

Comments are closed.