ಕರಾವಳಿ

ವಿಧಾನಸಭೆ ನೂತನ ಸ್ಪೀಕರ್ ಆಗಿ ಸರ್ವಾನುಮತದಿಂದ ಯುಟಿ ಖಾದರ್ ಆಯ್ಕೆ | ಮುಸ್ಲಿಂ ಸಮುದಾಯದಿಂದ ಹುದ್ದೆಗೇರಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆ

Pinterest LinkedIn Tumblr

ಬೆಂಗಳೂರು: ವಿಧಾನಸಭೆ ನೂತನ ಸ್ವೀಕರ್ ಆಗಿ ಯುಟಿ ಖಾದರ್ ಅವರು ಸರ್ವಾನುಮತದಿಂದ ಬುಧವಾರ ಆಯ್ಕೆಯಾಗಿದ್ದಾರೆ.

ವಿಧಾನಸಭೆ ಸ್ಪೀಕರ್ ಸ್ಥಾನಕ್ಕೆ ಮಂಗಳೂರು ಶಾಸಕ ಯು.ಟಿ. ಖಾದರ್ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಸ್ತಾಪಿಸಿದರು. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅನುಮೋದಿಸಿದರು. ಬಿಜೆಪಿ, ಜೆಡಿಎಸ್ ಅಭ್ಯರ್ಥಿ ಹಾಕದ ಹಿನ್ನೆಲೆಯಲ್ಲಿ 23ನೇ ಸ್ಪೀಕರ್‌ ಆಗಿ ಖಾದರ್‌ ಅವರನ್ನು ಅವಿರೋಧವಾಗಿ ಘೋಷಿಸಲಾಯಿತು.

ನೂತನ ಸಭಾಧ್ಯಕ್ಷರ ಹೆಸರನ್ನು ಹಂಗಾಮಿ ಸ್ಪೀಕರ್ ದೇಶಪಾಂಡೆ ಘೋಷಣೆ ಮಾಡಿದ ಕೂಡಲೆ ಸಭಾಧ್ಯಕ್ಷರನ್ನು ಸಭಾ ನಾಯಕ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕುರ್ಚಿಯತ್ತ ಕರೆದು ತಂದರು. ಬಳಿಕ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್ ಸಹಿತ ಹಲವು ನಾಯಕರು ಖಾದರ್‌ ಅವರನ್ನು ಭಾಷಣದಲ್ಲಿ ಅಭಿನಂದಿಸಿದರು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೂಡ ಅಭಿನಂದನೆ ಸಲ್ಲಿಸಿದರು.

ದಕ್ಷಿಣ ಕನ್ನಡ ಜಿಲ್ಲೆಯಿಂದ ಸಭಾಧ್ಯಕ್ಷರಾದ ಎರಡನೇ ಜನಪ್ರತಿನಿಧಿ ಯು.ಟಿ ಖಾದರ್‌ ಆಗಿದ್ದಾರೆ. ಇದರಂತೆ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದಿಂದ ಈ ಹುದ್ದೆಗೆ ಏರಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಹಿಂದೆ ಬೆಳ್ತಂಗಡಿ ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿ. ವೈಕುಂಠ ಬಾಳಿಗಾ ಎರಡು ಬಾರಿ (1962, 1967) ಸಭಾಧ್ಯಕ್ಷರಾಗಿದ್ದರು.

Comments are closed.