ಬೆಂಗಳೂರು: ಕರಾವಳಿ ಭಾಗದಲ್ಲಿ ದೈವಾರಾಧನೆಗೆ ಬಹಳಷ್ಟು ಪ್ರಾಮುಖ್ಯತೆಯಿದ್ದು ದೈವ ನರ್ತನ ಮಾಡುವ ಬಡ ಕುಟುಂಬಗಳಿಗೆ ದೀಪಾವಳಿ ವೇಳೆ ಸರ್ಕಾರ ಸಿಹಿ ಸುದ್ದಿ ನೀಡಿದೆ.

ದೈವ ನರ್ತನ ಮಾಡುವವರಿಗೆ ಮಾಸಾಶನ ಕೊಡಲು ತೀರ್ಮಾನ ಮಾಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ಘೋಷಣೆ ಮಾಡಿದ್ದಾರೆ. 60 ವರ್ಷ ಮೇಲ್ಪಟ್ಟ ದೈವನರ್ತನ ಮಾಡುವವರಿಗೆ ಮಾಸಾಶನ ನೀಡಲು ಈ ಯೋಜನೆಯನ್ನು ಹಾಕಿಕೊಂಡಿದೆ. ಪ್ರತಿ ತಿಂಗಳು 2 ಸಾವಿರ ರೂ. ಮಾಸಾಶನ ಕೊಡಲು ನಿರ್ಧಾರ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಕಾಂತಾರ ಸಿನಿಮಾದಲ್ಲಿ ದೈವ ನರ್ತಕರ ಕಷ್ಟಗಳನ್ನು ಮತ್ತು ಆ ಸಮುದಾಯದ ಜನರ ಕಷ್ಟಗಳನ್ನು ತಿಳಿಸುವ ಪ್ರಯತ್ನವನ್ನು ಎಳೆಎಳೆಯಾಗಿ ತೋರಿಸಲಾಗಿತ್ತು. ಈ ಸಿನಿಮಾ ಬಳಿಕ ಈ ಸಮುದಾಯದ ಅಭಿವೃದ್ಧಿಗೆ ಸರ್ಕಾರ ಉತ್ತಮ ಯೋಜನೆಗಳನ್ನು ತರಬೇಕು ಮತ್ತು ಅವರಿಗಾಗಿ ಮಾಸಾಶನ ನೀಡಬೇಕು ಎಂದು ಸರ್ಕಾರಕ್ಕೆ ಸಲಹೆಯನ್ನು ನೀಡಿದ್ದರು. ಇದೀಗ ಸರ್ಕಾರ ದೈವ ನರ್ತಕರ ಕಷ್ಟಕ್ಕೆ ಮತ್ತು ಬೇಡಿಕೆಗೆ ಸೂಕ್ತ ಸ್ಪಂದನೆ ನೀಡಿದೆ.
ದೈವ ನರ್ತನ ಮಾಡುವವರಿಗೆ ಪ್ರತಿ ತಿಂಗಳು 2 ಸಾವಿರ ರೂ. ಮಾಸಾಶನ ನೀಡಲು ನಿರ್ಧಾರ ಮಾಡಿದ್ದು ಸರ್ಕಾರದ ಈ ಆದೇಶಕ್ಕೆ ಸಾರ್ವಜನಿಕ ವಲಯದಲ್ಲಿ ಕೂಡ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
Comments are closed.