ಕುಂದಾಪುರ: ಕೊರಗ ಸಮುದಾಯದ ಮಕ್ಕಳಿಗೆ ಪ್ರತಿಭೆಗೆ ಸೂಕ್ತ ವೇದಿಕೆಯನ್ನು ಒದಗಿಸುವ ಕೆಲಸ ಆಗಬೇಕು. ಆಲೂರಿನ ಕೊರಗ ಸಮುದಾಯದ ಪ್ರತಿಭಾನ್ವಿತ ವಿದ್ಯಾರ್ಥಿ ಅಖಿಲೇಶ್ ಅತ್ಯಂತ ಹೆಚ್ಚು ಅಂಕಗಳನ್ನು ಪಡೆದಿರುವುದು ಹಾಗೆ ಅಂಕಿತಾ ಕ್ರೀಡಾ ಕ್ಷೇತ್ರದಲ್ಲಿ ಸಾಧಿಸಿದ್ದಾರೆ. ಹಾಗೆ ಇಲ್ಲಿನ ಸ್ಥಳೀಯ ಕೊರಗ ಮಕ್ಕಳಲ್ಲಿ ಪ್ರತಿಭಾವಂತರು ಇದ್ದಾರೆ ಅವರನ್ನು ಗುರಿ ತಲುಪಿಸಲು ಈ ಸಮಾಜದ ಮಹತ್ತರ ಜವಬ್ದಾರಿಯಾಗಿದೆ ಎಂದು ಡಾ. ಎಸ್.ವೈ ಗುರುಶಾಂತ್ ಹೇಳಿದರು.

ಕುಂದಾಪುರ ತಾಲೂಕಿನ ಆಲೂರು ಗ್ರಾಮದ ಹಾಡಿಮನೆಯಲ್ಲಿ ಅ.10 ರಿಂದ 16 ರವರೆಗೆ 7 ದಿನಗಳ ಕಾಲ ನಡೆದ ಕೊರಗ ಮಕ್ಕಳ ರಂಗ ತರಬೇತಿ ಶಿಬಿರ ‘ಕಾಡ್ತ್ ಕಿಜ್ರ್ ಬಣ್ತ್ ಹೆಜ್’ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ರಂಗ ತರಬೇತಿ ಶಿಬಿರ ಈ ಸಮುದಾಯದ ನಡುವೆ ಹೆಚ್ಚೆಚ್ಚು ನಡೆಯಬೇಕು. ಸರಕಾರದ ಯಾವುದೇ ಇಲಾಖೆಗಳ ಸಹಕಾರ ಇಲ್ಲದೇ ದಾನಿಗಳ ನೆರವಿನಿಂದ ನಡೆಯುತ್ತಿದ್ದು ಕೊರಗ ಸಮುದಾಯದವರೇ ನೀಡಿದ ಆಹಾರ ಸಾಮಗ್ರಿ ಸಂಗ್ರಹಿಸಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ರೀತಿಯ ಚಟುವಟಿಕೆಗಳನ್ನು ಮುಂದುವರಿಸಬೇಕಾದಲ್ಲಿ ಸರಕಾರದ ಪ್ರೋತ್ಸಾಹ ಕೂಡ ಅಗತ್ಯ ಎಂದರು.
ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಸಮುದಾಯ ಕುಂದಾಪುರ ಇದರ ಅಧ್ಯಕ್ಷ ಉದಯ ಗಾವಂಕರ್ ಮಾತನಾಡಿ, ಕೊರಗ ಸಮುದಾಯದ ಪ್ರತಿಭಾನ್ವಿತ ಮಕ್ಕಳಿಗೆ ಅವರೊಳಗಿದ್ದ ಸುಪ್ತ ಪ್ರತಿಭೆಯನ್ನು ಅನಾವರಣ ಮಾಡಲಾಗಿದೆ. ಈ ಸಮುದಾಯ ಸಾಂಸ್ಕೃತಿಕವಾಗಿ ಅತ್ಯಂತ ಶ್ರೀಮಂತವಾಗಿದೆ. ಅವರ ಸಮುದಾಯ ನಾಯಕ ಹುಭಾಶಿಕನ ಕಥೆಯ ಎಳೆಯನ್ನು ಹಿಡಿದುಕೊಂಡು ನಾಟಕವನ್ನು ಕಟ್ಟಿದೇವೆ. ಒಂದು ವಾರದಲ್ಲಿ ನಾವು ಮಕ್ಕಳೊಂದಿಗೆ ಕೊರಗ ಸಮುದಾಯದ ಬಂಧುಗಳೊಂದಿಗೆ ಕಲಿತಿದ್ದೇವೆ. ಈ ಸಮುದಾಯದ ನಡುವೆ ನಾವು ಕಲಿಯಬೇಕಾದ ವಿಷಯಗಳು ಬಹಳಷ್ಟಿದೆ ಎಂದರು.
ವೇದಿಕೆಯಲ್ಲಿ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಸಹ ಸಂಚಾಲಕ ಡಾ. ಕೃಷ್ಣಪ್ಪ ಕೊಂಚಾಡಿ, ಜನಶಕ್ತಿ ಸೇವಾ ಟ್ರಸ್ಟ್ ಅಧ್ಯಕ್ಷ ಪಿಲಿಪ್ ಡಿಸಿಲ್ವ್, ಗಂಗೊಳ್ಳಿ ಠಾಣೆ ಉಪನಿರೀಕ್ಷಕ ವಿನಯ್ ಎಂ. ಕೊರ್ಲಹಳ್ಳಿ, ಲಕ್ಷ್ಮಣ ಬೈಂದೂರು, ಆಲೂರು ಗ್ರಾ.ಪಂ ಅಧ್ಯಕ್ಷೆ ಜಲಜ ಶೆಡ್ತಿ, ಉಪಾಧ್ಯಕ್ಷ ರವಿ ಶೆಟ್ಟಿ, ಶಿಬಿರದ ನಿರ್ದೇಶಕ ವಾಸುದೇವ ಗಂಗೇರ, ಕೊರಗ ಮುಖಂಡ ಗಣೇಶ ಆಲೂರು, ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ ಜಿಲ್ಲಾ ಅಧ್ಯಕ್ಷ ಶ್ರೀಧರ ನಾಡ ಉಪಸ್ಥಿತರಿದ್ದರು.
ರಮೇಶ್ ಗುಲ್ವಾಡಿ ನಿರೂಪಿಸಿದರು. ರೇವತಿ ಸ್ವಾಗತಿಸಿದರು, ಶ್ರೀಧರ ನಾಡ ವಂದಿಸಿದರು
ಕೊನೆಯಲ್ಲಿ ಶಿಬಿರದ ಮಕ್ಕಳಿಂದ ಹುಭಾಶಿಕ ನಾಟಕ ಪ್ರಸುತ್ತ ಪಡಿಸಲಾಯಿತು.
Comments are closed.