ಕರ್ನಾಟಕ

ಚಿನ್ನದ ಕಾಯಿನ್ ನೀಡುವುದಾಗಿ ವಂಚಿಸುತ್ತಿದ್ದ ಖತರ್ನಾಕ್ ಜಾಲವನ್ನು ಹೆಡೆಮುರಿಕಟ್ಟಿದ ಚಿಕ್ಕಮಗಳೂರು ಸಿಇಎನ್ ಪೊಲೀಸರು

Pinterest LinkedIn Tumblr

ಚಿಕ್ಕಮಗಳೂರು: ಚಿನ್ನದ ನಾಣ್ಯಗಳನ್ನು ನೀಡುವುದಾಗಿ ತಿಳಿಸಿ ಹಣ ಪಡೆದು ಬಳಿಕ ನಕಲಿ ನಾಣ್ಯ ನೀಡುತ್ತಿದ್ದ ಖತರ್ನಾಕ್ ಆರೋಪಿಗಳನ್ನು ಚಿಕ್ಕಮಗಳೂರು ಸಿಇಎನ್ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ಶ್ರೀನಿವಾಸ ನಾಯ್ಕ, ಕೋಟಿ ನಾಯ್ಕ, ಹಾಗೂ ವೆಂಕಟೇಶ ನಾಯ್ಕ ಬಂಧಿತ ಆರೋಪಿಗಳು. ಇವರಿಂದ 5000 ರೂ.ನಗದು, ಸಾರ್ವಜನಿಕರಿಗೆ ಮೋಸದಿಂದ ಮಾರಾಟ ಮಾಡಲು ಇಟ್ಟುಕೊಂಡಿದ್ದ 1 ಕೆ.ಜಿ 955 ಗ್ರಾಂನಷ್ಟು ತಾಮ್ರದ ಕಾಯಿನ್ ಗಳು, ಕೃತ್ಯಕ್ಕೆ ಬಳಸಿದ ಮೂರು ಮೊಬೈಲ್ ಫೋನ್, ಕೃತ್ಯಕ್ಕೆ ಬಳಸಿದ ಸ್ವಿಪ್ಟ್ ಡಿಸೈರ್‌ ಕಾರು ಹಾಗೂ ಆರೋಪಿಗಳು ದೂರುದಾರರಿಗೆ ನೀಡಿದ ಎರಡು ಅಸಲಿ ಚಿನ್ನದ ಕಾಯಿನ್ ಮತ್ತು 20 ನಕಲಿ ಚಿನ್ನದ ಕಾಯಿನ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಘಟನೆ ವಿವರ:
ಇಲ್ಲಿನ ನಿವಾಸಿಯೊಬ್ಬರು ಚಿಕ್ಕಮಗಳೂರು ಸಿ.ಇ.ಎನ್ ಪೊಲೀಸ್‌ ಠಾಣೆಗೆ ಬಂದು ನೀಡಿದ ದೂರು ನೀಡಿದ್ದು ಅವರಿಗೆ ಹರಪ್ಪನಹಳ್ಳಿ ತಾಲ್ಲೂಕು ವಾಸಿಯಾದ ಶ್ರೀನಿವಾಸ ನಾಯ್ಕ ಎಂಬುವವನು ಪರಿಚಯವಾಗಿದ್ದು, 20 ದಿನಗಳ ಹಿಂದೆ ಶ್ರೀನಿವಾಸ ನಾಯ್ಕ ಫೋನ್ ಮಾಡಿ ತನ್ನ ಬಳಿ ಎರಡು ಕೆ.ಜಿಯಷ್ಟು ಚಿನ್ನದ ಕಾಯಿನ್ ಗಳು ಇದ್ದು ಅದನ್ನು ನಿನಗೆ ಕಡಿಮ ಬೆಲೆಗೆ ಕೊಡುತ್ತೇನೆ ಎಂದು ಪುನಃ ಪುನಃ ಕರೆ ಮಾಡಿದ್ದಲ್ಲದೆ ಎರಡು ಕೆ.ಜಿಯಷ್ಟು ಚಿನ್ನದ ಕಾಯಿನ್ ಗಳನ್ನು 5 ಲಕ್ಷಕ್ಕೆ ಕೊಡುವುದಾಗಿ ಪುಸಲಾಯಿಸಿದ್ದ. ಅ.13ರಂದು ಆರೋಪಿಗಳಾದ ಶ್ರೀನಿವಾಸನಾಯ್ಕ, ಕೋಟಿ ನಾಯ್ಕ ಹಾಗೂ ವೆಂಕಟೇಶನಾಯ್ಕ ದೂರುದಾರರಿಗೆ ಸ್ಯಾಂಪಲ್ ಎಂದು 2 ಅಸಲಿ ಚಿನ್ನದ ಕಾಯಿನ್ ಗಳನ್ನು ಕೊಟ್ಟು ಚೆಕ್ ಮಾಡಿಸಿ ನಂತರ ಬೇಕಾದರ ತೆಗೆದುಕೊಳ್ಳಬಹುದು ಎಂದು ಹೇಳಿ 2 ಅಸಲಿ ಚಿನ್ನದ ಕಾಯಿನ್ ಗಳನ್ನು ನೀಡಿದ್ದರು. ಅದನ್ನು ಚೆಕ್ ಮಾಡಿಸಿದಾಗ ಅವು ಅಸಲಿ ಎಂದು ತಿಳಿದಿದ್ದು ನಂತರ ಆರೋಪಿಗಳು ಅದೇ ದಿನ ಸಂಜೆ 5000 ರೂ ಹಣವನ್ನು ಅವರಿಂದ ಫೋನ್ ಪೇ ಮಾಡಿಸಿಕೊಂಡಿದ್ದರು. ಬಳಿಕ ಚಿನ್ನದ ಕಾಯಿನ್ ಎಂದು ನಕಲಿ 20 ಕಾಯಿನ್ ಗಳನ್ನು ಕೊಟ್ಟು ವಂಚಿಸಿದ್ದು ನಂತರ ಅ ಕಾಯಿನ್ ಗಳನ್ನು ದೂರುದಾರ ವ್ಯಕ್ತಿ ಚೆಕ್ ಮಾಡಿಸಿದಾಗ ಅವುಗಳು ನಕಲಿ ಚಿನ್ನದ ಕಾಯಿನ್ ಎಂಬುದಾಗಿ ದೃಢವಾಗಿದ್ದರಿಂದ ಅ.14ರಂದು ಚಿಕ್ಕಮಗಳೂರು ಜಿಲ್ಲಾ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದರಂತೆಯೇ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದಲ್ಲಿ ಆರೋಪಿಗಳ ಪತ್ತೆ ಬಗ್ಗೆ ಚಿಕ್ಕಮಗಳೂರು ಜಿಲ್ಲೆ ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಂತೆ ಒಂದು ತಂಡವನ್ನು ರಚಿಸಿಕೊಂಡು ಆರೋಪಿಗಳನ್ನು ಸಖರಾಯಪಟ್ಟಣದ ಗೌಲಿಹಳ್ಳದ ಹತ್ತಿರ ಅ.15 ಬೆಳಗ್ಗೆ ವಶಕ್ಕೆ ಪಡೆಯಲಾಗಿತ್ತು.

ಈ ಹಿಂದೆಯೂ ಇದೇ ದಂಧೆ….
ಆರೋಪಿಗಳನ್ನು ವಿಚಾರಣೆ ಮಾಡಿದಾಗ ಈ ಆರೋಪಿಗಳು ಆಂಧ್ರಪ್ರದೇಶದ ತಿರುಪತಿಯಲ್ಲಿ ಸಾರ್ವಜನಿಕರಿಗೆ ವಂಚಿಸಿ 50 ಸಾವಿರ ಬೆಲೆಯ ನಕಲಿ ಕಾಯಿನ್ ಗಳನ್ನು, ಪಂಡರಪುರದಲ್ಲಿ 2 ಲಕ್ಷ ಬೆಲೆಯ ನಕಲ ಕಾಯಿನ್ ಗಳನ್ನು ಹಾಗೂ ಹುಬ್ಬಳ್ಳಿಯಲ್ಲಿ 1,70,000 ರೂ ಬೆಲೆಯ ನಕಲಿ ಕಾಯಿನ್ ಗಳನ್ನು ಮಾರಾಟ ಮಾಡಿದ ಬಗ್ಗೆ ತಿಳಿಸಿದ್ದಾರೆ. ಪ್ರಕರಣದಲ್ಲಿ ವಶಕ್ಕೆ ಪಡೆದ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಕಾರ್ಯಾಚರಣೆ ತಂಡ…
ಚಿಕ್ಕಮಗಳೂರು ಎಸ್ಪಿ ಉಮಾಪ್ರಶಾಂತ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕೃಷ್ಣಮೂರ್ತಿ ಜಿ. ಮಾರ್ಗದರ್ಶನದಂತೆ ಚಿಕ್ಕಮಗಳೂರು ಜಿಲ್ಲಾ ಸಿಇಎನ್ ಅಪರಾಧ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಕಾರ್ಯ ಪ್ರವೃತ್ತರಾಗಿದ್ದರು. ಕಾರ್ಯಾಚರಣೆಯಲ್ಲಿ ಸಿ.ಇ.ಎನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮುತ್ತುರಾಜ್ ಪಿಎಸ್ಐಗಳಾದ ನಾಸೀರ್‌ ಹುಸೇನ್‌, ರಘುನಾಥ್‌ ಎಸ್.ವಿ, ಸಿಬ್ಬಂದಿಗಳಾದ ಎಎಸ್ಐ ಎಂ.ಸಿ ಪ್ರಕಾಶ್, ಹೆಡ್ ಕಾನ್ಸ್‌ಟೇಬಲ್ ಗಳಾದ ವಿನಾಯಕ, ರಾಜು ಡಿ., ಇಮ್ರಾನ್‌ ಖಾನ್‌, ಸಿಬ್ಬಂದಿಗಳಾದ ಅನ್ಸರ್ ಪಾಷಾ, ರಮೇಶ, ಹರೀಶ್, ಮಹೇಂದ್ರ, ಧರ್ಮರಾಜ್ ಮೊದಲಾದವರು ಇದ್ದರು.

Comments are closed.