ಉತ್ತರಕನ್ನಡ: ಜಿಲ್ಲೆಯ ಹೊನ್ನಾವರ ತಾಲೂಕಿನ ಜಲವಳ್ಳಿ ಗ್ರಾಮದಲ್ಲಿ ತಾಯಿ ತನ್ನ 2 ವರ್ಷದ ಮಗುವಿನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಜಲವಳ್ಳ ಕರ್ಕಿಯ ನಿವಾಸಿ ವನಿತಾ ಮಂಜುನಾಥ ನಾಯ್ಕ (28) ಹಾಗೂ ಆಕೆಯ 2 ವರ್ಷದ ಪುತ್ರಿ ಮನಸ್ವಿ ಮೃತಪಟ್ಟಿದ್ದಾರೆ. ಕೌಟುಂಬಿಕ ಕಲಹವೇ ಆತ್ಮಹತ್ಯೆಗೆ ಕಾರಣ ಎನ್ನಲಾಗುತ್ತಿದೆ.
ದೂರಿನ ಸಾರಾಂಶ…
ಘಟನೆ ಬಗ್ಗೆ ಮೃತ ಮಹಿಳೆಯ ಸಹೋದರ ಚಿಕ್ಕನಕೋಡದ ನಿವಾಸಿ ದಯಾನಂದ ನಾಯ್ಕ ಹೊನ್ನಾವರ ಠಾಣೆಗೆ ದೂರು ನೀಡಿದ್ದು, ‘ತನ್ನ ತಂಗಿಯ ಗಂಡ ಮಂಜುನಾಥ ಎಂಬಾತ ತಂಗಿಯ ಶೀಲದ ಮೇಲೆ ಸಂಶಯ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ಹೊಡೆದು, ಮಾನಸಿಕ ಹಿಂಸೆ ನೀಡುತ್ತಾ ಬಂದಿದ್ದಾನೆ. ತನ್ನ ತಂಗಿಗೆ ಎರಡನೇ ಹೆಣ್ಣು ಮಗು ಮನಸ್ವಿ ಹುಟ್ಟಿದ ಮೇಲೆ ಈ ಹೆಣ್ಣು ಮಗು ತನ್ನದಲ್ಲ, ಮತ್ತೆ ಸಹಾ ಹೆಣ್ಣು ಮಗು ಹುಟ್ಟಿದ್ದೆ. ಮಗುವನ್ನು ಕರೆದುಕೊಂಡು ಹೋಗಿ ಎಲ್ಲಿಯಾದರೂ ಬಾವಿಯಲ್ಲಿ ಹಾರಿ ಸಾಯಿರಿ ಎಂದು ಆತ್ಮಹತ್ಯೆ ಮಾಡಿಕೊಳ್ಳುವಂತೆ ದುಷ್ಪ್ರೇರಣೆ ನೀಡುತ್ತಾ ಬಂದಿದ್ದಾನೆ. ತನ್ನ ತಂಗಿಗೆ ನಾದಿನಿಯರು ಕೂಡಾ ಕಿರುಕುಳ ನೀಡಿ, ಬೈಯುತ್ತಿದ್ದರು. ಎರಡನೇ ಹೆಣ್ಣು ಮಗು ಹುಟ್ಟಿದ ಬಗ್ಗೆ ಸಂಶಯ ಮಾಡಿ ಹೀಯಾಳಿಸುತ್ತಿದ್ದರು. ಇವರೆಲ್ಲರೂ ಸೇರಿ ನನ್ನ ತಂಗಿಗೆ ಕಿರುಕುಳ ನೀಡಿ, ಆತ್ಮಹತ್ಯೆ ಮಾಡಿಕೊಳ್ಳಲು ದುಷ್ಪ್ರೇರಣೆ ನೀಡಿದ್ದರಿಂದಲೇ ತನ್ನ ತಂಗಿ ವನಿತಾ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದಯಾನಂದ ನಾಯ್ಕ ಆರೋಪಿಸಿದ್ದಾರೆ
ಈ ಸಂಬಂಧ ಆರೋಪಿಗಳಾದ ಮೃತಳ ಪತಿ ಮಂಜುನಾಥ ಈಶ್ವರ ನಾಯ್ಕ, ಮೃತಳ ಅತ್ತೆ ಸಾವಿತ್ರಿ ಈಶ್ವರ ನಾಯ್ಕ, ನಾದಿನಿಯರಾದ ತಾರಾ ಮಂಜುನಾಥ ನಾಯ್ಕ, ನೇತ್ರಾ ಶೇಖರ ನಾಯ್ಕ ವಿರುದ್ಧ ದೂರು ದಾಖಲಾಗಿದೆ.
Comments are closed.