ಕರಾವಳಿ

ಕೊಡಿ ಹಬ್ಬಕ್ಕೆ ಸಾಕ್ಷಿಯಾದ ‘ಧ್ವಜಪುರ’; ರಥವನ್ನೇರಿದ ದೇವ ಶ್ರೀ ಕೋಟಿಲಿಂಗೇಶ್ವರ | ಸಂಭ್ರಮದಲ್ಲಿ ಭಕ್ತಸಾಗರ (Video)

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)
ಕುಂದಾಪುರ: ಕರಾವಳಿಯ ಸಪ್ತ ಪುಣ್ಯ ಕ್ಷೇತ್ರಗಳಲ್ಲೊಂದಾದ ಪರಶುರಾಮ ಸೃಷ್ಟಿಯೆಂದು ಹೆಸರುವಾಸಿಯಾದ ಪುರಾಣ ಪ್ರಸಿದ್ಧ ಧ್ವಜಪುರ ಖ್ಯಾತಿಯ ಕೋಟೇಶ್ವರದ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯಾದ ಕೊಡಿ ಹಬ್ಬ ನ.19ರಂದು ಶುಕ್ರವಾರ ಸಂಭ್ರಮದಿಂದ ಜರುಗಿತು.

ಕಳೆದ ವರ್ಷ ಕೋವಿಡ್ ಹಿನ್ನಲೆ ಸರಕಾರದ ಮಾರ್ಗಸೂಚಿಯಂತೆ ಸರಳ ರಥೋತ್ಸವ ನಡೆದಿತ್ತು. ಆದರೆ ಈ ಬಾರಿ ಕೊರೋನಾತಂಕದ ನಡುವೆಯೂ ಕೋವಿಡ್ ನಿಯಮಾವಳಿಯಂತೆ ‘ಮನ್ಮಹಾರಥೋತ್ಸವ’ ನಡೆದಿದೆ. ರಥೋತ್ಸವದ ಅಂಗವಾಗಿ ನ.12ರಿಂದಲೇ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿದ್ದವು. ಶುಕ್ರವಾರ ಮಧ್ಯಾಹ್ನ 11.50ಕ್ಕೆ ಮಕರ ಲಗ್ನ ಸುಮುಹೂರ್ತದಲ್ಲಿ ಶ್ರೀ ಮನ್ಮಹಾರಥೋತ್ಸವ ಪ್ರಕ್ರಿಯೆ ಆರಂಭವಾಗಿದ್ದು 12.30 ರ ಹೊತ್ತಿಗೆ ಸಾವಿರಾರು ಮಂದಿ ಭಕ್ತರ ಉಪಸ್ಥಿತಿಯಲ್ಲಿ ರಥೋತ್ಸವ ನಡೆಯಿತು. ಮಾಮೂಲಿಯಂತೆ ಕೋಟೇಶ್ವರ ರಥೋತ್ಸವಕ್ಕೂ ಮುಂಚೆ ರಥಕ್ಕೆ ಗರುಡ ಪ್ರದಕ್ಷಣೆ ಹಾಕಿದೆ. ಈ ಬಾರಿ ರಥೋತ್ಸವ ಸಮಯ ಹನಿಹನಿ ಮಳೆ ಬಂದಿತ್ತು.

ದೇವಸ್ಥಾನದಿಂದ ವೈಭವದ ಮೆರವಣಿಗೆಯಲ್ಲಿ ಬಂದ ಬಿದಿರಿನ ಕೊಡಿ, ತಾಂಡವೇಶ್ವರ ದೇವರು, ತ್ರಿಶೂಲ, ಗೋಳೆ ದೇವರು ಹಾಗೂ ಕೋಟಿಲಿಂಗೇಶ್ವರ ಉತ್ಸವ ಮೂರ್ತಿಗಳನ್ನು ಜಯಕಾರಗಳೊಂದಿಗೆ ಸ್ವಾಗತಿಸಲಾಯಿತು. ಬಿದಿರಿನ ಕೊಡಿಯನ್ನು ಮೊದಲು ರಥದ ಮೇಲಕ್ಕೆ ಕೊಂಡೊಯ್ಯುವ ಮೂಲಕ ರಥಾರೋಹಣಕ್ಕೆ ಚಾಲನೆ ನೀಡಲಾಯಿತು. ನಂತರ ತಾಂಡವೇಶ್ವರ ದೇವರು, ತ್ರಿಶೂಲ ಹಾಗೂ ಗೋಳೆ ದೇವರು ರಥದ ಮೇಲಕ್ಕೆ ಏರಿಸಲಾಯಿತು.ದೇವರ ಮೂರ್ತಿಗಳು ರಥವನ್ನು ಏರಿದ ಬಳಿಕ ಕೋಟಿಲಿಂಗೇಶ್ವರ ದೇವರ ಉತ್ಸವ ಮೂರ್ತಿಯನ್ನು ತಲೆ ಮೇಲಿರಿಸಿ ಚಂಡೆಗಳ ತಾಳಕ್ಕೆ ತಾಂಡವ ನರ್ತನದ ಮೂಲಕ ದೇವರೊಂದಿಗೆ ರಥದ ಮೇಲೇರಿದರು. ಉತ್ಸವ ಮೂರ್ತಿಯ ರಥಾರೋಹಣವಾದ ಬಳಿಕ ಮಂಗಳಾರತಿ, ಮೊದಲಾದ ಧಾರ್ಮಿಕ ಸೇವೆಗಳನ್ನು ಸಲ್ಲಿಸಲಾಯಿತು. ದೇವಸ್ಥಾನ ತಂತ್ರಿ ಪ್ರಸನ್ನ ಕುಮಾರ ಐತಾಳ್ ನೇತ್ರತ್ವದಲ್ಲಿ ಧಾರ್ಮಿಕ ವಿಧಿ ನೆರವೇರಿಸಲಾಯಿತು. ರಥೋತ್ಸವದ ವೇಳೆ ‘ಹರಹರ ಮಹಾದೇವ’ ಉದ್ಘಾರ ಭಕ್ತಾಧಿಗಳಲ್ಲಿ ಭಕ್ತಿ ಪರವಶಗೊಳ್ಳುವಂತೆ ಮಾಡಿತು.

ಈ ಸಂದರ್ಭದಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಪದಾಧಿಕಾರಿಗಳು, ಹಾಗೂ ಅರ್ಚಕರು, ಸಿಬ್ಬಂದಿ ವರ್ಗ ಹಾಗು ಸಮಸ್ತ ಕೋಟೇಶ್ವರ ಗ್ರಾಮಸ್ಥರು, ಭಕ್ತಾಭಿಮಾನಿಗಳು ಉಪಸ್ಥಿತರಿದ್ದರು. ಉಡುಪಿ ಎಸ್ಪಿ ವಿಷ್ಣುವರ್ಧನ್ ಮಾರ್ಗದರ್ಶನದಲ್ಲಿ ಕುಂದಾಪುರ ಡಿವೈಎಸ್ಪಿ ಶ್ರೀಕಾಂತ್ ಕೆ, ಸಿಪಿಐ ಗೋಪಿಕೃಷ್ಣ, ಕುಂದಾಪುರ ನಗರ ಠಾಣೆ ಪಿಎಸ್ಐ ಸದಾಶಿವ ಗವರೋಜಿ, ಸಂಚಾರಿ ಠಾಣೆ ಪಿಎಸ್ಐ ಸುಧಾ ಪ್ರಭು ಸಹಿತ ಜಿಲ್ಲೆಯ ವಿವಿಧ ಠಾಣೆಯ ಅಧಿಕಾರಿಗಳು, ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.

ಧ್ವಜಪುರ ಖ್ಯಾತಿಯ ಕೋಟೇಶ್ವರದ ಕೊಡಿಹಬ್ಬ…
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಸಪ್ತಕ್ಷೇತ್ರಗಳಲ್ಲಿ ಒಂದಾಗಿರುವ ಇತಿಹಾಸ ಪ್ರಸಿದ್ಧ ಕುಂದಾಪುರ ತಾಲೂಕಿನ ಕೋಟೇಶ್ವರದ ಮಹತೋಬಾರ ಕೋಟಿಲಿಂಗೇಶ್ವರ ದೇವಸ್ಥಾನ ಹಲವಾರು ಶತಮಾನಗಳಷ್ಟು ಪುರಾತನವಾದ ದೇವಳಗಳಲ್ಲಿ ಒಂದಾಗಿದೆ. ಇಲ್ಲಿ ನಡೆಯುವ ಕೊಡಿ ಹಬ್ಬದ ಉತ್ಸವದ ಹಿಂದೆ ಪರಂಪರಾನುಗತ ನಂಬಿಕೆ ಇದೆ. ವ್ಯವಹಾರಸ್ಥರಿಗೆ ಹೊಸ ಲೆಕ್ಕಚಾರ ಪ್ರಾರಂಭವಾಗಿ ಅಭಿವೃದ್ಧಿಯ ಕುಡಿಯೊಡೆಯುತ್ತದೆ, ಅವಿವಾಹಿತರಿಗೆ ಬಾಳಜೋಡಿ ಸಿಗುತ್ತದೆ, ನವ ವಿವಾಹಿತರಿಗೆ ಕರುಳ ಕುಡಿ ಚಿಗುರಿ ಸಂತಸ ಚಿಮ್ಮುತ್ತದೆ, ಕೃಷಿಕರಿಗೆ ಫಸಲು ತುಂಬಿ ಸಮೃದ್ಧಿಯ ಕುಡಿ ಮೊಳೆಯುತ್ತದೆ ಎಂಬ ನಂಬಿಕೆಯೇ ಜಿಲ್ಲೆಯ ಈ ಅತಿದೊಡ್ಡ ರಥೋತ್ಸವಕ್ಕೆ ‘ಕೊಡಿಹಬ್ಬ’ ಎಂದು ಹೆಸರು ಬಂದಿದೆ. ಅಲ್ಲದೇ ರಾಜ್ಯದ ಪ್ರಮುಖ ದೊಡ್ದ ಗಾತ್ರದ ರಥಗಳಲ್ಲಿ ಕೋಟೇಶ್ವರದ ಈ ರಥವೂ ಒಂದು. ಈ ಬ್ರಹತ್ ಗಾತ್ರದ ಬ್ರಹ್ಮ ರಥದಲ್ಲಿ ವಿವಿಧ ಶಿಲ್ಪ ಕಲೆಯ ಕೆತ್ತನೆಗಳು ರಚಿಸಲ್ಪಟ್ಟಿದೆ.

ಸುತ್ತಕ್ಕಿ ಸೇವೆ: ಸುಮಾರು 4.5 ಎಕರೆ ವಿಸ್ತೀರ್ಣದ ವಿಶಾಲವಾದ ಈ ಕೆರೆಗೆ ಸುತ್ತಕ್ಕಿ ತಳಿದರೆ ತಮ್ಮ ಇಷ್ಟಾರ್ಥ ಈಡೇರುತ್ತದೆ ಎಂಬ ನಂಬಿಕೆಯಿಂದ ಹಬ್ಬದ ದಿನ ಬೆಳಿಗ್ಗೆ 4 ಗಂಟೆಗೂ ಮೊದಲೇ ಹರಕೆ ಹೊತ್ತ ಭಕ್ತಾಭಿಮಾನಿಗಳು ಕೆರೆಯಲ್ಲಿ ತೀರ್ಥ ಸ್ನಾನ ಮಾಡಿ ಅಕ್ಕಿಯನ್ನು ಈ ಕೆರೆಯ ಸುತ್ತ ಹಾಕುವುದು ಸಂಪ್ರದಾಯಕ್ಕೆ ಸುತ್ತಕ್ಕಿ‌‌ ಸೇವೆ ಎನ್ನುತ್ತಾರೆ.

Comments are closed.