ಕರ್ನಾಟಕ

ಪುನೀತ್ ರಾಜ್‌ಕುಮಾರ್ ಹೆಸರಲ್ಲಿ ಉಚಿತ ವಸತಿ ಶಾಲೆ ನಿರ್ಮಾಣ: ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ

Pinterest LinkedIn Tumblr

ಬೆಂಗಳೂರು: ಕನ್ನಡ ಚಿತ್ರರಂಗದ ‘ಯುವರತ್ನ’ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಸ್ಮರಣಾರ್ಥ ವಸತಿ ಶಾಲೆ ನಿರ್ಮಿಸುವುದಾಗಿ ಮಾಜಿ ಸಚಿವ ಗಾಲಿ ಜನಾರ್ಧನ ರೆಡ್ಡಿ ಘೋಷಿಸಿದ್ದಾರೆ.

ನಟ ಪುನೀತ್ ರಾಜಕುಮಾರ್ ಅವರ 11ನೇ ದಿನದ ಸಮಾರಾಧನೆ ನಿಮಿತ್ತ ಬಳ್ಳಾರಿಯಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಬಡ ಮಕ್ಕಳಿಗೆ ಉಚಿತ ಶಿಕ್ಷಣಕ್ಕಾಗಿ ವಸತಿ ಶಾಲೆ ನಿರ್ಮಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ ತಮ್ಮ ಅಧಿಕೃತ ಸೋಶಿಯಲ್ ಮಿಡಿಯಾ ಖಾತೆಗಳಲ್ಲಿ ಪುನೀತ್ ರಾಜಕುಮಾರ್ ಬಗೆಗಿನ ಒಲವು, ಜೊತೆಗಿನ ಒಡನಾಟದ ಬಗ್ಗೆ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಗಾಲಿ ಜನಾರ್ಧನ ರೆಡ್ಡಿ ಬರೆದುಕೊಂಡಿದ್ದು…..
‘ಕನ್ನಡದ ಕಂದ, ಖ್ಯಾತ ನಾಯಕ ನಟ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ ಅವರ ನಿಧನದ 11ನೇ ದಿನವಾದ ಇಂದು ಬಳ್ಳಾರಿಯಲ್ಲಿ ನಾನು ನನ್ನ ತಾಯಿ ಹೆಸರಿನಲ್ಲಿರುವ ಶ್ರೀ ರುಕ್ಮಿಣಮ್ಮ ಚೆಂಗಾರೆಡ್ಡಿ ವೃದ್ಧಾಶ್ರಮದಲ್ಲಿ, ಶ್ರೀಮತಿ ಲಕ್ಷ್ಮಿ ಅರುಣಾ, ಸಹೋದರ ಹಾಗೂ ಬಳ್ಳಾರಿ ನಗರದ ಶಾಸಕರಾದ ಸೋಮಶೇಖರ್ ರೆಡ್ಡಿ, ಬಳ್ಳಾರಿ ನಗರ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾದ ಪಾಲಣ್ಣ, ಬಳ್ಳಾರಿಯ ನಗರ ಪಾಲಿಕೆ ಸದಸ್ಯರು ಹಾಗೂ ಮತ್ತಿತರ ಮುಖಂಡರ ಜೊತೆಯಲ್ಲಿ ಸಹೋದರ ಪುನೀತ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಅಪ್ಪುಗೆ ಭಾವ ಪೂರ್ಣ ಶ್ರದ್ಧಾಂಜಲಿಯನ್ನು ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ವೃದ್ಧಾಶ್ರಮದಲ್ಲಿರುವ ಹಿರಿಯರಿಗೆ ಹೊಸ ಬಟ್ಟೆ ಮತ್ತು ಅನ್ನದಾನ ಸಂತರ್ಪಣೆ ಮಾಡಲಾಯಿತು’.

‘ನಾನು ಮೊದಲಿನಿಂದಲೂ ಪುನೀತ್ ರಾಜ್ ಕುಮಾರ್ ಅವರ ಜೊತೆಯಲ್ಲಿ ಅವಿನಾಭಾವ ಸಂಬಂಧ ಹೊಂದಿದ್ದೆ. ಜೊತೆಗೆ ಅವರ ಚಿತ್ರಗಳಲ್ಲಿನ ಸಮಾಜಮುಖಿ ಸಂದೇಶಗಳು ನನಗೆ ಅತ್ಯಂತ ಪ್ರಿಯವಾದವು. ಅವರ “ರಾಜಕುಮಾರ” ಚಿತ್ರದಲ್ಲಿ ಬರುವ ವೃದ್ಧಾಶ್ರಮದಲ್ಲಿನ ಸನ್ನಿವೇಶಗಳು ಹಾಗೂ ಎಲ್ಲಾ ಹಿರಿಯರಿಗೆ ಅವರು ತೋರಿಸುವ ಪ್ರೀತಿ, ಕಾಳಜಿ ಸಮಾಜಕ್ಕೆ ಅವರು ಕೊಟ್ಟ ಒಳ್ಳೆ ಸಂದೇಶದಿಂದ ಆ ಚಿತ್ರದ ಪ್ರೇರೇಪಣೆಯಿಂದ ಎಷ್ಟೋ ಕುಟುಂಬಗಳು ತಮ್ಮ ತಂದೆ ತಾಯಿಯನ್ನು ವೃದ್ಧಾಶ್ರಮದಿಂದ ಮರಳಿ ಮನೆಗಳಿಗೆ ಕರೆದುಕೊಂಡು ಹೋಗಿದ್ದಾರೆ. ಹಾಗಾಗಿ ನನಗೆ ಈ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ನನ್ನ ನೆಚ್ಚಿನ ತಾಯಿ ಹೆಸರಿನಲ್ಲಿರುವ ವೃದ್ಧಾಶ್ರಮದಲ್ಲಿ ಮಾಡುವುದು ಸೂಕ್ತವೆನಿಸಿತು’.

‘ಪುನೀತ್ ರಾಜ್ ಕುಮಾರ್ ಅವರ “ನೀನೇ ರಾಜಕುಮಾರ” ಹಾಡು ಈಗಲೂ ನನ್ನ ಮನಸ್ಸಿನಲ್ಲಿ ಹಾಗೆ ಅಚ್ಚಳಿಯದೇ ಉಳಿದಿದೆ. ಪುನೀತ್ ರವರು ಮತ್ತೆ ನಮ್ಮ ಕನ್ನಡ ನಾಡಿನಲ್ಲಿ ಹುಟ್ಟಿ ಬರಬೇಕು. ಪುನೀತ್ ಅವರು ನನ್ನ ಮಗನಿಗೆ ಶೂಟಿಂಗ್ ಸ್ಥಳಕ್ಕೆ ಕರೆದುಕೊಂಡು ಹೋಗಿ ಸಾಕಷ್ಟು ಕಲಿಸಿದ್ದರು. ನನಗೆ ಪುನೀತ್ ರಾಜಕುಮಾರ್ ಅವರ ಸಾವು ಈಗಲೂ ನಂಬಲು ಸಾಧ್ಯವಾಗುತ್ತಿಲ್ಲ. ಅವರ ನೆನಪಿಗಾಗಿ ಬಳ್ಳಾರಿ ನಗರದಲ್ಲಿ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಉಚಿತ ವಸತಿ ಶಾಲೆ ನಿರ್ಮಾಣದ ಯೋಜನೆಯನ್ನು ಹಾಕಿಕೊಂಡಿರುವೆ. ಶೀರ್ಘದಲ್ಲಿಯೇ ವಸತಿ ಶಾಲೆ ನಿರ್ಮಾಣ ಮಾಡಲಾಗುವುದು. ಪುನೀತ್ ರಾಜ್ ಕುಮಾರ್ ಅವರಿಗೆ ಪದ್ಮಶ್ರೀ, ಪದ್ಮಭೂಷಣ ಸೇರಿದಂತೆ ಇನ್ನೂ ದೊಡ್ಡ, ದೊಡ್ಡ ಪ್ರಶಸ್ತಿಗಳು ಲಭಿಸಲಿ ಎಂದು ಆಶಿಸುತ್ತೇನೆ..’ ಎಂದು ಗಾಲಿ ಜನಾರ್ಧನ ರೆಡ್ಡಿ ಅಧೀಕೃತ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

 

Comments are closed.