ಕರಾವಳಿ

ಕುಂದಾಪುರದಲ್ಲಿ ‘ಕನ್ನಡ ಕಲರವ’; ವಿವಿದೆಡೆ ನಡೆದ ಕಾರ್ಯಕ್ರಮ | ಕೋಡಿ ಕಡಲತಡಿಯಲ್ಲಿ ಕನ್ನಡದ ಕಂಪು(Video)

Pinterest LinkedIn Tumblr

(ವರದಿ- ಯೋಗೀಶ್ ಕುಂಭಾಸಿ)

ಕುಂದಾಪುರ: ತಾಲೂಕು ಆಡಳಿತ, ವಿವಿಧ ಸಂಘಟನೆ, ಇಲ್ಲಿನ ಪುರಸಭೆ ಆಶ್ರಯದಲ್ಲಿ ರಾಜ್ಯೋತ್ಸವ ನಿಮಿತ್ತ ಕನ್ನಡಕ್ಕಾಗಿ ನಾವು ಅಭಿಯಾನದಲ್ಲಿ ಮಾತಾಡು ಮಾತಾಡು ಕನ್ನಡ ಗೀತೆ ಗಾಯನ ಗುರುವಾರ ಕೋಡಿ ಸೀವಾಕ್, ಮಿನಿ ವಿಧಾನ ಸೌಧ ಎದುರು, ಗಾಂಧಿ ಪಾರ್ಕ್, ಪದವಿಪೂರ್ವ ಕಾಲೇಜ್‍ನಲ್ಲಿ ಕನ್ನಡ ಗೀತೆಗಳ ಗಾಯನ ಮೇಳೈಸಿತು.

ವಿವಿಧ ಪ್ರದೇಶದಲ್ಲಿ ನಡೆದ ಕನ್ನಡ ಗೀತೆ ಗಾಯನದಲ್ಲಿ ಅಧಿಕಾರಿಗಳು, ಸಾರ್ವಜನಿಕರು ವಿವಿಧ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳು, ಕಾಲೇಜ್ ವಿದ್ಯಾರ್ಥಿಗಳ ಕಂಠದಲ್ಲಿ
ರಾಷ್ಟ್ರಕವಿ ಕುವೆಂಪು ಅವರ ‘ಬಾರಿಸು ಕನ್ನಡ ಡಿಂಡಿಂಮವ’, ನಿಸಾರ್ ಅಹಮ್ಮದ್ ಅವರ ‘ಜೋಗದ ಸಿರಿ ಬೆಳಕಿನಲ್ಲಿ’ ಹಾಗೂ ಡಾ. ಹಂಸಲೇಖ ಅವರ ‘ಹುಟ್ಟಿದರೇ ಕನ್ನಡ ನಾಡಲ್ಲಿ ಹುಟ್ಟಬೇಕು’ ಮೂರು ಅದ್ಭುತ ಗೀತೆಗಳಿಗೆ ಜನರು ಧ್ವನಿಯಾದರು.

ಕುಂದಾಪುರ ಮಿನಿ ವಿಧಾನಸೌಧದ ಮುಂಭಾಗದಲ್ಲಿ, ಮಹಾತ್ಮ ಗಾಂಧಿ ಉದ್ಯಾನವನ, ಫೇರಿ ರೋಡ್ ಉದ್ಯಾನವನ ಹಾಗೂ ಕುಂದಾಪುರ ಹೊಸ ಬಸ್ ನಿಲ್ದಾಣ ಸೇರಿದಂತೆ ಏಕಕಾಲದಲ್ಲಿ ಹಾಡುವುದರ ಮೂಲಕ ಈ ಕಾರ್ಯಕ್ರಮವಕ್ಕೆ ಚಾಲನೆ ನೀಡಲಾಯಿತು.

ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕಿದ ಕುಂದಾಪುರ ಪುರಸಭೆ ಮುಖ್ಯಾಧಿಕಾರಿ..
ಕುಂದಾಪುರ ಪುರಸಭೆಯ ಆಶ್ರಯದಲ್ಲಿ ಕೋಡಿ ಬ್ಯಾರೀಸ್ ಸಮೂಹ ಸಂಸ್ಥೆಯ ಸಹಯೋಗದೊಂದಿಗೆ ಆಯೋಜಿಸಿದ ಕಾರ್ಯಕ್ರಮ ತಾಲ್ಲೂಕಿನಲ್ಲೇ ವಿಭಿನ್ನವಾಗಿತ್ತು. ಕುಂದಾಪುರ ಕೋಡಿ ಸೀ ವಾಕ್, ಕೋಡಿ ಲೈಟ್ ಟವರ್ ಹಾಗೂ ಬ್ಯಾರೀಸ್ ಶಿಕ್ಷಣ ಸಂಸ್ಥೆ ಬಳಿ ಈ ಕಾರ್ಯಕ್ರಮ ನಡೆದಿದ್ದು ಕೊನೆ ಹಂತದಲ್ಲಿ ಪುರಸಭೆಯ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿಯವರು ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಹೆ ಹೆಜ್ಜೆ ಹಾಕುವ ಮೂಲಕ ವಿದ್ಯಾರ್ಥಿಗಳಿಗೆ ಹುರುಪು ತುಂಬಿದರು. ಈ ಕಾರ್ಯಕ್ರಮದ ವೇಳೆ ಕೋಡಿ ಬ್ಯಾರಿಸ್ ಸಂಸ್ಥೆಯವರು, ಶಿಕ್ಷಕರು ಇದ್ದರು‌. ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ್ ಮೆಂಡನ್, ಉಪಾಧ್ಯಕ್ಷ ಸಂದೀಪ್ ಖಾರ್ವಿ, ಸದಸ್ಯರಾದ ಲಕ್ಷ್ಮೀ, ಅಶ್ವಿನಿ ಪ್ರದೀಪ್ ಇದ್ದರು.

ಸಹಾಯಕ ಆಯುಕ್ತರಾದ ಕೆ. ರಾಜು ಮಾತನಾಡಿ, ಸರಕಾರದ ಆದೇಶದಂತೆ ರಾಜ್ಯದಲ್ಲಿ ನಡೆದ ಕಾರ್ಯಕ್ರಮವು ಕುಂದಾಪುರದಲ್ಲಿ ಯಶಸ್ವಿಯಾಗಿ ನಡೆದಿದೆ. ಸರಕಾರಿ ಕಚೇರಿ, ಶಾಲೆಗಳು, ಪ್ರವಾಸೋದ್ಯಮ ಕೇಂದ್ರಗಳ ಸಹಿತ ವಿವಿದೆಡೆ ನಡೆದ ಈ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರಕಿದೆ. ಕನ್ನಡ ಎನ್ನುವುದು ಒಂದು ದಿನ ಅಥವಾ ತಿಂಗಳಿಗೆ ಸೀಮಿತವಾಗಿರದೆ ರಕ್ತ, ನರನಾಡಿಗಳಲ್ಲಿ ಇರಬೇಕಿದ್ದು ಈ ಮೂಲಕ ಕನ್ನಡ ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದರು.

ಕಾರ್ಯಕ್ರಮದ ವಿವರ….
ಮಿನಿ ವಿಧಾನಸೌಧದಲ್ಲಿ ಸಹಾಯಕ ಆಯುಕ್ತ ಕೆ. ರಾಜು ಚಾಲನೆ ನೀಡಿದರು. ತಹಸೀಲ್ದಾರ್ ಕಿರಣ್ ಜಿ.ಗೌರಯ್ಯ, ಗ್ರಾಮ ಕಾರಣಿಕ ಆನಂದ ಕುಮಾರ್ ಇದ್ದು, ಗಾಯಕ ಗಣೇಶ್ ಗಂಗೊಳ್ಳಿ ಕನ್ನಡ ಗೀತೆ ಗಾಯನ ಮಾಡಿದರು.

ಫೆರ್ರಿ ರಸ್ತೆ ಪಾರ್ಕ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್, ಸದಸ್ಯರು, ಪೌರ ಕಾರ್ಮಿಕರು ಪಾಲ್ಗೊಂಡಿದ್ದರು.
ಮಹಾತ್ಮ ಗಾಂಧಿ ಉದ್ಯಾನವನದ ಕಾರ್ಯಕ್ರಮದಲ್ಲಿ ಕುಂದಾಪುರ ಪುರಸಭೆ ಮುಖ್ಯಾಧಿಕಾರಿ ಗೋಪಾಲ ಕೃಷ್ಣ ಶೆಟ್ಟಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಶೇಖರ ಪೂಜಾರಿ, ಸದಸ್ಯರಾದ ಗಿರೀಶ್ ದೇವಾಡಿಗ, ಪ್ರಭಾಕರ ವಿ, ಸಂತೋಷ್ ಕುಮಾರ್ ಶೆಟ್ಟಿ, ಪ್ರಭಾವತಿ ಶೆಟ್ಟಿ, ನಾಮನಿರ್ದೇಶಕ ಸದಸ್ಯರಾದ ಪುಷ್ಪಾ ಶೇಟ್, ರತ್ನಾಕರ ಶೇರೆಗಾರ್, ಪೌರ ಕಾರ್ಮಿಕರು, ಸಾರ್ವಜನಿಕರು, ವಿದ್ಯಾರ್ಥಿಗಳು ಗಾಯನದಲ್ಲಿ ಪಾಲ್ಗೊಂಡರು. ಹೊಸ ಬಸ್ ಸ್ಟ್ಯಾಂಡ್‍ನಲ್ಲಿ ಡಾ.ರಾಜಕುಮಾರ್ ಸಂಘಟನೆ ಅಧ್ಯಕ್ಷ ರತ್ನಾಕರ ಪೂಜಾರಿ ನೇತೃತ್ವದಲ್ಲಿ ನಡೆದ ಗೀತಗಾಯನದಲ್ಲಿ ಪದಾಧಿಕಾರಿಗಳು ಸಾರ್ವಜನಿಕರು ಪಾಲ್ಗೊಂಡಿದ್ದರು.

Comments are closed.