ರಾಷ್ಟ್ರೀಯ

ಬೆಡ್ ಗಾಗಿ ಕಾಯುತ್ತಿದ್ದ ‘ಕೊರೋನಾ’ ಮಹಿಳೆ ಸಾವು; ದೆಹಲಿಯ ಅಪೊಲೊ ಆಸ್ಪತ್ರೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ಮಹಿಳೆಯ ಕುಟುಂಬ ಸದಸ್ಯರು

Pinterest LinkedIn Tumblr

ನವದೆಹಲಿ: ದಕ್ಷಿಣ ದೆಹಲಿಯ ಇಂದ್ರಪ್ರಸ್ಥ ಅಪೊಲೊ ಆಸ್ಪತ್ರೆಯಲ್ಲಿ ಮಂಗಳವಾರ ಬೆಡ್ ಗಾಗಿ ಕಾಯುತ್ತಿದ್ದ ಕೊರೋನಾ ಸೋಂಕಿತ ಮಹಿಳೆ ಸಾವನ್ನಪ್ಪಿದ್ದು, ಘಟನೆಯಿಂದ ಆಕ್ರೋಶಗೊಂಡ ಮಹಿಳೆಯ ಕುಟುಂಬ ಸದಸ್ಯರು ಆಸ್ಪತ್ರೆಯ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯಲ್ಲಿ ನಾಲ್ವರು ಉದ್ಯೋಗಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ವರ್ಷ ದೆಹಲಿಯಲ್ಲಿ ಆರೋಗ್ಯ ಸಿಬ್ಬಂದಿಯ ಮೇಲೆ ಕೊರೋನಾ ಸೋಂಕಿತ ರೋಗಿಯ ಕುಟುಂಬದವರು ಹಲ್ಲೆ ನಡೆಸಿದ ಮೊದಲ ಘಟನೆ ಇದಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಆದರೆ, ಈ ಬಗ್ಗೆ ಈವರೆಗೂ ಯಾವುದೇ ದೂರು ದಾಖಲಾಗಿಲ್ಲ ಎಂದು ಅವರು ತಿಳಿಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಘಟನೆಯ ಚಿತ್ರಗಳಲ್ಲಿ ನೆಲದ ಮೇಲೆ ರಕ್ತ, ಮುರಿದ ಪೀಠೋಪಕರಣಗಳು ಆಸ್ಪತ್ರೆಯೊಳಗೆ ಹರಡಿಕೊಂಡಿವೆ.

ಘಟನೆಯ ವಿಡಿಯೋದಲ್ಲಿ ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಮತ್ತು ಕೆಲವರು ವಾಗ್ವಾದದಲ್ಲಿ ನಿರತರಾಗಿದ್ದು, ಆಸ್ಪತ್ರೆಯ ಪ್ರವೇಶ ದ್ವಾರದ ಬಳಿ ಪರಸ್ಪರ ಕೋಲುಗಳಿಂದ ಹೊಡೆದಾಡಿಕೊಂಡಿದ್ದಾರೆ.

ಮಂಗಳವಾರ ಮುಂಜಾನೆ ಮಹಿಳೆಯನ್ನು ಗಂಭೀರ ಸ್ಥಿತಿಯಲ್ಲಿ ಕರೆತರಲಾಗಿತ್ತು. ಆಕೆಯ ಸ್ಥಿತಿಗೆ ಸೂಕ್ತವಾದ ವೈದ್ಯಕೀಯ ಚಿಕಿತ್ಸೆಯನ್ನು ನಮ್ಮ ತಂಡ ನೀಡಿದೆ. ಬೆಡ್ ಗಳ ಕೊರತೆಯಿಂದಾಗಿ, ರೋಗಿಯನ್ನು ಮತ್ತೊಂದು ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಕುಟುಂಬಕ್ಕೆ ಸೂಚಿಸಲಾಯಿತು ಎಂದು ಆಸ್ಪತ್ರೆಯ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದುರದೃಷ್ಟವಶಾತ್, ರೋಗಿಯು ಬೆಳಗ್ಗೆ 8 ರ ಸುಮಾರಿಗೆ ಸಾವನ್ನಪ್ಪಿದರು, ಅದರ ನಂತರ ಅವರ ಕುಟುಂಬ ಸದಸ್ಯರು ವಿಧ್ವಂಸಕ ಕೃತ್ಯ ಎಸಗಿದ್ದು, ಆಸ್ಪತ್ರೆಯ ಆಸ್ತಿ ನಾಶ ಮಾಡಿ, ನಮ್ಮ ವೈದ್ಯರು ಮತ್ತು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದರು” ಎಂದು ಆಸ್ಪತ್ರೆ ಹೇಳಿದೆ.

Comments are closed.