ಕ್ರೀಡೆ

ಸೋಲಿನಿಂದ ಕಂಗೆಟ್ಟಿದ್ದ ಕೋಲ್ಕತಾ ನೈಟ್‌ ರೈಡರ್ಸ್‌ಗೆ ಪಂಜಾಬ್‌ ಕಿಂಗ್ಸ್‌ ವಿರುದ್ಧ ಜಯ

Pinterest LinkedIn Tumblr

ಅಹ್ಮದಾಬಾದ್: ಸತತ ನಾಲ್ಕು ಸೋಲಿನಿಂದ ಕಂಗಾಲಾಗಿದ್ದ ಕೋಲ್ಕತಾ ನೈಟ್‌ ರೈಡರ್ಸ್‌ ತಂಡ ಕೊನೆಗೂ ಗೆಲುವಿನ ಫಾರ್ಮುಲಾ ಕಂಡುಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಈ ಮೊದಲೇ ಅಂಗಣ ಬದಲಾದರೆ ಅದೃಷ್ಟವೂ ಬದಲಾಗುವ ಸಾಧ್ಯತೆ ಇದೆ ಎಂದು ಹೇಳಿದ್ದ ಕೆಕೆಆರ್‌ ಕ್ಯಾಪ್ಟನ್‌ ಐಯಾನ್‌ ಮಾರ್ಗನ್ ಮೊಟೆರಾದ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಪಂಜಾಬ್‌ ಕಿಂಗ್ಸ್‌ ಎದುರು ತಮ್ಮ ತಂಡಕ್ಕೆ 5 ವಿಕೆಟ್‌ಗಳ ಭರ್ಜರಿ ಜಯ ತಂದುಕೊಟ್ಟಿದ್ದಾರೆ.

ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಸೋಮವಾರ ಟಾಸ್ ಸೋತು ಮೊದಲು ಬ್ಯಾಟ್‌ ಮಾಡಿದ ಪಂಜಾಬ್‌ ಕಿಂಗ್ಸ್‌ ಮತ್ತೊಮ್ಮೆ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿತು. ಸ್ಟಾರ್‌ ಆಟಗಾರರು ರನ್‌ಗಳಿಸಲು ವಿಫಲರಾದ ಕಾರಣ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 123 ರನ್‌ ಗಳಿಸಲಷ್ಟೇ ಶಕ್ತವಾಯಿತು.

ಕೆಕೆಆರ್‌ ತಂಡದ ಪ್ರಮುಖ ಬೌಲರ್‌ಗಳು ಮಿಂಚಿದರು. ಲಯಕ್ಕೆ ಮರಳಿದ ಸುನಿಲ್‌ ನರೇನ್‌ 22ಕ್ಕೆ 2 ವಿಕೆಟ್‌ ಪಡೆದರೆ, ವೇಗಿಗಳಾದ ಪ್ಯಾಟ್‌ ಕಮಿನ್ಸ್‌ (31ಕ್ಕೆ 2) ಮತ್ತು ಪ್ರಸಿಧ್‌ ಕೃಷ್ಣ (30ಕ್ಕೆ 3) ಕರಾರುವಾಕ್ ದಾಳಿ ನಡೆಸಿ ಕಿಂಗ್ಸ್‌ ಬ್ಯಾಟ್ಸ್‌ಮನ್‌ಗಳನ್ನು ಬೇಟೆಯಾಡಿದರು.

ತಂಡವನ್ನು ಗೆಲುವಿನ ದಡ ಮುಟ್ಟಿಸಿದ ಕ್ಯಾಪ್ಟನ್ ಮಾರ್ಗನ್
ಸತತ ವೈಫಲ್ಯದಿಂದ ಸೊರಗಿದ್ದ ತಂಡಕ್ಕೆ ಚೈತನ್ಯ ತುಂಬುವ ಪಣತೊಟ್ಟು ಆಡಿದ ನಾಯಕ ಐಯಾನ್‌ ಮಾರ್ಗನ್‌ 124 ರನ್‌ಗಳ ಗುರಿ ಬೆನ್ನತ್ತುವಲ್ಲಿ ಬಹುಮುಖ್ಯ ಪಾತ್ರ ವಹಿಸಿದರು. ತಂಡದ 17 ರನ್‌ ಗಳಿಸುವ ಹೊತ್ತಿಗೆಮೂರು ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ಹಂತದಲ್ಲಿ ಆಸರೆಯಾಗಿ ನಿಂತ ಮಾರ್ಗನ್ ಅಜೇಯ 47 ರನ್‌ ಗಳಿಸಿ ಜಯದ ರೂವಾರಿಯಾದರು.

ನಾಲ್ಕನೇ ವಿಕೆಟ್‌ಗೆ ರಾಹುಲ್ ತ್ರಿಪಾಠಿ (41) ಜೊತೆಗೂಡಿ ಇನಿಂಗ್ಸ್‌ ಕಟ್ಟಿದ ಮಾರ್ಗನ್‌, ಪಂಜಾಬ್‌ ಬೌಲರ್‌ಗಳ ದಿಟ್ಟ ಸವಾಲನ್ನು ಅದ್ಭುತವಾಗಿ ಎದುರಿಸಿದರು. ಇನಿಂಗ್ಸ್‌ ಅಂತ್ಯದಲ್ಲಿ ಆಂಡ್ರೆ ರಸೆಲ್‌ (10) ವಿಕೆಟ್‌ ಕಳೆದುಕೊಂಡರೂ ದಿನೇಶ್‌ ಕಾರ್ತಿಕ್‌ (ಅಜೇಯ 12) ನೆರವಿನಿಂದ ತಂಡವನ್ನು ಗೆಲುವಿನ ದಡ ಮುಟ್ಟಿಸುವಂತೆ ಮಾಡಿದರು.

ಅಂಕಪಟ್ಟಿಯಲ್ಲಿ ಸುಧಾರಿಸಿದ ಕೆಕೆಆರ್‌
ಒಂದೇ ಒಂದು ಗೆಲುವು ಕೆಕೆಆರ್‌ನ ಅಂಕಪಟ್ಟಿಯ ಪಾತಾಳದಿಂದ ಮೇಲೆತ್ತಿದೆ. ಕಿಂಗ್ಸ್‌ ನೀಡಿದ ಗುರಿಯನ್ನು 16.4 ಓವರ್‌ಗಳಲ್ಲಿ ಮೆಟ್ಟಿನಿಂತ ನೈಟ್‌ ರೈಡರ್ಸ್‌ ನೆಟ್‌ ರನ್‌ರೇಟ್ ಸುಧಾರಿಸಿಕೊಳ್ಳುವ ಮೂಲಕ ಒಟ್ಟು ನಾಲ್ಕು ಅಂಕಗಳೊಂದಿಗೆ ಅಂಕಪಟ್ಟಿಯ 5ನೇ ಸ್ಥಾನಕ್ಕೇರಿದೆ. ಪಂಜಾಬ್‌ ಕಿಂಗ್ಸ್‌ ಈಗ 6ನೇ ಸ್ಥಾನಕ್ಕೆ ಜಾರಿದೆ.

ಐಪಿಎಲ್ 2021 ಟೂರ್ನಿಯ ಅಂಕಪಟ್ಟಿ

ಸಂಕ್ಷಿಪ್ತ ಸ್ಕೋರ್‌
ಪಂಜಾಬ್‌ ಕಿಂಗ್ಸ್‌: 20 ಓವರ್‌ಗಳಲ್ಲಿ 9 ವಿಕೆಟ್‌ಗೆ 123 ರನ್‌ (ಕೆಎಲ್ ರಾಹುಲ್ 19, ಮಯಾಂಕ್ ಅಗರ್ವಾಲ್ 31, ನಿಕೋಲಸ್‌ ಪೂರನ್ 19, ಕ್ರಿಸ್‌ ಜಾರ್ಡನ್ 30; ಪ್ಯಾಟ್‌ ಕಮಿನ್ಸ್‌ 31ಕ್ಕೆ 2, ಸುನಿಲ್ ನರೇನ್ 22ಕ್ಕೆ 2, ಪ್ರಸಿಧ್ ಕೃಷ್ಣ 30ಕ್ಕೆ 3, ವರುಣ್ ಚಕ್ರವರ್ತಿ 24ಕ್ಕೆ 1).
ಕೋಲ್ಕತಾ ನೈಟ್‌ ರೈಡರ್ಸ್‌: 16.4 ಓವರ್‌ಗಳಲ್ಲಿ 5 ವಿಕೆಟ್‌ಗೆ 126 ರನ್‌ (ರಾಹುಲ್‌ ತ್ರಿಪಾಠಿ 41, ಐಯಾನ್ ಮಾರ್ಗನ್ ಅಜೇಯ 47, ಆಂಡ್ರೆ ರಸೆಲ್‌ 10, ದಿನೇಶ್ ಕಾರ್ತಿಕ್ ಅಜೇಯ 12; ಮೊಯ್ಸೆಸ್‌ ಹೆನ್ರಿಕ್ಸ್‌ 5ಕ್ಕೆ 1, ಮೊಹಮ್ಮದ್‌ ಶಮಿ 25ಕ್ಕೆ 1, ಅರ್ಷದೀಪ್ ಸಿಂಗ್ 27ಕ್ಕೆ 1, ದೀಪಕ್ ಹೂಡ 20ಕ್ಕೆ 1).
ಪಂದ್ಯಶ್ರೇಷ್ಠ: ಐಯಾನ್‌ ಮಾರ್ಗನ್

ಮುಂದುವರಿದ ಗೇಲ್, ಪೂರನ್ ವೈಫಲ್ಯ
ಅನುಭವಿ ಎಡಗೈ ಬ್ಯಾಟ್ಸ್‌ಮನ್‌ 41 ವರ್ಷದ ಕ್ರಿಸ್‌ ಗೇಲ್‌ ಟೂರ್ನಿಯಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡಿಲ್ಲ. ಒಂದೆರಡು ಪಂದ್ಯದಲ್ಲಿ ರನ್‌ ಗಳಿಸಿದ್ದಾರಾದರೂ ಕೆಕೆಆರ್‌ ಎದುರು ಮೊದಲ ಎಸೆತದಲ್ಲೇ ವಿಕೆಟ್‌ ಕೈಚೆಲ್ಲಿದರು. ಐಪಿಎಲ್‌ ಇತಿಹಾಸದಲ್ಲಿ ಗೇಲ್ ಮೊದಲ ಎಸೆತದಲ್ಲಿ ವಿಕೆಟ್ ಒಪ್ಪಿಸಿರುವುದು ಇದು ಎರಡನೇ ಬಾರಿ ಆಗಿದೆ. ಮತ್ತೊಂದೆಡೆ ಯುವ ಪ್ರತಿಭೆ ನೀಕೋಲಸ್‌ ಪೂರನ್ (19) ಸತತ 5ನೇ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿರುವುದು ಪಂಜಾಬ್‌ ತಂಡದ ಕಳಪೆ ಬ್ಯಾಟಿಂಗ್‌ಗೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ.

Comments are closed.