ರಾಷ್ಟ್ರೀಯ

ದೆಹಲಿಯ ಜೈಪುರ್ ಗೋಲ್ಡನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 20 ಮಂದಿ ರೋಗಿಗಳು ಅಮ್ಲಜನಕದ ಕೊರತೆಯಿಂದ ಸಾವು

Pinterest LinkedIn Tumblr

ನವದೆಹಲಿ: ದೇಶದ ರಾಜಧಾನಿಯಲ್ಲಿರುವ ಜೈಪುರ್ ಗೋಲ್ಡನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 20 ಮಂದಿ ರೋಗಿಗಳು ಅಮ್ಲಜನಕದ ಕೊರತೆಯಿಂದ ಮೃತಪಟ್ಟರೆಂದು ಅಧಿಕಾರಿಗಳು ಶನಿವಾರ ತಿಳಿಸಿದ್ಧಾರೆ.

ಇದು ದೇಶಾದ್ಯಂತ ಎದ್ದಿರುವ ಆಕ್ಸಿಜನ್ ಕೊರತೆ ಸಮಸ್ಯೆಯ ಒಂದು ನಿದರ್ಶನವಾಗಿದೆ. ಈ ಆಸ್ಪತ್ರೆಯಲ್ಲಿ ಮೃತಪಟ್ಟ ಈ ರೋಗಿಗಳ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಇವರಿಗೆ ಆಕ್ಸಿಜನ್ ಸಪೋರ್ಟ್ ಅತ್ಯಗತ್ಯವಾಗಿತ್ತು. ಆದರೆ, ಆಸ್ಪತ್ರೆಯಲ್ಲಿ ಆಕ್ಸಿಜನ್ ದಾಸ್ತಾನು ಇಲ್ಲದ್ದರಿಂದ ಇವರು ಸಾವನ್ನಪ್ಪಿದ್ಧಾರೆ. ಈ ಬಗ್ಗೆ ಮಾತನಾಡಿದ ಜೈಪುರ್ ಗೋಲ್ಡನ್ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಡಿ ಕೆ ಬಲೂಜಾ, ತಮ್ಮ ಆಸ್ಪತ್ರೆಯಲ್ಲಿ 200ಕ್ಕೂ ಹೆಚ್ಚು ರೋಗಿಗಳಿದ್ದು ಅವರ ಪೈಕಿ ಶೇ. 80 ಮಂದಿಗೆ ಆಕ್ಸಿಜನ್ ಅಗತ್ಯ ಇದೆ. ಅಲ್ಲದೇ 35 ರೋಗಿಗಳು ಐಸಿಯುನಲ್ಲಿದ್ದಾರೆ. ಆದರೆ, ಬೆಳಗ್ಗೆ 10:45ರ ವೇಳೆಗೆ ಆಸ್ಪತ್ರೆಯಲ್ಲಿ ಉಳಿದಿದ್ದು ಕೇವಲ ಅರ್ಧಗಂಟೆಗೆ ಆಗುವಷ್ಟು ಆಮ್ಲಜನಕ ಮಾತ್ರ ಎಂದು ದುರವಸ್ಥೆ ಬಗ್ಗೆ ಬೆಳಕು ಚೆಲ್ಲಿದರು.

ನಿನ್ನೆ ಸಂಜೆಯೇ ಆಸ್ಪತ್ರೆಗೆ ಆಕ್ಸಿಜನ್ ಸರಬರಾಜು ಆಗಬೇಕಿತ್ತು. ಆದರೆ, ರೀಫಿಲ್ ಆಗಲು ಮಧ್ಯರಾತ್ರಿವರೆಗೆ ಕಾಯಬೇಕಾಯಿತು. ಅದೂ ಶೇ. 40ರಷ್ಟು ಮಾತ್ರ ಆಕ್ಸಿಜನ್ ಕೊಟ್ಟಿದ್ದಾರೆ. ಕೆಲವೇ ಗಂಟೆಗಳಲ್ಲಿ ಅದು ಖಾಲಿಯಾಗಿಹೋಗಿದೆ. ಸರ್ಕಾರ ಯಾವ ಭರವಸೆಯನ್ನೂ ನೀಡುತ್ತಿಲ್ಲ. ನಮಗೆ ಕೈಲಾದಷ್ಟು ನೆರವು ಒದಗಿಸುತ್ತೇವೆ ಎಂದಷ್ಟೇ ಎಲ್ಲರೂ ಹೇಳುತ್ತಿದ್ದಾರೆ ಎಂದು ಡಾ. ಡಿಕೆ ಬಲೂಜಾ ಹತಾಶೆ ವ್ಯಕ್ತಪಡಿಸಿದರು.

ದೆಹಲಿಯಲ್ಲಿ ಆಕ್ಸಿಜನ್ ಕೊರತೆ ಅತಿ ಹೆಚ್ಚು ಕಾಡುತ್ತಿದೆ. ಇಲ್ಲಿ ಆಕ್ಸಿಜನ್ ಉತ್ಪಾದನೆ ಘಟಕಗಳು ಇಲ್ಲದಿದ್ದರಿಂದ ಬೇರೆ ರಾಜ್ಯಗಳಲ್ಲಿರುವ ಘಟಕಗಳಿಂದ ಆಗುವ ಸರಬರಾಜನ್ನು ನೆಚ್ಚಿಕೊಳ್ಳಬೇಕಿದೆ. ಆದರೆ, ದೇಶಾದ್ಯಂತ ಆಕ್ಸಿಜನ್​ಗೆ ಹಾಹಾಕಾರ ಇರುವುದರಿಂದ ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿರುವ ಆಕ್ಸಿಜನ್ ಉತ್ಪಾದನಾ ಘಟಕಗಳಿಂದ ಹೊರಗೆ ಆಕ್ಸಿಜನ್ ಹೋಗದಂತೆ ವಾಹನಗಳನ್ನ ತಡೆದು ನಿಲ್ಲಿಸಿವೆ. ದೆಹಲಿಗೆ ಸರಬರಾಜಬೇಕಿದ್ದ ಇಂಥ ಒಂದು ವಾಹನವನ್ನು ರಾಜ್ಯ ಸರ್ಕಾರವೊಂದು ತಡೆದು ನಿಲ್ಲಿಸಿತ್ತು. ಈ ವಿಚಾರವನ್ನು ಪ್ರಧಾನಿ ಜೊತೆಗಿನ ಸಭೆಯ ವೇಳೆ ಸಿಎಂ ಅರವಿಂದ್ ಕೇಜ್ರಿವಾಲ್ ಪ್ರಸ್ತಾಪಿಸಿದ್ದರು. “ದೆಹಲಿಯಲ್ಲಿ ಅಕ್ಸಿಜನ್ ಉತ್ಪಾದಿಸುವ ಕಾರ್ಖಾನೆ ಇಲ್ಲವೆಂದರೆ ದೆಹಲಿಯ ಜನರಿಗೆ ಆಮ್ಲಜನಕ ಸಿಗುವುದಿಲ್ಲ ಎಂದರ್ಥವೇ? ದೆಹಲಿಗೆ ಬರಬೇಕಿದ್ದ ಆಕ್ಸಿಜನ್ ಟ್ಯಾಂಕರನ್ನು ಮತ್ತೊಂದು ರಾಜ್ಯದಲ್ಲಿ ತಡೆದು ನಿಲ್ಲಿಸಿದಾಗ ನಾನು ಕೇಂದ್ರ ಸರ್ಕಾರದಲ್ಲಿ ಯಾರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂಬುದನ್ನು ತಿಳಿಸಿ” ಎಂದು ಪಿಎಂ ಸಭೆಯಲ್ಲಿ ಕೇಜ್ರಿವಾಲ್ ತಮ್ಮ ಹತಾಶೆಯನ್ನು ತೋರ್ಪಡಿಸಿದ್ದರು.

ನಿನ್ನೆ ಶುಕ್ರವಾರ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪಿಎಂ ನಡೆಸಿದ ಸಭೆಯಲ್ಲಿ ಕೇಜ್ರಿವಾಲ್ ಅಷ್ಟೇ ಅಲ್ಲ ಬಹುತೇಕ ಎಲ್ಲಾ ಸಿಎಂಗಳೂ ಆಕ್ಸಿಜನ್ ಕೊರತೆಯ ಸಮಸ್ಯೆಯನ್ನು ಪ್ರಸ್ತಾಪಿಸಿದ್ದರು. ಕರ್ನಾಟಕ ಸಿಎಂ ಬಿಎಸ್ ಯಡಿಯೂರಪ್ಪ ಕೂಡ ಇದೇ ವಿಚಾರನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದರು. ಆಗ ನರೇಂದ್ರ ಮೋದಿ ಅವರು ಎಲ್ಲಾ ರಾಜ್ಯ ಸರ್ಕಾರಗಳು ಒಟ್ಟುಗೂಡಿ ಆಕ್ಸಿಜನ್ ಹಾಗೂ ಔಷಧಗಳ ಸಮರ್ಪಕ ವ್ಯವಸ್ಥೆ ಕೈಗೂಡುವಂತೆ ಮಾಡಬೇಕು ಎಂದು ಕರೆ ಕೊಟ್ಟರು. ಹಾಗೆಯೇ, ರೈಲ್ವೆ ಮತ್ತು ವಾಯುಪಡೆಯ ಸೌಕರ್ಯಗಳನ್ನ ಬಳಸಿಕೊಂಡು ಆಕ್ಸಿಜನ್ ವಿತರಣೆ ಮಾಡಲಾಗುತ್ತಿದೆ ಎಂದೂ ಪಿಎಂ ಹೇಳಿದರು.

ದೇಶದಲ್ಲಿ ಆಕ್ಸಿಜನ್ ಅಷ್ಟೇ ಅಲ್ಲ, ಇನ್ವೇಸಿವ್ ವೆಂಟಿಲೇಟರ್, ರೆಮ್​ಡೆಸಿವರ್ ಇಂಜೆಕ್ಷನ್ ಕೊರತೆ ಇನ್ನಿಲ್ಲದಂತೆ ಕಾಡುತ್ತಿದೆ. ಬೆಂಗಳೂರಿನಲ್ಲಿ ರೆಮ್​ಡೆಸಿವಿರ್ ಔಷಧ ತಯಾರಿಸುವ ಕಂಪನಿಗಳ ಮೂರು ಘಟಕಗಳಿದ್ದರೂ ರಾಜ್ಯದಲ್ಲೇ ಆ ಚುಚ್ಚುಮದ್ದು ಸಿಗದಂತಹ ಸ್ಥಿತಿ ಇದೆ. ರೆಮ್​ಡೆಸಿವಿರ್ ಔಷಧಕ್ಕೆ ಜಾಗತಿಕ ಬೇಡಿಕೆ ಇರುವುದರಿಂದ ಫಾರ್ಮಾ ಕಂಪನಿಗಳು ತಮ್ಮ ಬಹುತೇಕ ಔಷಧವನ್ನು ರಫ್ತು ಮಾಡುತ್ತವೆ. ಹೀಗಾಗಿ, ದೇಶೀಯವಾಗಿ ಈ ಔಷಧ ಹೆಚ್ಚು ಲಭ್ಯವಿಲ್ಲ. ಈಗ ಸ್ಥಳೀಯವಾಗಿ ಬೇಡಿಕೆ ಹೆಚ್ಚಿರುವುದರಿಂದ ರೆಮ್​ಡೆಸಿವಿರ್ ಔಷಧ ಪೂರೈಕೆಯಲ್ಲಿ ಗೊಂದಲ ಏರ್ಪಟ್ಟಿದೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಗಮನ ಹರಿಸಿ ಸೂಕ್ತ ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ. ಮೇಲಾಗಿ, ರೆಮ್​ಡೆಸಿವರ್ ಔಷಧ ಬಗ್ಗೆ ವಿಪರೀತ ಅವಲಂಬಿತವಾಗಿ ಅಗತ್ಯವಿಲ್ಲ. ಕೋವಿಡ್ ರೋಗಕ್ಕೆ ರೆಮ್​ಡೆಸಿವರ್ ಅಷ್ಟು ಅಗತ್ಯವೇನೂ ಅಲ್ಲ. ಬೇರೆ ವಿಧಾನಗಳಿಂದಲೂ ಕೋವಿಡ್ ರೋಗಿಗಳಿಗೆ ಚಿಕಿತ್ಸೆ ನೀಡಬಹುದು ಎಂದು ತಜ್ಞರು ಹೇಳುತ್ತಾರೆ.

Comments are closed.