
ಜೈಪುರ: ಸುಳ್ಳಿನ ಸರಮಾಲೆಯನ್ನೇ ಕಟ್ಟಿ ಮದುವೆ ಮಾಡಿರುವ ಘಟನೆಯೊಂದು ರಾಜಸ್ಥಾನದಲ್ಲಿ ನಡೆದಿದೆ. ಏನೂ ಅರಿಯದ ವರ ಇದೀಗ ಹೆಂಡತಿಯೂ ಇಲ್ಲದೆ, ದುಡ್ಡನ್ನೂ ಕಳೆದುಕೊಂಡು ಕುಳಿತಿದ್ದಾನೆ.
ಉಮೈದ್ ಸಿಂಗ್ ಹೆಸರಿನ ವ್ಯಕ್ತಿ ಮದುವೆಯಾಗಲೆಂದು ಹುಡುಗಿಯನ್ನು ಹುಡುಕುತ್ತಿದ್ದ. ಈ ಸಮಯಕ್ಕೆ ಈತನಿಗೆ ಸಿಕ್ಕ ಗಂಗಾ ಸಿಂಗ್ ಹೆಸರಿನ ಬ್ರೋಕರ್ ಮದುವೆ ಮಾಡಿಸುವುದಾಗಿ ಹೇಳಿದ್ದಾನೆ. ಹುಡುಗಿ ಸಿದ್ಧಳಿದ್ದಾಳೆ, ಆದರೆ ಆಕೆಯ ತಂದೆಗೆ ಸ್ವಲ್ಪ ತೊಂದರೆ ಇದೆ, ಅವರಿಗೆ ನೀನು 3.5 ಲಕ್ಷ ಹಣ ಕೊಡಬೇಕು ಎಂದು ಹೇಳಿದ್ದಾಳೆ. ಅದಕ್ಕೆ ಒಪ್ಪಿದ ಆತ ಹುಡುಗಿ ಮನೆಗೆ ತೆರಳಿ ಮದುವೆ ಒಪ್ಪಿ ಬಂದಿದ್ದಾನೆ.
ಮದುವೆಗೂ ಮೊದಲು 2 ಲಕ್ಷ ಹಣವನ್ನು ಗಂಗಾ ಕೈನಲ್ಲಿ ಕೊಟ್ಟು, ವಧುವಿನ ತಂದೆಗೆ ಕೊಡಲು ಹೇಳಿದ್ದಾಗಿದೆ. ಮದುವೆ ದಿನದಂದು ಮೆರವಣಿಗೆಯೊಂದಿಗೆ ವಧುವಿನ ಮನೆಗೆ ವರ ಹೊರಟಿದ್ದಾನೆ. ಆಗ ಕರೆ ಮಾಡಿದ ಗಂಗಾ, ವಧುವಿನ ಕುಟುಂಬದಲ್ಲಿ ಯಾರೋ ಮೃತರಾಗಿದ್ದಾರೆ. ಆದ್ದರಿಂದ ನೀವು ನಮ್ಮ ಮನೆಗೆ ಬಂದು ಇಲ್ಲಿಯೇ ಮದುವೆ ಮಾಡಿಕೊಂಡು ಹೋಗಿ ಎಂದು ಹೇಳಿದ್ದಾಳೆ. ಅದರಂತೆ ಗಂಗಾ ಮನೆ ಆವರಣದಲ್ಲೇ ಮದುವೆ ಮಾಡಿಕೊಂಡು ದಂಪತಿ ವರನ ಮನೆಗೆ ತೆರಳಿದ್ದಾರೆ. ವಾಪಾಸು ತೆರಳುವಾಗ ವಧುವಿನ ತಂದೆಗೆ ಕೊಡಲೆಂದು 1.5 ಲಕ್ಷ ರೂಪಾಯಿ ಕೊಟ್ಟಿದ್ದಾನೆ.
ಬದುಕಿಗೆ ಜತೆಯಾದ ಪತ್ನಿಗೆ ಉಮೈದ್ ಹೊಸ ಫೋನ್ ಒಂದನ್ನು ಗಿಫ್ಟ್ ಕೊಟ್ಟಿದ್ದಾನೆ. ನಾಲ್ಕು ದಿನಗಳಾದ ಮೇಲೆ ಆಕೆಯನ್ನು ತವರು ಮನೆಗೆ ಕಳುಹಿಸಿಕೊಡುವ ನಿಟ್ಟಿನಲ್ಲಿ ಗಂಗಾ ಮನೆಗೆ ಕರೆತಂದು ಬಿಡಲಾಗಿದೆ. ಅದಾದ ನಂತರ ಆತ ತನ್ನ ಮನೆಗೆ ವಾಪಾಸಾಗಿದ್ದಾನೆ. ಇದಾದ ನಂತರ ಮದುವೆಯಾಗಿದ್ದ ಹೆಣ್ಣು ಮಗಳು ಉಮೈದ್ಗೆ ಕರೆ ಮಾಡಿದ್ದಾಳೆ. ‘ಗಂಗಾ ನಿಮಗೆ ಮೋಸ ಮಾಡಿದ್ದಾಳೆ. ಅವಳು ಹೇಳಿದಂತೆ ನಾನು ಮದುವೆಗೆ ಸಿದ್ಧವಿದ್ದ ಹೆಣ್ಣಲ್ಲ. ನಾನು ಮದುವೆ ಮನೆಗಳಲ್ಲಿ ರೊಟ್ಟಿ ಮಾಡುವ ಕೆಲಸ ಮಾಡುತ್ತಿದ್ದೆ. ಅಲ್ಲಿಗೆ ಬಂದ ಗಂಗಾ ನನ್ನನ್ನು ಮದುವೆಯಾಗುವಂತೆ ಬೆದರಿಕೆ ಹಾಕಿ ಈ ರೀತಿ ನಾಟಕ ಮಾಡಿಸಿದಳು. ನೀವು ಮೋಸ ಹೋಗಿದ್ದೀರಿ’ ಎಂದು ಹೇಳಿದ್ದಾಳೆ.
ನನ್ನ ಬಳಿ ಫೋನ್ ಇಲ್ಲದಿದ್ದರಿಂದ ಈ ವಿಚಾರ ನಿಮಗೆ ಹೇಳಲಾಗಲಿಲ್ಲ. ಅದಕ್ಕೆ ಈಗ ತಿಳಿಸುತ್ತಿದ್ದೇನೆ ಎಂದೂ ತಿಳಿಸಿದ್ದಾಳೆ. ಈ ವಿಚಾರವನ್ನು ಕೇಳಿದ ಉಮೈದ್ ಶಾಕ್ ಆಗಿದ್ದಾನೆ. ಹೆಂಡತಿ ಎಂದು ಪ್ರೀತಿಯಿಂದ ಆದರಿಸಿದ್ದ ಮಹಿಳೆ ಇದೀಗ ತನ್ನ ಊರಿಗೆ ತೆರಳಿ ನಿತ್ಯದ ಕೆಲಸಕ್ಕೆ ಮರಳಿದ್ದಾಳೆ. ಮದುವೆ ಹೆಸರಿನಲ್ಲಿ ಗಂಗಾ 3.5 ಲಕ್ಷ ದೋಚಿದ್ದಾಳೆ. ಈ ವಿಚಾರವಾಗಿ ಉಮೈದ್ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ.
Comments are closed.