
ಆಗ್ರಾ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಸೋದರಳಿಯ, ಅಹಮದಾಬಾದ್‌ನಿಂದ ಮಾತನಾಡುತ್ತಿದ್ದೇನೆ, ನಿಮ್ಮ ಬಳಿ ಮಾತನಾಡಬೇಕಿತ್ತು ಎಂದು ಬಿಜೆಪಿ ಶಾಸಕ ಯೋಗೇಂದ್ರ ಉಪಾಧ್ಯಾಯ ಅವರಿಗೆ ಕರೆ ಬಂದಿದೆ.
ಕರೆ ಸ್ವೀಕರಿಸಿದ ಯೋಗೇಂದ್ರ ಅವರು ಅಮಿತ್ ಷಾ ಅವರ ಸೋದರಳಿಯ ಕರೆ ಮಾಡುತ್ತಿರುವುದರಿಂದ ಚೆನ್ನಾಗಿ ಮಾತನಾಡಿದ್ದಾರೆ. ವಿಷಯ ಕೇಳಿದಾಗ ವಿರಾಜ್ ಷಾ, ಆಗ್ರಾದಲ್ಲಿ ಹೋಟೆಲ್ ಖರೀದಿಸಬೇಕಿತ್ತು. ಅದಕ್ಕಾಗಿ ನಿಮ್ಮ ಸಹಾಯ ಬೇಕಿತ್ತು, ನಿಮ್ಮನ್ನು ಭೇಟಿಯಾಗಿ ಸಂಪೂರ್ಣ ವಿಷಯ ತಿಳಿಸುವೆ ಎಂದಿದ್ದಾರೆ.
ನಾನೀಗ ಸದ್ಯ ದೆಹಲಿಯಲ್ಲಿ ಇದ್ದೇನೆ. ನೀವು ಬಂದರೆ ಸಿಗಬಹುದು ಎಂದು ಉಪಾಧ್ಯಾಯ ಅವರು ಹೇಳಿದ್ದಾರೆ. ಆದರೆ ವಿರಾಜ್ ಷಾ ನೇರವಾಗಿ ಆಗ್ರಾಕ್ಕೆ ಹೋಗಿದ್ದಾರೆ. ನಂತರ ಆಗ್ರಾದಲ್ಲಿದ್ದು ಅಲ್ಲಿ ಸುತ್ತಾಟ ಮಾಡಿ ಹೋಟೆಲ್ ನೋಡಬೇಕು, ಆದ್ದರಿಂದ ಕೆಲಸ ಮುಗಿಸಿ ಅಲ್ಲಿಗೇ ಬನ್ನಿ ಎಂದು ಉಪಾಧ್ಯಾಯರನ್ನು ವಿರಾಜ್ ಕರೆದಿದ್ದಾರೆ.
ಆದರೆ ಉಪಾಧ್ಯಾಯ ಅವರು ತುಂಬಾ ಬಿಜಿ ಇದ್ದರು. ಆದರೆ ಖುದ್ದು ಗೃಹ ಸಚಿವರ ಸೋದರಳಿಯ ಸಹಾಯ ಕೇಳಿದಾಗ ಇಲ್ಲ ಎನ್ನಲು ಆಗುತ್ತದೆಯೆ? ಅದಕ್ಕಾಗಿ ಅವರು ತಮ್ಮ ಮಗ ವತ್ಸಾಲಯನನ್ನು ಆಗ್ರಾಕ್ಕೆ ಕಳುಹಿಸಿದರು. ಅಲ್ಲಿಲ್ಲಿ ಸುತ್ತಾಡಿದ ನಂತರ ವಿರಾಜ್ ಷಾ 40 ಸಾವಿರ ರೂಪಾಯಿ ಬಟ್ಟೆ ಖರೀದಿಸಿ ಅದರ ಹಣವನ್ನು ಪಾವತಿ ಮಾಡುವಂತೆ ಉಪಾಧ್ಯಾಯ ಅವರ ಮಗನಿಗೆ ಹೇಳಿದ್ದಾರೆ.
ಅವರ ಮಗನ ಬಳಿ ಅಷ್ಟೊಂದು ಹಣವಿರಲಿಲ್ಲ. ಆದ್ದರಿಂದ ಆತ ತಂದೆಗೆ (ಉಪಾಧ್ಯಾರ ಅವರಿಗೆ) ಕರೆ ಮಾಡಿದ್ದಾನೆ. ಆಗಲೇ ಉಪಾಧ್ಯಾಯ ಅವರಿಗೆ ಈ ವ್ಯಕ್ತಿಯ ಬಗ್ಗೆ ಸಂದೇಹ ಶುರುವಾಗಿದೆ. ಕೂಡಲೇ ಅವರು ತಮ್ಮ ಇನ್ನೊಂದು ಮಗನಿಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸುವಂತೆ ಹೇಳಿದ್ದಾರೆ.
ಆ ಮಗ ಜಾಲತಾಣಗಳನ್ನೆಲ್ಲಾ ತಡಕಾಡಿದಾಗ ಅದೃಷ್ಟವಶಾತ್, ಅವನಿಗೆ ಹಿಂದೊಮ್ಮೆ ಇದೇ ರೀತಿಯ ವ್ಯಕ್ತಿ ಅಮಿತ್ ಷಾ ಹೆಸರು ಹೇಳಿಕೊಂಡು 2016ರಲ್ಲಿ ಉಜ್ಜಯಿನಿ ಶಾಸಕರನ್ನು ವಂಚಿಸಿದ ವಿಷಯ ಮಾಧ್ಯಮಗಳಿಂದ ತಿಳಿದುಬಂದಿದೆ. ಕೂಡಲೇ ಆತ ತಂದೆಗೆ ವಿಷಯ ಮುಟ್ಟಿಸಿದ್ದಾನೆ. ಅಸಲಿಗೆ ಆ ಸುದ್ದಿಯಲ್ಲಿದ್ದ ವ್ಯಕ್ತಿ ಗಾಂಧಿನಗರ ನಿವಾಸಿ ಯಶ್ ಅಮೀನ್ ಎಂದು ವರದಿಯಲ್ಲಿ ತಿಳಿಸಲಾಗಿತ್ತು.
ಇದನ್ನು ಉಪಾಧ್ಯಾಯ ಅವರು ಆಗ್ರಾದಲ್ಲಿರುವ ತಮ್ಮ ಹಿರಿಯ ಮಗನಿಗೆ ಈ ವಿಷಯವನ್ನು ತಿಳಿಸಿದ್ದಾರೆ. ನಂತರ ಆತ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾನೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ನಕಲಿ ಸೋದರಳಿಯನನ್ನು ಬಂಧಿಸಿದ್ದಾರೆ.
ನಂತರ ಆತ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಆತನ ವಿರುದ್ಧ ಎಫ್ಐಆರ್ ದಾಖಲು ಮಾಡಲಾಗಿದೆ. ಈ ಹಿಂದೆ ಇದೇ ವ್ಯಕ್ತಿ ಉಜ್ಜಯಿನಿಯಲ್ಲಿ ಬಿಜೆಪಿ ಶಾಸಕ ಡಾ.ಮೋಹನ್ ಯಾದವ್ ಅವರ ಸಹವರ್ತಿ ನರೇಶ್ ಶರ್ಮಾ ಅವರನ್ನು ವಂಚಿಸಿದ್ದ ಎಂದು ತಿಳಿದುಬಂದಿದೆ.
Comments are closed.