ಉಡುಪಿ: ಗಾಂಜಾ ಸಹಿತ ಮಾದಕ ವಸ್ತುಗಳನ್ನು ಹೊಂದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮೇರಿಕಾ ಮೂಲದ ಅನಿವಾಸಿ ವಿದ್ಯಾರ್ಥಿ ಹಾಗೂ ಮಣಿಪಾಲದ ಮೆಡಿಕಲ್ ವಿದ್ಯಾರ್ಥಿ ಸೇರಿ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಮಣಿಪಾಲದ ಅಪಾರ್ಟ್ ಮೆಂಟ್ ವೊಂದರಲ್ಲಿ ಅಕ್ರಮವಾಗಿ ವಿದೇಶಿ ಹೈಡ್ರೊವಿಡ್ ಗಾಂಜಾ, ಬ್ರೌನ್ ಶುಗರ್, ಎಂಡಿಎಂಎ ಮಾತ್ರೆಗಳನ್ನು ಹೊಂದಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೆಡಿಕಲ್ ಕಾಲೇಜಿನ ವೈದ್ಯ ವಿದ್ಯಾರ್ಥಿ ಆದಿತ್ಯ ಪ್ರಭು ಹಾಗೂ ಅಮೇರಿಕಾದ ಅನಿವಾಸಿ ವಿದ್ಯಾರ್ಥಿ ಅನಿಶ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ದಾಳಿ ವೇಳೆ ವಿದೇಶಿ ಹೈಡ್ರೊವಿಡ್ ಗಾಂಜಾ, ಬ್ರೌನ್ ಶುಗರ್, ಎಂಡಿಎಂಎ ಮಾತ್ರೆಗಳು ಪತ್ತೆಯಾಗಿದ್ದು, ಅವುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರು ವಶಪಡಿಸಿಕೊಂಡ ಸೊತ್ತುಗಳ ಒಟ್ಟು ಮೌಲ್ಯ 3,89,000 ರೂ. ಎಂದು ತಿಳಿದುಬಂದಿದೆ.
ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ್ ಚಂದ್ರ, ಉಡುಪಿ ಡಿವೈಎಸ್ಪಿ ಟಿ .ಆರ್ ಜೈ ಶಂಕರ್, ಕುಂದಾಪುರ ಎಎಸ್ಪಿ ಹರಿರಾಮ ಶಂಕರ್, ಮಣಿಪಾಲ ಠಾಣಾ ನಿರೀಕ್ಷಕ ಮಂಜುನಾಥ್ ಎಂ, ಪಿಎಸೈ ರಾಜಶೇಖರ್, ಉಡುಪಿ ಸಹಾಯಕ ಡ್ರಗ್ಸ್ ಕಂಟ್ರೋಲರ್ ನಾಗರಾಜ್,ಗ್ರಾಮ ಲೆಕ್ಕಾಧಿಕಾರಿಯಾದ ಗಿರೀಶ್ ಗೌರವಗೋಶ್ ಮತ್ತು ಉಪೇಂದ್ರ ಕುಮಾರ್ , ಮಣಿಪಾಲ ಠಾಣೆಯ ಸಿಬ್ಬಂದಿಗಳಾದ ಆದರ್ಶ, ಆನಂದಯ್ಯ , ಸುದೀಪ ಹಾಗೂ ಡಿ ವೈ ಎಸ್ ಪಿ ಕಛೇರಿಯ ಸಿಬ್ಬಂದಿಗಳಾದ ನವೀನ್ ಕುಮಾರ್ ಶಾಂತರಾಂ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಕಛೇರಿಯ ಸಿಬ್ಬಂದಿಗಳಾದ ಅಶೋಕ ಪಾಟಕರ್ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿದ್ದಾರೆ.
Comments are closed.