ಕರಾವಳಿ

ಪ್ರಧಾನ ಭಾಗವತ ಪಟ್ಲ ಸತೀಶ್ ಶೆಟ್ಟಿ ಸಾರಾಥ್ಯದಲ್ಲಿ ಶ್ರೀ ಕ್ಷೇತ್ರ ಪಾವಂಜೆ ನೂತನ ಯಕ್ಷಗಾನ ಮೇಳ ಲೋಕಾರ್ಪಣೆ

Pinterest LinkedIn Tumblr

ಮಂಗಳೂರು: ಶ್ರೀ ಜ್ಞಾನಶಕ್ತಿ ಸುಬ್ರಮಣ್ಯ ಸ್ವಾಮಿ ಕೃಪಾಪೋಷಿತ ಯಕ್ಷಗಾನ ಮಂಡಳಿ ನಾಗವೃಜ ಕ್ಷೇತ್ರ ಪಾವಂಜೆ ಇದರ ನೂತನ ಯಕ್ಷಗಾನ ಮೇಳವನ್ನು ಇಂದು ಮಧ್ಯಾಹ್ನ ಶ್ರೀ ಕ್ಷೇತ್ರದಲ್ಲಿ ಲೋಕಾರ್ಪಣೆ ಮಾಡಲಾಯಿತು.

ದೇವಳದ ಚೌಕಿಯಲ್ಲಿ ಸುಬ್ರಮಣ್ಯ ಸ್ವಾಮಿಗೆ ಪೂಜೆ ಸಲ್ಲಿಸಿದ ಬಳಿಕ ಕಲಾವಿದರು ಗೆಜ್ಜೆ ಕಟ್ಟಿದರು. ನಂತರ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪಟ್ಲ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಭಂಡಾರಿ ಅವರು ಅತಿಥಿಗಳನ್ನು ಸ್ವಾಗತಿಸಿದರು. ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಲಾಯಿತು.

ಕ್ಷೇತ್ರದ ಧರ್ಮದರ್ಶಿ ಯಾಜಿ ನಿರಂಜನ್ ಭಟ್ ಅವರು ಮಾತಾಡಿ, “ಯಕ್ಷಗಾನ ಮೇಳದಿಂದ ತುಳುನಾಡಿನಲ್ಲಿ ಜ್ಞಾನದ ವೃದ್ಧಿಯಾಗಲಿದೆ. ಯಾಗ ಭೂಮಿ ಎಂದೇ ಕರೆಯಲ್ಪಡುವ ಶ್ರೀ ಕ್ಷೇತ್ರದ ಮೂಲಕ ಯಕ್ಷ ಸೇವೆಯನ್ನು ಮಾಡಲು ಮುಂದಾಗಿರುವುದು ಮುಂದಿನ ದಿನಗಳಲ್ಲಿ ನಾಡಿನ ಉದ್ದಗಲಕ್ಕೂ ಯಕ್ಷಗಾನ ಮೇಳ ಸಂಚರಿಸುವ ಮೂಲಕ ಸಮಾಜ ಮತ್ತಷ್ಟು ಶಕ್ತಿಶಾಲಿಯಾಗಲಿ” ಎಂದು ಶುಭ ಹಾರೈಸಿದರು.

ಕ್ಷೇತ್ರದ ಆಡಳಿತ ಮೊಕ್ತೇಸರ ಎಂ. ಶಶೀಂದ್ರ ಕುಮಾರ್, ಟ್ರಸ್ಟ್ ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ್ ಭಂಡಾರಿ ಅಡ್ಯಾರ್, ಟ್ರಸ್ಟ್ ನ ಕೋಶಾಧಿಕಾರಿ ಸಿ.ಎ. ಸುದೇಶ್ ಕುಮಾರ್ ರೈ, ಉದ್ಯಮಿ ಬರೋಡ ಶಶಿಧರ್ ಶೆಟ್ಟಿ, ಪಟ್ಲ ಮಹಾಬಲ ಶೆಟ್ಟಿ, ಟ್ರಸ್ಟ್ ನ ಉಪಾಧ್ಯಕ್ಷ ಡಾ. ಮನು ರಾವ್, ದುರ್ಗಾ ಪ್ರಸಾದ್ ಪಡುಬಿದ್ರಿ, ಮೇಳದ ಸಂಚಾಲಕ, ಪ್ರಧಾನ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ, ಸುಧಾಕರ್ ಆಚಾರ್ಯ ಉಪಸ್ಥಿತರಿದ್ದರು.

ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ‘ಶಾಂಭವಿ ವಿಜಯ’ ಯಕ್ಷಗಾನ ಪ್ರಸಂಗವನ್ನು ಆಡಿ ತೋರಿಸಲಾಯಿತು. ಕಾಲಮಿತಿಯ ಯಕ್ಷಗಾನ ಪ್ರಸಂಗವನ್ನು ಆಡಿ ತೋರಿಸಲಿರುವ ಮೇಳ ನವೆಂಬರ್ 27ರಿಂದ ತುಳುನಾಡಿನ ಉದ್ದಗಲಕ್ಕೂ ತಿರುಗಾಟ ನಡೆಸಲಿದೆ.

Comments are closed.