ಕರಾವಳಿ

ಕುದ್ರೋಳಿ ಶ್ರೀ ಕ್ಷೇತ್ರದಲ್ಲಿ ಜಗದ್ವಿಖ್ಯಾತ ಮಂಗಳೂರು ದಸರಾ ಮಹೋತ್ಸವಕ್ಕೆ ಭರದ ಸಿದ್ಧತೆ : ಆದರೆ…

Pinterest LinkedIn Tumblr

ಮಂಗಳೂರು, ಆಕ್ಟೋಬರ್. 08 : ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಪ್ರತೀ ವರ್ಷ ನಡೆಯುವ ಮಂಗಳೂರು ದಸರಾ ಉತ್ಸವ ಎಂದಿನಂತೆ ಈ ಬಾರಿಯು ನಡೆಯಲಿದೆ. ಆದರೆ ಸರಕಾರದ ಕೊವಿಡ್ ಮಾರ್ಗಸೂಚಿಯಂತೆ ದಸರಾ ಆಚರಣೆ ಮಾಡಲು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ನಿರ್ಧರಿಸಿದೆ.

ಜಗದ್ವಿಖ್ಯಾತ ಮಂಗಳೂರು ದಸರಾಕ್ಕೆ ತನ್ನದೇ ಆದ ಇತಿಹಾಸವಿದ್ದು, ಅದನ್ನು ಸರಕಾರ ಮಾರ್ಗಸೂಚಿ ಯನ್ನು ಪಾಲಿಸಿಕೊಂಡು ಈ ಬಾರಿಯೂ ಸಂಪ್ರದಾಯದಂತೆ ನಡೆಸಲು ನಿರ್ಧರಿಸಲಾಗಿದೆ. ಯಾವುದೇ ಕಾರಣಕ್ಕೂ ಮಂಗಳೂರು ದಸರಾ ಮಹೋತ್ಸವವನ್ನು ನಿಲ್ಲಿಸಬಾರದು ಎಂದಿನಂತೆ ವೈಭವದಿಂದ ನಡೆಸಬೇಕು ಎಂದು ನಿರ್ಧರಿಸಲಾಗಿದೆ.

ಮಂಗಳೂರು ದಸರಾ ವೈಭವದಿಂದ ನಡೆಸಲು ಸಾಧ್ಯವಿಲ್ಲ. ಸಂಪ್ರದಾಯ ಪ್ರಕಾರ ದೇವರ ಸೇವೆ ನಡೆಸುವುದು ಅನಿವಾರ್ಯ. ಧಾರ್ಮಿಕ ನಂಬಿಕೆ, ಸಂಪ್ರದಾಯ ಪ್ರಕಾರ ದಸರಾ ಮಹೋತ್ಸವ ನಡೆಸಲಾಗುವುದು. ಭಕ್ತರ ಸುರಕ್ಷತೆ ದೃಷ್ಟಿಯಿಂದ ಆಗಮನ-ನಿರ್ಗಮನಕ್ಕೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ ತಿಳಿಸಿದ್ದಾರೆ.

“ನಮ್ಮ ದಸರಾ-ನಮ್ಮ ಸುರಕ್ಷೆ” ಘೋಷವಾಕ್ಯದೊಂದಿಗೆ ಈ ಬಾರಿಯ ದಸರಾ ಆಚರಣೆ ಮಾಡಲಾಗುವುದು. ದೇಗುಲಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸ್ಯಾನಿಟೈಸರ್, ಮಾಸ್ಕ್ ಬಳಕೆ ಕಡ್ಡಾಯವಾಗಿದ್ದು, ಭಕ್ತಾದಿಗಳಿಗೆ ಥರ್ಮಲ್ ಸ್ಕ್ಯಾನ್ ಮಾಡಲಾಗುವುದು ಎಂದು ಕ್ಷೇತ್ರದ ಆಡಳಿತ ಮಂಡಳಿ ಹಾಗೂ ವಿವಿಧ ಸಂಘಟನೆಗಳ ಪೂರ್ವಭಾವಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಾಯಿರಾಂ ತಿಳಿಸಿದ್ದಾರೆ.

ಇದು ಭಕ್ತರು, ಉದ್ಯಮಿಗಳು, ವ್ಯಾಪಾರಿಗಳು, ಹಿತೈಷಿಗಳ ವಲಯಗಳ ಅಭಿಪ್ರಾಯವೂ ಆಗಿದೆ. ಈ ಕಾರಣದಿಂದ ಗಂಭೀರವಾಗಿ ಅಲೋಚಿಸಿದ ಆಡಳಿತ ಮಂಡಳಿ ಸರಕಾರದ ಮಾರ್ಗಸೂಚಿಯಂತೆ ಸಾಂಪ್ರದಾಯಿಕ ದಸರಾ ನಡೆಸಲು ನಿರ್ಧರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಈ ಬಾರಿ ಟ್ಯಾಬ್ಲೋ, ದೇವರ ಮೆರವಣಿಗೆ ಇಲ್ಲ:

ದಸರಾ ಮಹೋತ್ಸವದಲ್ಲಿ ಎಂದಿನಂತೆ ದರ್ಬಾರು ಮಂಟಪದಲ್ಲಿ ಮಹಾಗಣಪತಿ, ಶಾರದೆ, ನವದುರ್ಗೆಯರ ಮೂರ್ತಿ ಪ್ರತಿಷ್ಠಾಪನೆ ನಡೆಯಲಿದೆ. ಆದರೆ ಮಂಗಳೂರು ದಸರಾದಲ್ಲಿ ಈ ಬಾರಿ ಟ್ಯಾಬ್ಲೋ, ದೇವರ ಮೆರವಣಿಗೆ ಇರುವುದಿಲ್ಲ. ಕ್ಷೇತ್ರವನ್ನು ಸಂಪೂರ್ಣ ವಿದ್ಯುದ್ದೀಪಗಳಿಂದ ಅಲಂಕರಿಸಲಾ ಗುವುದು. ಆದರೆ ನಗರದಲ್ಲಿ ಯಾವುದೇ ಅಲಂಕಾರ ನಡೆಸದಿರಲು ನಿರ್ಧರಿಸಲಾಗಿದೆ ಎಂದು ಶ್ರೀ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್. ಆರ್ (ಆಡ್ವಕೇಟ್) ಇವರು ತಿಳಿಸಿದ್ದಾರೆ.

ದಸರಾ ಮಹೋತ್ಸವ ಸಂದರ್ಭ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತಾದಿಗಳು ಸಾಮಾಜಿಕ ಅಂತರ ಕಾಪಾಡಿಕೊಂಡು ಆರೋಗ್ಯದ ಬಗ್ಗೆ ಎಚ್ಚರವಹಿಸುವ ನಿಟ್ಟಿನಲ್ಲಿ ಕ್ಷೇತ್ರದ ಆಡಳಿತ ಸಮಿತಿ ಕೆಲವೊಂದು ನಿರ್ಧಾರಗಳನ್ನು ತೆಗೆದುಕೊಳ್ಳಲಿದೆ. ಕೊರೊನಾ ಸೋಂಕಿನ ಮಧ್ಯೆಯೂ ಮಂಗಳೂರು ದಸರಾ ಮಹೋತ್ಸವ ಯಶಸ್ವಿಯಾಗಿ ನಡೆಯಬೇಕಾದರೆ ಕ್ಷೇತ್ರದ ಆಡಳಿತ ಮಂಡಳಿಯ ಜತೆ ಸಹಕಾರ ಎಲ್ಲರ ಸಹಕಾರ ಅಗತ್ಯವಿದೆ.

ಇನ್ನು ದಸರಾ ಸಂದರ್ಭ ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸಕಲ ವ್ಯವಸ್ಥೆ ಕಲ್ಪಿಸಲು ಹಾಗೂ ಯಾವುದೇ ಸಮಸ್ಯೆಯುಂಟಾಗದಂತೆ ಕಾರ್ಯನಿರ್ವಹಿಸಲು ಸ್ವಯಂ ಸೇವಕ ಪಡೆ ಕಾರ್ಯನಿರ್ವಹಿಸಲಿದೆ ಎಂದು ಪದ್ಮರಾಜ್. ಆರ್ ತಿಳಿಸಿದ್ದಾರೆ.

ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್. ಆರ್ (ಎಡ್ವಕೇಟ್) 9448283999 ಇವರನ್ನು ಸಂಪರ್ಕಿಸಬಹುದು.

Comments are closed.