
ಭೋಪಾಲ್: ಮಧ್ಯಪ್ರದೇಶದ ಐಪಿಎಸ್ ಅಧಿಕಾರಿಯೊಬ್ಬರು ತಮ್ಮ ಹೆಂಡತಿಗೆ ಥಳಿಸಿದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸೆಪ್ಟೆಂಬರ್ 27ರಂದು ಘಟನೆ ನಡೆದಿದ್ದು, ಮಧ್ಯಪ್ರದೇಶದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಎಡಿಜಿ) ಪುರುಷೋತ್ತಮ್ ಶರ್ಮಾ ಭೋಪಾಲ್ನಲ್ಲಿರುವ ತಮ್ಮ ನಿವಾಸದಲ್ಲಿ ಪತ್ನಿಯನ್ನು ಹಿಡಿದು ಎಳೆದಾಡಿ ನೆಲಕ್ಕೆ ನೂಕಿ ಹಲ್ಲೆ ಮಾಡಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬರು ಜಗಳ ಬಿಡಿಸಲು ಯತ್ನಿಸುತ್ತಾರೆ. ಅಲ್ಲದೆ, ಮನೆಯಲ್ಲಿದ್ದ ಎರಡು ನಾಯಿಗಳು ಸಹ ಸನ್ನಿವೇಶವನ್ನು ನೋಡಿ ಬೊಗಳುವುದು ವಿಡಿಯೋದಲ್ಲಿ ದಾಖಲಾಗಿದೆ.
ಪತ್ನಿಯತ್ತ ಬೊಟ್ಟು ಮಾಡಿ ಅವಳು ಚಾಕುವಿನಿಂದ ನನ್ನ ಮೇಲೆ ಹಲ್ಲೆ ಮಾಡಿದಳು ಎಂದು ಅಲ್ಲಿಯೇ ಇದ್ದ ವ್ಯಕ್ತಿಯ ಬಳಿ ಹೇಳುತ್ತಾರೆ. ಈ ಮಹಿಳೆಯು ಸಹ ಪ್ರತಿಕ್ರಿಯಿಸಿದ್ದು, ಅವರೇನಾದರೂ ನನ್ನ ಮೇಲೆ ಹಲ್ಲೆ ಮಾಡಿದರೆ, ನಾನು ಕತ್ತರಿಯಿಂದ ದಾಳಿ ಮಾಡಬೇಕಾಗುತ್ತದೆ ಎಂದಿದ್ದಾರೆ. ಕೊನೆಯಲ್ಲಿ ಇದು ನನ್ನ ಆಸ್ತಿ ಎಂದು ಪುರೋಷತ್ತಮ್ ಹೇಳುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ.
ರಾಷ್ಟ್ರೀಯ ಮಹಿಳಾ ಆಯೋಗವು ಸಹ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಪುರುಷೋತ್ತಮ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಿ, ಇಂತಹ ಘಟನೆಗಳಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ಗೆ ಪತ್ರ ಬರೆದಿದ್ದಾರೆ.
ಇದೇ ವೇಳೆ ಶರ್ಮಾ ಮಗ ನೀಡಿದ ದೂರಿನ ಆಧಾರದ ಮೇಲೆ ಮಧ್ಯಪ್ರದೇಶ ಸರ್ಕಾರವೂ ಶರ್ಮಾ ಅವರನ್ನು ಕರ್ತವ್ಯದಿಂದ ತೆಗೆದುಹಾಕಲಾಗಿದೆ. ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಶರ್ಮಾ, ಇದೊಂದು ಅಪರಾಧವಲ್ಲ, ಕೌಟಂಬಿಕ ಕಲಹವಷ್ಟೇ ಎಂದು ಸಮರ್ಥಿಸಿಕೊಂಡಿದ್ದಾರೆ.
ನಾನು ಮದುವೆಯಾಗಿ 32 ವರ್ಷಗಳಾಯಿತು. 2008ರಿಂದಲೂ ಪತ್ನಿ ನನ್ನ ವಿರುದ್ಧ ದೂರುತ್ತಲೇ ಬಂದಿದ್ದಾಳೆ. ಅಂದಿನಿಂದಲೂ ನನ್ನ ಜತೆಯಲ್ಲೇ ವಾಸಿಸುತ್ತಾ ನನ್ನೆಲ್ಲಾ ಸೌಲಭ್ಯ ಮತ್ತು ವಿದೇಶಿ ಪ್ರವಾಸ ಸೇರಿದಂತೆ ಎಲ್ಲವನ್ನು ಅನುಭವಿಸಿದ್ದಾಳೆ. ನಾನು ಹಿಂಸಾತ್ಮಕ ವ್ಯಕ್ತಿಯೂ ಅಲ್ಲ ಅಥವಾ ಅಪರಾಧಿಯೂ ಅಲ್ಲ. ನನ್ನ ಪತ್ನಿ ನನಗೆ ಗೊತ್ತಿಲ್ಲದೆ ಮನೆಯಲ್ಲಿ ಕ್ಯಾಮೆರಾ ಅಳವಡಿಸಿದ್ದಾಳೆಂದು ಶರ್ಮಾ ದೂರಿದ್ದಾರೆ.
Comments are closed.