
ನವದೆಹಲಿ: ಲಡಾಖ್ ನಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಗಡಿ ಸಂಘರ್ಷದಲ್ಲಿ ಕಳೆದ 3 ವಾರಗಳಲ್ಲಿ ಭಾರತೀಯ ಸೇನೆ ಆರು ಗುಡ್ಡಗಳನ್ನ ವಶಪಡಿಸಿಕೊಂಡಿದೆ.
ಪಾಂಗಾಂಗ್ ಸರೋವರ ಬಳಿಯ ಫಿಂಗರ್ 4ನ ಬೆಟ್ಟಗಳ ಸಾಲಿನಲ್ಲಿ ಆಯಕಟ್ಟಿನ ಎತ್ತರ ಜಾಗದಲ್ಲಿ ಈ ಆರು ಗುಡ್ಡಗಳಿವೆ. ಮಗರ್, ಗುರುಂಗ್ , ರೇಚೆನ್ ಲಾ, ರೆಜಾಂಗ್ ಲಾ, ಮೋಕಿಪಾರಿ ಗುಡ್ಡಗಳು ಸೇರಿ ಒಟ್ಟು ಆರು ಪ್ರಮುಖ ಜಾಗಗಳನ್ನ ಆಗಸ್ಟ್ 29ರಿಂದೀಚೆ ಭಾರತದ ಸೈನಿಕರು ತಮ್ಮ ಸುಪರ್ದಿಯಲ್ಲಿರಿಸಿಕೊಂಡಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಅದಾಗ್ಯೂ ಚೀನಾದ ಪಿಎಲ್ಎ ಸೈನಿಕರು ಪೂರ್ವ ಲಡಾಖ್ ಭಾಗದಲ್ಲಿ ತಮ್ಮ ಉದ್ಧಟತನ ಮುಂದುವರಿಸಿದ್ದಾರೆ. ಕಳೆದ ಮೂರು ವಾರಗಳಲ್ಲಿ ಇಲ್ಲಿ ಚೀನೀ ಸೈನಿಕರಿಂದ ಭಾರತದ ಸೈನಿಕರನ್ನು ಹಿಮ್ಮೆಟ್ಟಿಸಲು ಕನಿಷ್ಠ 3 ಪ್ರಯತ್ನಗಳಾದರೂ ಆಗಿವೆ ಎನ್ನಲಾಗಿದೆ. ಇದರಿಂದ ಪಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯ ಪ್ರದೇಶಗಳು ಸೇರಿದಂತೆ ಪೂರ್ವ ಲಡಾಖ್ನಲ್ಲಿ ಉದ್ವಿಘ್ನ ಸ್ಥಿತಿ ಮುಂದುವರಿದಿದೆ. ಚೀನೀ ಸೈನಿಕರ ಗುಂಡಿನ ಸಪ್ಪಳ ಕೂಡ ಇಲ್ಲಿ ಕೇಳಿಸಿದೆ. ಕಳೆದ 45 ವರ್ಷಗಳಲ್ಲಿ ಗಡಿಭಾಗದಲ್ಲಿ ಗುಂಡಿನ ಸದ್ದು ಕೇಳುತ್ತಿರುವುದು ಇದೇ ಮೊದಲಾಗಿದೆ.
ಪಿಎಲ್ಎ ಸೈನಿಕರ ಆಕ್ರಮಣಕಾರಿ ವರ್ತನೆ ಮಧ್ಯೆಯೂ ದೃತಿಗೆಡದ ಭಾರತೀಯ ಸೈನಿಕರು ತಮ್ಮ ಗಡಿರಕ್ಷಣೆಯ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಆಯಕಟ್ಟಿನ ಪ್ರದೇಶಗಳನ್ನ ಆಕ್ರಮಿಸಿಕೊಳ್ಳುವ ಚೀನೀ ಸೈನಿಕರ ಅನೇಕ ಪ್ರಯತ್ನಗಳನ್ನ ಭಾರತೀಯರು ವಿಫಲಗೊಳಿಸಿದ್ದಾರೆ. ಚೀನೀ ಸೈನಿಕರು ಗುಂಡು ಹಾರಿಸಿ ಬೆದರಿಸುವ ಯಾವ ಪ್ರಯತ್ನವೂ ಸಫಲವಾಗಿಲ್ಲ. ಈಗ ಚೀನಾ ಸೇನೆ ರೇಜಂಗ್ ಲಾ ಮತ್ತು ರೇಚೇನ್ ಲಾ ಎತ್ತರ ಪ್ರದೇಶ ಬಳಿ 3 ಸಾವಿರ ಸೈನಿಕರನ್ನು ನಿಯೋಜಿಸಿದ್ದು, ಇಲ್ಲಿ ಸೂಕ್ಷ್ಮ ಪರಿಸ್ಥಿತಿ ನೆಲಸಿದೆ.
Comments are closed.