
ನವದೆಹಲಿ: ದೇಶದಲ್ಲಿ ಭಯೋತ್ಪಾದಕ ದಾಳಿಗೆ ಸಂಚು ನಡೆಸುತ್ತಿದ್ದ ಆರೋಪದ ಮೇರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆ 9 ಮಂದಿಯನ್ನು ಶನಿವಾರ ಬೆಳಗ್ಗೆ ಬಂಧಿಸಿ, ತನಿಖೆ ನಡೆಸುತ್ತಿದೆ.
ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಮತ್ತು ಕೇರಳದ ಎರ್ನಾಕುಲಂನಲ್ಲಿ ಎನ್ಐಎ ತಂಡಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸೆರೆಸಿಕ್ಕಿರುವ 9 ಮಂದಿ ಅಲ್-ಖೈದಾ ಭಯೋತ್ಪಾದಕ ಸಂಘಟನೆಗೆ ಸೇರಿದವರೆಂದು ಶಂಕಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ 6 ಮಂದಿ ಮತ್ತು ಕೇರಳದಲ್ಲಿ 3 ಮಂದಿ ಬಂಧನವಾಗಿದ್ದು, ದೇಶದ ವಿವಿಧ ಭಾಗಗಳಲ್ಲಿ ಅಂತರರಾಜ್ಯ ಅಲ್-ಖೈದಾ ಚಟುವಟಿಕೆಗಳು ನಡೆಯುತ್ತಿರುವ ಮಾಹಿತಿ ಮೇರೆಗೆ ಎರ್ನಾಕುಲಂ ಮತ್ತು ಮುರ್ಷಿದಾಬಾದ್ನ ಹಲವು ಸ್ಥಳಗಳ ಮೇಲೆ ಏಕಕಾಲದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ. ದೇಶದ ಪ್ರಮುಖ ನೆಲೆಗಳ ಮೇಲೆ ಉಗ್ರ ದಾಳಿ ನಡೆಸಲು ಇವರು ಸಂಚು ರೂಪಿಸುತ್ತಿದ್ದರು ಎಂದು ಎನ್ಐಎ ವಕ್ತಾರರು ಮಾಹಿತಿ ನೀಡಿದ್ದಾರೆ.
ಬಂಧಿತ ಉಗ್ರರು ಹಣ ಸಂಗ್ರಹಿಸಿ ದೆಹಲಿಗೆ ಪ್ರಯಾಣಿಸಿ ಬಂದೂರು, ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುವ ಯೋಜನೆ ಹಾಕಿಕೊಂಡಿದ್ದರು ಎಂದು ತಿಳಿದುಬಂದಿದೆ. ಪಾಕಿಸ್ತಾನ ಮೂಲದ ಅಲ್ ಖೈದಾ ಭಯೋತ್ಪಾದಕ ಸಂಘಟನೆ ಇವರನ್ನು ಸೋಷಿಯಲ್ ಮೀಡಿಯಾಗಳ ಮೂಲಕ ಸಂಪರ್ಕಿಸಿ ನೇಮಕ ಮಾಡಿಕೊಂಡಿತ್ತು. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಹಲವು ಕಡೆಗಳಲ್ಲಿ ದಾಳಿ ನಡೆಸಲು ಹಲವು ದಿನಗಳಿಂದ ಸಂಚು ರೂಪಿಸುತ್ತಿತ್ತು ಎಂದು ತಿಳಿದುಬಂದಿದೆ.
ಕೇರಳದಲ್ಲಿ ಇಂದು ಬಂಧಿತರಾದವರನ್ನು ಮುರ್ಷಿದ್ ಹಸನ್, ಇಯಾಕುಬ್ ಬಿಸ್ವಾಸ್ ಮತ್ತು ಮೊಸರಫ್ ಹುಸೇನ್ ಎಂದು ಗುರುತಿಸಲಾಗಿದ್ದು ಇವರೆಲ್ಲರೂ ಎರ್ನಾಕುಲಂ ನಿವಾಸಿಗಳು, ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ಸೆರೆ ಸಿಕ್ಕವರನ್ನು ನಜ್ಮುಸ್ ಸಾಕಿಬ್, ಅಬು ಸುಫಿಯಾನ್, ಮೈನುಲ್ ಮೊಂಡಲ್, ಲಿಯು ಯೀನ್ ಅಹ್ಮದ್, ಅಲ್ ಮಮುನ್ ಕಮಲ್ ಮತ್ತು ಅತಿತುರ್ ರೆಹಮಾನ್ ಎಂದು ಗುರುತಿಸಲಾಗಿದೆ.
Comments are closed.