
ಹೊಸದಿಲ್ಲಿ: ಕೊರೊನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ವಾಣಿಜ್ಯ ವಹಿವಾಟುಗಳು ಕುಸಿದಿವೆ. ಹೀಗಿದ್ದೂ ನೌಕರರ ಸಂಬಳ ಏರಿಕೆ ಮಾಡಲು, ಬಡ್ತಿ ನೀಡಲು ದೇಶದ ಪ್ರಮುಖ ಐಟಿ ಕಂಪನಿ ಇನ್ಫೋಸಿಸ್ ನಿರ್ಧರಿಸಿದೆ.
ಕೊರೊನಾದ ಹಿನ್ನೆಲೆಯಲ್ಲಿ ಏಪ್ರಿಲ್‌ನಲ್ಲಿ ಕಂಪನಿ ತನ್ನ ಅರ್ಧದಷ್ಟು ಅಂದರೆ 2.4 ಲಕ್ಷ ಉದ್ಯೋಗಿಗಳ ವೇತನ ಏರಿಕೆ ಮತ್ತು ಬಡ್ತಿಯನ್ನು ತಡೆಹಿಡಿದಿತ್ತು. ಆದರೆ ಮಾಡಿಕೊಂಡಿರುವ ಹೊಸ ನೇಮಕಾತಿಗಳನ್ನು ರದ್ದು ಮಾಡುವುದಿಲ್ಲ ಎಂದು ಹೇಳಿತ್ತು. ಅಷ್ಟೇ ಅಲ್ಲ ದೊಡ್ಡ ಪ್ರಮಾಣದಲ್ಲಿ ಹೊಸ ನೇಮಕಾತಿಗಳನ್ನು ಮಾಡಿಕೊಳ್ಳುವುದಾಗಿಯೂ ಸಿಇಒ ಸಲೀಲ್ ಪಾರೇಖ್ ತಿಳಿಸಿದ್ದಾರೆ.
ಇದೀಗ ಕಂಪನಿ ಹೊಸಬರನ್ನು ಜೂನ್ ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಕೆಲಸಕ್ಕೆ ಸೇರಿಸಿಕೊಳ್ಳುತ್ತಿದೆ. ಈಗಾಗಲೇ ಜಗತ್ತಿನ ಪ್ರಮುಖ ಐಟಿ ಕಂಪನಿಗಳಾದ ಕಾಗ್ನಿಝಂಟ್ ಮತ್ತು ಕ್ಯಾಪ್‌ಜೆಮಿನಿ ಉದ್ಯೋಗಿಗಳಿಗೆ ವೇತನ ಏರಿಕೆ ಮತ್ತು ಬಡ್ತಿ ನೀಡಿದೆ. ಅದೇ ಹಾದಿಯಲ್ಲಿ ಇನ್ಫೋಸಿಸ್ ಕೂಡ ಹೆಜ್ಜೆ ಇಟ್ಟಿದೆ.
ಮುಖ್ಯವಾಗಿ ಇನ್ಫೋಸಿಸ್‌ಗೆ ಅಮೆರಿಕಾದಲ್ಲಿ ಹೆಚ್ಚಿನ ಪ್ರಾಜೆಕ್ಟ್‌ಗಳು ಸಿಗುತ್ತಿದ್ದು ಈಗಾಗಲೇ ಇರುವ 13,000 ಉದ್ಯೋಗಿಗಳ ಜೊತೆಗೆ ಇನ್ನೂ ಹೆಚ್ಚುವರಿಯಾಗಿ 12,000 ಜನರನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ನಿರ್ಧರಿಸಿದೆ. 2022ಕ್ಕೆ ಈ ನೇಮಕಾತಿಗಳು ಮುಕ್ತಾಯವಾಗಲಿದೆ ಎಂದು ಸಲೀಲ್ ಪಾರೇಖ್ ಹೇಳಿದ್ದಾರೆ. ಇದರರ್ಥ ನವೆಂಬರ್ ಚುನಾವಣೆ ನಂತರ ಅಮೆರಿಕಾದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ವೀಸಾ ಸಂಬಂಧಿತ ಅಡೆತಡೆಗಳನ್ನು ಎದುರಿಸಲು ಕಂಪನಿ ಸನ್ನದ್ಧವಾಗಿದೆ.
ಭಾರತವೂ ಸೇರಿದಂತೆ ನಾವು ವಿಶ್ವದ ಇತರ ಭಾಗಗಳಲ್ಲೂ ಭಾರಿ ಪ್ರಮಾಣದಲ್ಲಿ ಹೊಸ ನೇಮಕಾತಿಗಳನ್ನು ನಡೆಸುತ್ತಿದ್ದೇವೆ. ಭಾರತದಲ್ಲಿ ನಡೆಸಲಾಗುತ್ತಿರುವ ಭಾರಿ ನೇಮಕಾತಿಯಲ್ಲದೆ ವಿವಿಧ ಭಾಗಗಳಲ್ಲೂ ನೇಮಕಾತಿಗಳು ನಡೆಯಲಿವೆ ಎಂದು ಅವರು ವಿವರಿಸಿದ್ದಾರೆ.
ಕಾಲೇಜು ಮಟ್ಟದಿಂದ ಹಿರಿಯ ಉದ್ಯೋಗಿಗಳ ಮಟ್ಟದವರೆಗೆ ನೇಮಕಾತಿ ಕೈಗೊಳ್ಳುವ ಪಿರಮಿಡ್ ಆಕಾರದ ವಾಣಿಜ್ಯ ಮತ್ತು ಆರ್ಥಿಕ ಮಾದರಿಯನ್ನು ಇನ್ಫೋಸಿಸ್ ಅಳವಡಿಸಿಕೊಂಡಿದ್ದು, ಇದು ಮುಂದುವರಿಯಲಿದೆ ಎಂದು ಅವರು ಹೇಳಿದ್ದಾರೆ.
Comments are closed.