ರಾಷ್ಟ್ರೀಯ

ವಿಶ್ವವಿದ್ಯಾಲಯದ ಅಂತಿಮ ವರ್ಷದ ಪರೀಕ್ಷೆ ನಡೆಸಿ; ಯುಜಿಸಿಯ ಸುತ್ತೋಲೆ ಎತ್ತಿಹಿಡಿದ ಸುಪ್ರೀಂ ಕೋರ್ಟ್

Pinterest LinkedIn Tumblr

ನವದೆಹಲಿ: ವಿಶ್ವವಿದ್ಯಾಲಯದ ಅಂತಿಮ ವರ್ಷದ ಪರೀಕ್ಷೆಯನ್ನು ವಿಶ್ವ ವಿದ್ಯಾಲಯ ಧನಸಹಾಯ ಆಯೋಗ(ಯುಜಿಸಿ)ನಿಯಮ ಪ್ರಕಾರ ನಡೆಸಬೇಕೆಂದು ಸುಪ್ರೀಂ ಕೋರ್ಟ್ ಶುಕ್ರವಾರ ಹೇಳಿದ್ದು, ಈ ಮೂಲಕ ಯುಜಿಸಿಯ ಜುಲೈ 6ರ ಸುತ್ತೋಲೆಯನ್ನು ಎತ್ತಿಹಿಡಿದಿದೆ. ರಾಜ್ಯಗಳು ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೆ ತೇರ್ಗಡೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.

ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ ಅವರನ್ನು ತೇರ್ಗಡೆ ಮಾಡಲು ರಾಜ್ಯ ಸರ್ಕಾರಗಳ ವಿಶ್ವವಿದ್ಯಾಲಯಗಳು ಪರೀಕ್ಷೆ ನಡೆಸಬೇಕು. ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ರಾಜ್ಯಗಳು ಪರೀಕ್ಷೆಗಳನ್ನು ಮುಂದೂಡಬಹುದು ಮತ್ತು ಯುಜಿಸಿಯನ್ನು ಸಮಾಲೋಚಿಸಿ ಪರೀಕ್ಷಾ ದಿನಾಂಕವನ್ನು ನಿಗದಿಪಡಿಸಬಹುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ವಿಶ್ವವಿದ್ಯಾಲಯದ ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸದೆ ವಿದ್ಯಾರ್ಥಿಗಳನ್ನು ತೇರ್ಗಡೆ ಮಾಡಲು ಸಾಧ್ಯವಿಲ್ಲ ಎಂದು ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ನೇತೃತ್ವದ ಮೂವರು ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠ ಹೇಳಿದೆ. ಒಂದು ವೇಳೆ ಸದ್ಯದ ಕೊರೋನಾ ಪರಿಸ್ಥಿತಿಯಲ್ಲಿ ಪರೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರಗಳಲ್ಲಿನ ವಿಶ್ವವಿದ್ಯಾಲಯಗಳು ಭಾವಿಸಿದರೆ ಅವರು ಯುಜಿಸಿಯನ್ನು ಸಂಪರ್ಕಿಸಿ ಅದು ನಿಗದಿಪಡಿಸಿರುವ ಸೆಪ್ಟೆಂಬರ್ 30ರ ಗಡುವನ್ನು ಮುಂದೂಡುವಂತೆ ಕೇಳಿಕೊಳ್ಳಬಹುದು ಎಂದು ನ್ಯಾಯಾಲಯ ಹೇಳಿದೆ.

ಯುಜಿಸಿ ಕಳೆದ ಜುಲೈ 6ರಂದು ನೀಡಿದ್ದ ಆದೇಶದಲ್ಲಿ, ಸೆಪ್ಟೆಂಬರ್ ಕೊನೆಯ ವೇಳೆಗೆ ಎಲ್ಲಾ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳು ಕೊನೆಯ ವರ್ಷದ ಮತ್ತು ಅಂತಿಮ ಸೆಮಿಸ್ಟರ್ ಪರೀಕ್ಷೆಯನ್ನು ನಡೆಸಬೇಕೆಂದು ಘೋಷಿಸಿದ್ದವು. ಪರೀಕ್ಷೆಗಳನ್ನು ಆಫ್ ಲೈನ್ ನಲ್ಲಿ, ಆನ್ ಲೈನ್ ನಲ್ಲಿ ಇಲ್ಲವೇ ಆನ್ ಲೈನ್ ಮತ್ತು ಆಫ್ ಲೈನ್ ಎರಡೂ ವಿಧಾನಗಳಲ್ಲಿ ನಡೆಸಬಹುದು.

ಶೈಕ್ಷಣಿಕ ವಿವೇಕ ಮತ್ತು ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳುವ ಅಗತ್ಯವಿರುವುದರಿಂದ ಅಂತಿಮ ವರ್ಷದ ಪರೀಕ್ಷೆಗಳನ್ನು ಕಡ್ಡಾಯವಾಗಿ ನಡೆಸಬೇಕೆಂದು ಯುಜಿಸಿ ತನ್ನ ಸುತ್ತೋಲೆಯಲ್ಲಿ ತಿಳಿಸಿತ್ತು.

ಕೋವಿಡ್-19 ಸಾಂಕ್ರಾಮಿಕ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳು ಪರೀಕ್ಷೆ ನಡೆಸಬಾರದೆಂದು ವಿದ್ಯಾರ್ಥಿಗಳ ಸಮೂಹ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.

Comments are closed.