ಕರ್ನಾಟಕ

ಅರ್ಚಕ ನಾರಾಯಣ ಆಚಾರ್ ಪುತ್ರಿಯರು ಪರಿಹಾರದ ಚೆಕ್ ಪಡೆಯಲು ಅನ್ಯಧರ್ಮ ವಿವಾಹ ತೊಡಕು!

Pinterest LinkedIn Tumblr


ಕೊಡಗು: ತಲಕಾವೇರಿ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಆಚಾರ್ ಅವರ ಇಬ್ಬರು ಹೆಣ್ಣು ಮಕ್ಕಳು ಅನ್ಯಧರ್ಮದವರನ್ನು ವಿವಾಹವಾಗಿರುವುದು ಅವರ ತಂದೆಯ ಸಾವಿನ ಬಳಿಕ ಸರ್ಕಾರದ ಪರಿಹಾರದ ಹಣ ಪಡೆಯುವುದಕ್ಕೆ ತೊಡಕಾಗಿದೆ.

ಹೌದು, ಆಗಸ್ಟ್ 5 ರಂದು ತಲಕಾವೇರಿಯ ಗಜಗಿರಿ ಬೆಟ್ಟ ಕುಸಿದು ಅಲ್ಲಿನ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಆಚಾರ್ ಸಿಲುಕಿ ಮೃತಪಟ್ಟಿದ್ದರು. ಪ್ರಕೃತಿ ವಿಕೋಪದಿಂದ ಅಸುನೀಗಿದ ನಾರಾಯಣ ಆಚಾರ್ ಅವರ ಇಬ್ಬರು ಮಕ್ಕಳಾದ ನಮಿತಾ ಮತ್ತು ಶಾರದಾ ಅವರಿಗೆ ಸರ್ಕಾರ ಆಗಸ್ಟ್ 15 ರಂದು ತಲಾ 2.5 ಲಕ್ಷದಂತೆ ವಿತರಣೆ ಮಾಡಿತ್ತು. ಆದರೆ, ಪರಿಹಾರದ ಚೆಕ್ಕಿನಲ್ಲಿ ಶಾರದಾ ಆಚಾರ್ ಮತ್ತು ನಮಿತಾ ಆಚಾರ್ ಎಂದು ಹೆಸರು ನಮೂದಿಸಲಾಗಿತ್ತು. ಆದರೆ ಅವರಿಬ್ಬರು ಅನ್ಯಧರ್ಮದವರನ್ನು ವಿವಾಹವಾಗಿದ್ದು, ಇಬ್ಬರ ಬ್ಯಾಂಕ್ ಖಾತೆಯ ಪಾಸ್ ಬುಕ್ ನಲ್ಲಿ ಬೇರೆ ಹೆಸರು ಇದೆ. ಇದು ಅವರು ಚೆಕ್ ಪಡೆಯುವುದಕ್ಕೆ ಸಮಸ್ಯೆ ಆಗಿದ್ದು, ತಹಸೀಲ್ದಾರ್ ಚೆಕ್ ಅನ್ನು ತಡೆ ಹಿಡಿದಿದ್ದಾರೆ.

ಜೊತೆಗೆ ನಾರಾಯಣ ಆಚಾರ್ ಅವರ ಸಹೋದರ ಆನಂದ ತೀರ್ಥ ಸ್ವಾಮಿ ಅವರ ಪರಿಹಾರದ ಚೆಕ್ ಅನ್ನು ತಂಗಿ ಸುಶೀಲಗೆ ವಿತರಣೆ ಮಾಡಲಾಗಿತ್ತು. ಇದಕ್ಕೆ ನಾರಾಯಣ ಆಚಾರ್ ಅವರ ಮಕ್ಕಳು ವಿರೋಧ ವ್ಯಕ್ತಪಡಿಸಿದ್ದರು. ಈಗ ಅತ್ತೆ -ಸೊಸೆಯಂದಿರ ನಡುವೆ ಪರಿಹಾರದ ಹಣಕ್ಕಾಗಿ ಕಲಹ ಇರುವುದರಿಂದ ಚೆಕ್​ಗಳನ್ನು ತಡೆ ಹಿಡಿಯಲಾಗಿದೆ. ಒಟ್ಟಿನಲ್ಲಿ ಅತ್ತೆ ಸೊಸೆಯರ ಕಲಹದ ಜೊತೆಗೆ ಇಬ್ಬರು ಹೆಣ್ಣು ಮಕ್ಕಳು ಅನ್ಯಧರ್ಮಿರನ್ನು ವಿವಾಹವಾಗಿರುವುದು ಈಗ ಪರಿಹಾರದ ಹಣ ಪಡೆಯುವುದಕ್ಕೆ ಕುತ್ತು ತಂದಿದೆ.

ಕಳೆದ ಎರಡು ವಾರಗಳ ಹಿಂದೆ ಕೊಡಗಿನಲ್ಲಿ ಸುರಿದ ಭಾರೀ ಮಳೆಯಿಂದಾಗಿ ಆಗಸ್ಟ್ 7ರಂದು ಭಾಗಮಂಡಲದಲ್ಲಿ ಗುಡ್ಡ ಕುಸಿದಿತ್ತು. ಗುಡ್ಡದ ಮಣ್ಣಿನಡಿ ತಲಕಾವೇರಿ ದೇವಾಲಯದ ಪ್ರಧಾನ ಅರ್ಚಕರಾಗಿದ್ದ ನಾರಾಯಣ ಆಚಾರ್ಯ ಸೇರಿ ಅವರ ಕುಟುಂಬದ ಐವರು ಸದಸ್ಯರು ಹುದುಗಿಹೋಗಿದ್ದರು. ಆನಂತರ ಎನ್​ಡಿಆರ್​ಎಫ್ ತಂಡ ರಕ್ಷಣಾ ಕಾರ್ಯಾಚರಣೆ ನಡೆಸಿದರು ಯಾರೊಬ್ಬರನ್ನು ಜೀವಂತವಾಗಿ ಉಳಿಸಲಾಗಲಿಲ್ಲ.

Comments are closed.