ರಾಷ್ಟ್ರೀಯ

ಮನೆ ಪಕ್ಕದಲ್ಲೇ ಇದ್ದರೂ ಲಾಡ್ಜ್​ ರೂಮ್​ ಬಾಡಿಗೆ ಪಡೆದ ಮಹಿಳೆಯ ದುರಂತ ಕಥೆ!

Pinterest LinkedIn Tumblr


ಕೊಚ್ಚಿ: ಕೇರಳದ ಕಣ್ಣೂರು ಮೂಲದ ಮಹಿಳೆಯ ಸಾವಿನ ಸುತ್ತ ಇದೀಗ ಅನುಮಾನದ ಹುತ್ತಾ ಆವರಿಸಿದೆ. ಅಖಿಲಾ ಪರಾಯಿಲ್​ (36) ಎಂಬಾಕೆಯ ಮೃತದೇಹ ಕೆಲವು ದಿನಗಳ ಹಿಂದೆ ಪುತ್ತಿಯತ್ತೇರು ಪಟ್ಟಣದ ಲಾಡ್ಜ್​ವೊಂದರಲ್ಲಿ ಆತ್ಮಹತ್ಯೆ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಅಚ್ಚರಿಯೆಂದರೆ ತಮ್ಮ ನಿವಾಸದ ಹತ್ತಿರದಲ್ಲೇ ಇದ್ದ ಲಾಡ್ಜ್​ನಲ್ಲಿ ನಕಲಿ ವಿಳಾಸ ನೀಡಿ ಅಖಿಲಾ ರೂಮ್​ ಪಡೆದುಕೊಂಡಿದ್ದರು. ಇದೀಗ ಆಕೆಯ ಸಾವಿನ ಬಗ್ಗೆ ಪಾಲಕರು ಅನುಮಾನ ವ್ಯಕ್ತಪಡಿಸಿ ತನಿಖೆಗೆ ಒತ್ತಾಯಿಸಿದ್ದಾರೆ.

ಅಂದಹಾಗೆ ಅಖಿಲಾ ಕಣ್ಣೂರಿನ ಕೊಟ್ಟಕುನ್ನು ಮೂಲದ ನಿವೃತ್ತ ಹೆಡ್​ ಮಾಸ್ಟರ್​ ಎಂ. ಮುಕುಂದನ್​ ಅವರ ಮಗಳು. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ್ದ ಈಕೆ ಬಿಎಸ್ಸಿ ನರ್ಸಿಂಗ್​ ಸಹ ಮಾಡಿದ್ದಳು. ತಾನು ಆತ್ಮಹತ್ಯೆಗೆ ಶರಣಾಗುವ ಮುನ್ನ ಬಹುದಿನಗಳ ಬಳಿಕ ಕಣ್ಣೂರಿನಲ್ಲಿರುವ ತಮ್ಮ ನಿವಾಸಕ್ಕೆ ಭೇಟಿ ನೀಡಿದ್ದಳು. ಅಲ್ಲದೆ, ಕೆಲ ಸಂಬಂಧಿಕರ ಮನೆಗೂ ಹೋಗಿದ್ದಳು.

ಎರಡನೇ ಬಾರಿ ಡಿವೋರ್ಸ್​ ಪಡೆದುಕೊಂಡಿದ್ದ ಆಕೆಯ ಬಳಿ ಒಂದು ಕಾರು, 30 ಲಕ್ಷ ರೂ. ನಗದು ಮತ್ತು 40 ಸವರನ್​ ಚಿನ್ನವಿತ್ತು. ಆದರೆ, ಸಾವಿಗೂ ಮುನ್ನ ಕೆಲ ವಾರಗಳ ಹಿಂದೆ ಯಾವುದೇ ಬೆಲೆ ಬಾಳುವ ವಸ್ತುಗಳಿಲ್ಲದೆ ತುಂಬಾ ಅಶಕ್ತ ರೀತಿಯಲ್ಲಿ ಮನೆಗೆ ಮರಳಿದ್ದಳು ಎಂದು ಅಖಿಲಾ ಸಂಬಂಧಿಕರೊಬ್ಬರು ಹೇಳಿದ್ದಾರೆ.

2016 ಡಿಸೆಂಬರ್ ನಂತರ ಆಕೆಯ ಜೀವನದಲ್ಲಿ ವಿಚಿತ್ರ ಘಟನೆ ನಡೆಯಿತು. ಅವಳು ಭೇಟಿ ನೀಡುತ್ತಿದ್ದ ಸ್ಥಳದ ಬಗ್ಗೆಯೂ ನಮಗೆ ಮಾಹಿತಿ ಸಿಗುತ್ತಿರಲಿಲ್ಲ. ಅಲ್ಲದೆ, ಅವಳು ಬೆಲೆ ಬಾಳುವ ವಸ್ತುಗಳನ್ನು ಹೇಗೆ ಕಳೆದುಕೊಂಡಳು ಎಂಬುದರ ಬಗ್ಗೆಯೂ ತಿಳಿದಿಲ್ಲ. ಈ ಎಲ್ಲ ಪ್ರಶ್ನೆಗಳಿಗೆ ನಮಗೆ ಉತ್ತರ ಸಿಗಬೇಕಿದೆ ಎಂದು ಸಂಬಂಧಿಕರು ಒತ್ತಾಯಿಸಿದ್ದಾರೆ. ​

ಅಖಿಲಾ ಅವರ ಕಾರು ಅಲಪ್ಪುಜಾದಲ್ಲಿ ಅನಾಥ ರೀತಿಯಲ್ಲಿ ಪತ್ತೆಯಾಗಿದ್ದಾಗಿ ಒಂದು ವರ್ಷದ ಹಿಂದಷ್ಟೇ ಮಾಹಿತಿ ಪಡೆದುಕೊಂಡಿದ್ದರು. ಹೀಗಿರುವಾಗ ಕೆಲವು ತಿಂಗಳ ಹಿಂದೆ ಅಖಿಲಾರನ್ನು 4 ಲಕ್ಷ ರೂ. ಹಣದೊಂದಿಗೆ ಬಂಧಿಸಿದ್ದರು. ತನ್ನ ತವರಿಗೆ ಮರಳುವ ಮುನ್ನ ಆಕೆ ತ್ರಿಕಾರಿಪುರ, ಕಾಸರಗೋಡು ಮತ್ತು ಚೆರುಕುನ್ನುವಿನಲ್ಲಿ ನೆಲೆಸಿದ್ದಳು ಎಂದು ವರದಿಯಾಗಿದೆ.

ಇದರ ನಡುವೆ ವಾಲಪಟ್ಟಣಂ ಪೊಲೀಸರು ಅಖಿಲಾ ಪಾಸ್​​ಪೋರ್ಟ್​ ಪರಿಶೀಲನೆ ಮಾಡಿದಾಗ ಬಹಳ ಮುಖ್ಯವಾದ ಅಂಶವನ್ನು ಗಮನಿಸಿದ್ದಾರೆ. ಅದರಲ್ಲಿ ಅನ್ಯಧರ್ಮಕ್ಕೆ ಸೇರಿದ ವ್ಯಕ್ತಿಯೊಬ್ಬನ ಹೆಸರನ್ನು ಆಕೆಯ ಪತಿ ಎಂದು ಉಲ್ಲೇಖಿಸಲಾಗಿತ್ತು. ಆ ಸಂದರ್ಭದಲ್ಲಿ ಅಖಿಲಾ ಮತ್ತು ಎರಡನೇ ಪತಿಯ ನಡುವೆ ವಿಚ್ಛೇದನ ಆಗಿರಲಿಲ್ಲ.

ಇನ್ನು ಅಖಿಲಾ ಮನೆಯಿಂದ ಸುಮಾರು 1.5 ಕಿ.ಮೀ ದೂರದಲ್ಲಿರುವ ಲಾಡ್ಜ್​ನಲ್ಲಿ ನಕಲಿ ವಿಳಾಸ ನೀಡಿ ರೂಮ್​ ಪಡೆದುಕೊಂಡಿದ್ದಳು. ತುಂಬಾ ಹೊತ್ತಾದರೂ ಹೊರ ಬರದಿದ್ದಾಗ ನಕಲಿ ಕೀ ಬಳಸಿ ಬಾಗಿಲು ತೆರೆದು ನೋಡಿದಾಗ ಲಾಡ್ಜ್​ ಸಿಬ್ಬಂದಿ ಅಖಿಲಾ ಮೃತದೇಹ ನೋಡಿ ಶಾಕ್​ ಆಗಿದ್ದರು.

ವಿಚಿತ್ರವೆಂದರೆ ಆಕೆಯ ಸಾವಿನ ಬಗ್ಗೆ ಯಾರೊಬ್ಬರು ಸಹ ದೂರು ದಾಖಲಿಸಿಲ್ಲ. ಹೀಗಾಗಿ ಪೊಲೀಸರು ಆತ್ಮಹತ್ಯೆ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಆದರೆ, ಆಕೆಯ ಆತ್ಮಹತ್ಯೆ ಹಿಂದಿ ಕಾರಣವೇನು ಎಂಬುದನ್ನು ಪತ್ತೆಹಚ್ಚಿ ಎಂದು ಪೊಲೀಸ್​ ವರಿಷ್ಠಾಧಿಕಾರಿಯನ್ನು ಅಖಿಲಾ ಪಾಲಕರು ಒತ್ತಾಯಿಸಿದ್ದಾರೆ.

Comments are closed.