ರಾಷ್ಟ್ರೀಯ

ವರ್ಕ್‌ ಫ್ರಂ ಹೋಮ್‌ ಮಾಡುವವರಿಗೆ ಹೆಚ್ಚುವರಿ ತೆರಿಗೆ!

Pinterest LinkedIn Tumblr


ನವದೆಹಲಿ: ಕರೊನಾ, ಲಾಕ್‌ಡೌನ್‌ನಿಂದಾಗಿ ಇದೀಗ ಹಲವಾರು ಕಂಪನಿಗಳು ತನ್ನ ನೌಕರರಿಗೆ ವರ್ಕ್‌ ಫ್ರಂ ಹೋಂ ಅವಕಾಶ ಕಲ್ಪಿಸಿದೆ. ಕೆಲವು ಕಂಪನಿಗಳು ವರ್ಷದ ಅಂತ್ಯದವರೆಗೂ ಮನೆಯಲ್ಲಿಂದಲೇ ಕೆಲಸ ಮಾಡಿ ಎಂದೂ ಹೇಳಿದೆ.

ಮನೆಯಲ್ಲಿ ಕೆಲಸ ಮಾಡುವುದರಿಂದ, ಅದರಲ್ಲಿಯೂ ಮುಖ್ಯವಾಗ ಮಹಾನಗರಗಳಲ್ಲಿ ಟ್ರಾಫಿಕ್‌ ಕಿರಿಕಿರಿ ತಪ್ಪುತ್ತಿದೆ, ಕರೊನಾ ವೈರಸ್‌ ಭೀತಿಯಿಂದ ಹೋಟೆಲ್‌, ಬೀದಿಬೀದಿ ತಿನಿಸು ತಿನ್ನದೇ ಉಳಿತಾಯವಾಗುತ್ತಿದೆ ಎಂದೆಲ್ಲಾ ಎಣಿಕೆ ಹಾಕಿರಲು ಸಾಕು. ಆದರೆ ಮನೆಯಿಂದಲೇ ಕೆಲಸ ಮಾಡುತ್ತಿರುವವರ ಪೈಕಿ ಕೆಲವು ತೆರಿಗೆದಾರರು ಮಾಮೂಲಿಗಿಂತ ಹೆಚ್ಚಿನ ಆದಾಯ ತೆರಿಗೆ ತೆರಬೇಕಾಗಬಹುದು ಎಂದಿದ್ದಾರೆ ತಜ್ಞರು.

ಹಾಗಿದ್ದರೆ ತಜ್ಞರು ಹಾಕಿರುವ ಅಂಕಿಅಂಶಗಳು ಏನು ಹೇಳುತ್ತವೆ? ಆದಾಯ ತೆರಿಗೆ ಹೆಚ್ಚಿಗೆ ಕಟ್ಟಬೇಕಾಗಿರುವುದು ಏತಕ್ಕೆ ಎಂಬ ಅವರ ಲೆಕ್ಕಾಚಾರ ಹೀಗಿದೆ ನೋಡಿ:

ಸಾಮಾನ್ಯವಾಗಿ ಎಲ್ಲಾ ಕಂಪನಿಗಳ ಆದಾಯ ತೆರಿಗೆದಾರರಿಗೆ ಪ್ರಯಾಣದ ವೆಚ್ಚ (ಟಿ.ಎ) ಮನೆ ಬಾಡಿಗೆ (ಎಚ್‌ಆರ್‌ಎ) ಹಾಗೂ ಹೊರಗೆ ಊಟ-ತಿಂಡಿ ಮಾಡುವುದರ ಖರ್ಚು (ಡಿ.ಎ) ನೀಡುತ್ತವೆ. ಇದರ ಜತೆಗೆ ಕೆಲವು ಸಾಫ್ಟ್‌ವೇರ್‌ ಸಂಸ್ಥೆ ವರ್ಕ್ ಫ್ರಂ ಹೋಂ ಭತ್ಯೆಯನ್ನೂ ನೀಡುತ್ತಿವೆ.

ಇವಿಷ್ಟನ್ನು ಪರಿಗಣನೆಗೆ ತೆಗೆದುಕೊಳ್ಳುವುದಾದರೆ, ಮೊದಲು ಪ್ರಯಾಣದ ವೆಚ್ಚವನ್ನು ತೆಗೆದುಕೊಳ್ಳೋಣ. ಇದೀಗ ಮನೆಯಲ್ಲಿಯೇ ಇರುವ ಕಾರಣ, ಕಚೇರಿಗೆ, ಕಚೇರಿ ಕೆಲಸದ ನಿಮಿತ್ತ ಹೊರಗಡೆ ಪ್ರಯಾಣ ಮಾಡುವ ಅವಕಾಶವೇ ಇಲ್ಲ. ಆದ್ದರಿಂದ ಪ್ರಯಾಣ ಮಾಡಿದರೆ ಮಾತ್ರ ತೋರಿಸಬಹುದಾಗಿರುವ ಈ ವೆಚ್ಚವನ್ನು ನೌಕರರು ತೋರಿಸಲು ಸಾಧ್ಯವಿಲ್ಲ. ತೆರಿಗೆ ರಿಟನ್ಸ್‌ರ್‍ ಸಲ್ಲಿಸುವಾಗ ತೋರಿಸಲು ಸಾಧ್ಯವಿಲ್ಲ.

ಇನ್ನು ಮನೆ ಬಾಡಿಗೆ ಭತ್ಯೆ (ಎಚ್‌ಆರ್‌ಎ) ವಿಷಯಕ್ಕೆ ಬರುವುದಾದರೆ, ಹಲವು ಮಂದಿ ನಗರ ತೊರೆದು ತಮ್ಮ ಊರಿಗೆ ವಾಪಸ್‌ ಹೋಗಿದ್ದಾರೆ. ಹೀಗಾಗಿ ಅವರು ಮನೆ ಬಾಡಿಗೆ ಪಾವತಿಸುತ್ತಿಲ್ಲ. ಮನೆ ಬಾಡಿಗೆಯ ದಾಖಲೆ ತೋರಿಸುತ್ತಿಲ್ಲವಾದ್ದರಿಂದ ಮನೆ ಬಾಡಿಗೆ ಭತ್ಯೆಗೂ ತೆರಿಗೆ ಕಟ್ಟಬೇಕಾಗುತ್ತದೆ.

ಇನ್ನು, ರಜೆ ಪ್ರಯಾಣ ಭತ್ಯೆಯ ವಿಚಾರಕ್ಕೆ ಬರುವುದಾದರೆ, ಇದಕ್ಕೂ ತೆರಿಗೆ ಕಟ್ಟಬೇಕಾಗಿ ಬರಬಹುದು. ಏಕೆಂದರೆ ರಜೆಗೆ ಪ್ರಯಾಣಕ್ಕೆ ಹೋಗದಿದ್ದರೂ ಕೆಲವರು ದಾಖಲೆಗಳನ್ನು ತೋರಿಸಿ ಆದಾಯ ತೆರಿಗೆಯಿಂದ ವಿನಾಯಿತಿ ಪಡೆಯುತ್ತಿದ್ದರು, ಆದರೆ ಇದೀಗ ಕರೊನಾ ಇರುವುದರಿಂದ ಯಾರೂ ರಜೆಯಲ್ಲಿ ಪ್ರವಾಸಕ್ಕೆ ಹೋಗುತ್ತಿಲ್ಲ. ಹೀಗಾಗಿ ಅದರ ಬಿಲ್‌ ತೋರಿಸಿ ತೆರಿಗೆ ವಿನಾಯ್ತಿ ಪಡೆಯಲು ಸಾಧ್ಯವಿಲ್ಲ.

ಇದರ ಹೊರತಾಗಿ ಕೆಲವು ಕಂಪನಿಗಳು ತಮ್ಮ ನೌಕರರಿಗೆ ಮನೆಯಿಂದ ಕೆಲಸ ಮಾಡಲು ಅನುಕೂಲ ಮಾಡಿಕೊಡಲು ಇಂಟರ್‌ನೆಟ್‌ ಬಿಲ್‌, ವಿದ್ಯುತ್‌ ಶುಲ್ಕ, ಲ್ಯಾಪ್‌ಟಾಪ್‌ ಖರೀದಿಗೆ ಹಣ, ಪೀಠೋಪಕರಣ ಕೊಳ್ಳಲು ಹೀಗೆ ವರ್ಕ್ ಫ್ರಂ ಹೋಂ ಭತ್ಯೆ ನೀಡುತ್ತಿವೆ. ಇದಕ್ಕೆ ಬಿಲ್‌ ನೀಡಬೇಕಾದ ಅಗತ್ಯವಿಲ್ಲದೆ ಇದ್ದರೆ ನೌಕರರ ಆದಾಯದ ಭಾಗವಾಗಿ ಇದಕ್ಕೂ ತೆರಿಗೆ ಪಾವತಿಸಬೇಕಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ.

Comments are closed.