
ವಿಶ್ವದ ಪ್ರಮುಖ ಭಾರತೀಯ ಶಾಸ್ತ್ರೀಯ ಗಾಯಕರಲ್ಲಿ ಒಬ್ಬರಾದ ಪಂಡಿತ್ ಜಸರಾಜ್ (90) ಅವರು ಅಮೆರಿಕದ ನ್ಯೂಜೆರ್ಸಿಯಲ್ಲಿ ಇಂದು ನಿಧನರಾಗಿದ್ದಾರೆ ಎಂದು ಅವರ ಕುಟುಂಬ ತಿಳಿಸಿದೆ.
1930 ರಲ್ಲಿ ಹರಿಯಾಣದಲ್ಲಿ ಜನಿಸಿದ ಅವರ ಸಂಗೀತ ವೃತ್ತಿಜೀವನವು ಕಳೆದ ಎಂಟು ದಶಕಗಳವರೆಗೆ ವ್ಯಾಪಿಸಿತ್ತು. 2000 ನೇ ಇಸವಿಯಲ್ಲಿ ಅವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮವಿಭೂಷಣ ನೀಡಲಾಗಿತ್ತು.
ಭಾರತದಲ್ಲಿ ಕೊರೋನಾ ವೈರಸ್ ಲಾಕ್ಡೌನ್ ಜಾರಿಗೊಳಿಸಿದ್ದಾಗ ಮೇವತಿ ಘರಾನಾ ಸಂಗೀತ ವಂಶಾವಳಿಗೆ ಸೇರಿದ್ದ ಪಂಡಿತ್ ಜಸರಾಜ್ ಅಮೆರಿಕದಲ್ಲಿದ್ದರು. ಹೀಗಾಗಿ ಅವರು ಭಾರತಕ್ಕೆ ಹಿಂದಿರುಗಲು ಸಾಧ್ಯವಾಗದೆ ಅಲ್ಲೇ ಉಳಿಯಲು ನಿರ್ಧರಿಸಿದ್ದರು.
ಆದರೆ, ಅಮೆರಿಕದ ನ್ಯೂಜೆರ್ಸಿಯಲ್ಲಿರುವ ಅವರ ಮನೆಯಲ್ಲಿ ಇಂದು ಹೃದಯಾಘಾತಕ್ಕೆ ಒಳಗಾಗಿ ಅಮೆರಿಕ ಕಾಲಮಾನದ ಪ್ರಕಾರ ಇಂದು ಬೆಳಗ್ಗೆ 5.15ಕ್ಕೆ ಇಹಲೋಕ ತ್ಯಜಿಸಿದ್ದಾರೆ ಎಂದು ಅವರ ಕುಟುಂಬ ವರ್ಗ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಭಗವಾನ್ ಕೃಷ್ಣನು ಸ್ವರ್ಗದ ಬಾಗಿಲುಗಳ ಮೂಲಕ ಅವರನ್ನು ಪ್ರೀತಿಯಿಂದ ಸ್ವಾಗತಿಸಲಿ. ಅಲ್ಲಿ ಪಂಡಿತ್ ಜಿ ಓಂ ನಮೋ ಭಗವಟೆ ವಾಸುದೇವಾಯ ಎಂದು ತನ್ನ ಪ್ರೀತಿಯ ಭಗವಂತನಿಗಾಗಿ ಮಾತ್ರ ಹಾಡಲಿದ್ದಾರೆ. ಅವರ ಆತ್ಮವು ಶಾಶ್ವತ ಸಂಗೀತ ಶಾಂತಿಯಲ್ಲಿ ನೆಲೆಗೊಳ್ಳಬೇಕೆಂದು ನಾವು ಪ್ರಾರ್ಥಿಸುತ್ತೇವೆ” ಎಂದು ಆ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.
ಪಂಡಿತ್ ಜಸರಾಜ್ ನಿಧನಕ್ಕೆ ಕಂಬನಿ ಮಿಡಿದಿರುವ ಪ್ರಧಾನಿ ನರೇಂದ್ರ ಮೋದಿ, “ಪಂಡಿತ್ ಜಸರಾಜ್ ಅವರ ಸಾವು ದೇಶದ ಸಾಂಸ್ಕೃತಿಕ ಕ್ಷೇತ್ರದಲ್ಲಿ ತೀವ್ರ ಅನೂರ್ಜಿತತೆಯನ್ನುಂಟು ಮಾಡಿದೆ. ಅವರ ಚಿತ್ರಣಗಳು ಅತ್ಯುತ್ತಮವಾಗಿದ್ದವು ಮಾತ್ರವಲ್ಲ, ಇತರ ಹಲವಾರು ಗಾಯಕರಿಗೆ ಅಸಾಧಾರಣ ಮಾರ್ಗದರ್ಶಕರಾಗಿ ಅವರು ಗುರುತಿಸಿಕೊಂಡಿದ್ದರು” ಎಂದು ವಿಷಾಧ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಸೇರಿದಂತೆ ಹಲವಾರು ಪ್ರಸಿದ್ಧ ವ್ಯಕ್ತಿಗಳು ಪಂಡಿತ್ ಜಸರಾಜ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.
Comments are closed.