ಕ್ರೀಡೆ

ಐಪಿಎಲ್ ಪ್ರಾಯೋಜಿಕತ್ವಕ್ಕೆ ಬಾಬಾ ರಾಮ್ ದೇವ್ ಇಟ್ಟಿರುವ ಷರತ್ತು ಏನು ಗೊತ್ತೇ…?

Pinterest LinkedIn Tumblr

13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿ ಆರಂಭ ಹತ್ತಿರವಾಗುತ್ತಿದೆ. ಮಿಲಿಯನ್ ಡಾಲರ್ ಟೂರ್ನಿಗೆ ಇನ್ನೇನು ಕೇವಲ ಒಂದು ತಿಂಗಳಷ್ಟೆ ಬಾಕಿ ಉಳಿದಿದ್ದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಸಕಲ ತಯಾರಿಯಲ್ಲಿದೆ. ವೇಳಾಪಟ್ಟಿ ಸಿದ್ದತೆ ಅಂತಿಮ ಹಂತದಲ್ಲಿದ್ದು ಕೆಲವೇ ದಿನಗಳಲ್ಲಿ ಪ್ರಕಟವಾಗಲಿದೆ. ಈ ನಡುವೆ ಬಿಸಿಸಿಐ, ಐಪಿಎಲ್​ ಟೈಟಲ್​ನ ಹೊಸ ಪ್ರಾಯೋಜಕರಿಗಾಗಿ ಹುಡುಕಾಟದಲ್ಲಿದೆ. ಈಗಾಗಲೇ ಅನೇಕ ಕಂಪೆನಿಗಳ ಹೆಸರು ಐಪಿಎಲ್ ಜೊತೆ ಕೇಳಿಬರುತ್ತಿದೆ. ಆದರೆ ಯಾವುದು ಅಂತಿಮವಾಗಿಲ್ಲ.

ಈ ನಡುವೆ ಐಪಿಎಲ್ ಪ್ರಾಯೋಜಿಕತ್ವಕ್ಕೆ ದೇಶೀಯ ಸಂಸ್ಥೆ ಪತಂಜಲಿ ಮುಂದೆಬಂದು, ‘ಪತಂಜಲಿ ಆಯುರ್ವೇದ’ ಸಂಸ್ಥೆ ಐಪಿಎಲ್​​ ಟೈಟಲ್​​ಗೆ ಬಿಡ್​ ಮಾಡಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ಯೋಗ ಗುರು ಬಾಬಾ ರಾಮ್ ದೇವ್ ಸ್ಪಷ್ಟಪಡಿಸಿದ್ದಾರೆ. ಆದರೆ ಷರತ್ತುಗಳು ಅನ್ವಯ ಆಗುತ್ತವೆ ಎಂಬ ಮಾತನ್ನ ಬಾಬಾ ರಾಮ್ ದೇವ್ ಹೇಳಿದ್ದಾರೆ.

ಪತಂಜಲಿ ಬ್ರಾಂಡ್‌ಗೆ ಜಾಗತಿಕ ಮಾರುಕಟ್ಟೆ ಕಲ್ಪಿಸುವ ಸಲುವಾಗಿ ಈ ವರ್ಷದ ಐಪಿಎಲ್ ಪ್ರಾಯೋಜಕತ್ವ ವಹಿಸುವ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಕೆಲ ದಿನಗಳ ಹಿಂದೆ ರಾಷ್ಟ್ರೀಯ ಮಾಧ್ಯಮಗಳಲ್ಲಿ ಈ ಬಗ್ಗೆ ವರದಿಯಾಗಿತ್ತು. ಇದನ್ನು ತಿರಸ್ಕರಿಸಿದ ಬಾಬಾ ರಾಮದೇವ್, ಭಾರತದ ಯಾವುದೇ ಕಾರ್ಪೊರೇಟ್ ಸಂಸ್ಥೆಗಳು ಮುಂದೆ ಬಾರದಿದ್ದರೆ ಮಾತ್ರ ನಾವು ಪ್ರಾಯೋಜಕತ್ವಕ್ಕೆ ಬಿಡ್​ ಮಾಡೋದಾಗಿ ಹೇಳಿದ್ದಾರೆ.

2018 ರಿಂದಲೂ ಐಪಿಎಲ್ ಟೈಟಲ್ ಪ್ರಾಯೋಜಕತ್ವವನ್ನು ವಿವೋ ಸಂಸ್ಥೆ ವಹಿಸಿಕೊಂಡಿತ್ತು. ಆದರೆ ಭಾರತ-ಚೀನಾ ನಡುವಿನ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಐಪಿಎಲ್ ಪ್ರಾಯೋಜಕತ್ವವನ್ನು ಕೈಬಿಟ್ಟು ಸ್ವಯಂ ವಿವೋ ಸಂಸ್ಥೆ ಹಿಂದೆ ಸರಿದಿತ್ತು.

ಇದರ ಬೆನ್ನಲ್ಲೇ ಐಪಿಎಲ್ ಸ್ಪಾನ್ಸರ್​ಶಿಪ್​ಗಾಗಿ ಪತಂಜಲಿ ಜೊತೆಗೆ ಜಿಯೋ, ಅಮೇಜಾನ್, ಟಾಟಾ ಗ್ರೂಪ್, ಡ್ರೀಮ್ 11 ಹಾಗೂ ಬೈಜುಸ್ ಕಂಪೆನಿಗಳ ಹೆಸರು ಕೂಡ ಕೇಳಿಬರುತ್ತಿದೆ. ಆದರೆ, ಇವುಗಳಲ್ಲಿ ಇನ್ನೂ ಅಂತಿಮವಾಗಿಲ್ಲ.

ಸೆಪ್ಟೆಂಬರ್ 19 ರಿಂದ ಐಪಿಎಲ್ 2020 ಟೂರ್ನಿ ಆರಂಭವಾಗಲಿದ್ದು, ನವೆಂಬರ್ 10ರ ವರೆಗೆ ಯುಎಇಯಲ್ಲಿ ನಡೆಯಲಿದೆ. ಆದರೆ, ಈ ಬಾರಿಯ ಐಪಿಎಲ್​ನ ಆರಂಭದ ಪಂದ್ಯಕ್ಕೆ ಕೆಲವು ವಿದೇಶಿ ಆಟಗಾರರ ಅಲಭ್ಯತೆ ಕಾಡಲಿದೆ.

ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ಆಟಗಾರರು ತಮ್ಮ ದೇಶದ ಪರ ಆಡುತ್ತಿರುವುದರಿಂದ, ಮೊದಲ ವಾರ ಟೂರ್ನಿಯಲ್ಲಿ ಭಾಗವಹಿಸೋದು ಅನುಮಾನ ಎನ್ನಲಾಗುತ್ತಿದೆ. ಅಲ್ಲದೆ ನ್ಯಾಷನಲ್ ಕಮಿಟ್​ಮೆಂಟ್ ಮುಗಿಸಿ ಐಪಿಎಲ್ ಟೂರ್ನಿ ಆಡಲು ಯುಎಇಗೆ ಬಂದರೂ, ವಿದೇಶಿ ಆಟಗಾರರು ಕ್ವಾರಂಟೀನ್​ ನಿಯಮ ಪಾಲಿಸಲೇಬೇಕಿದೆ. ಹೀಗಾಗಿ ಐಪಿಎಲ್ ಮೊದಲ ವಾರದಲ್ಲಿ ಕೆಲ ಸ್ಟಾರ್ ಆಟಗಾರರು ಲಭ್ಯವಿರುವುದಿಲ್ಲ.

Comments are closed.