
ನವದೆಹಲಿ: ಭಾರತದಲ್ಲಿ ಮದುವೆಗಾಗಿ ಹೆಣ್ಣುಮಕ್ಕಳಿಗೆ 18 ವರ್ಷ ಮತ್ತು ಗಂಡು ಮಕ್ಕಳಿಗೆ 21 ವರ್ಷ ಕಡ್ಡಾಯಗೊಳಿಸಲಾಗಿದೆ. ಆದರೆ, ಇದೀಗ ದೇಶದಲ್ಲಿ ಹುಡುಗಿಯರ ಮದುವೆಯ ವಯಸ್ಸನ್ನು 18 ರಿಂದ 21 ವರ್ಷಕ್ಕೆ ಏರಿಕೆ ಮಾಡುವ ಎಲ್ಲಾ ಸಾಧ್ಯತೆಗಳಿವೆ. ಇದರಿಂದ ದೇಶದ ಹೆಣ್ಣುಮಕ್ಕಳ ಜೀವನದಲ್ಲಿ ಹಲವು ಬದಲಾವಣೆಗಳು ಸಂಭವಿಸುವ ಸಾಧ್ಯತೆಯನ್ನು ತಜ್ಞರು ವರ್ತಿಸಿದ್ದಾರೆ. ಹೆಣ್ಣುಮಕ್ಕಳ ಮದುವೆಗೆ ಹೊಸ ವಯಸ್ಸಿನ ಮಿತಿಯನ್ನು ಭಾರತ ಸರ್ಕಾರ ಮರುಪರಿಶೀಲಿಸಲಿದೆ. ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಈ ಕುರಿತು ಸಂಕೇತವನ್ನು ನೀಡಿದ್ದಾರೆ.
ತಮ್ಮ ಭಾಷಣದಲ್ಲಿ ಈ ಕುರಿತು ಉಲ್ಲೇಖಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, “ಹೆಣ್ಣುಮಕ್ಕಳ ಮದುವೆಗೆ ಕನಿಷ್ಠ ವಯಸ್ಸಿನ ಮಿತಿಯನ್ನು ಮರುಪರಿಶೀಲಿಸಲು ಸಮಿತಿಯೊಂದನ್ನು ನೇಮಿಸಲಾಗಿದ್ದು, ಸಮಿತಿಯು ಸಂಬಂಧಿತ ವರದಿಯನ್ನು ಸಲ್ಲಿಸಿದ ನಂತರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.
ಮಾತೃ ಮೃತ್ಯುದರ ಇಳಿಕೆ ಮಾಡಲು ಹೆಣ್ಣುಮಕ್ಕಳ ವಿವಾಹ ವಯಸ್ಸನ್ನು ಏರಿಕೆ ಮಾಡುವ ವಿಚಾರವನ್ನು ಕೇಂದ್ರ ಸ್ಥಾನದಲ್ಲಿ ಇಡಲಾಗಿದೆ. ಕೆಲ ದಿನಗಳ ಹಿಂದೆಯಷ್ಟೇ ಸರ್ವೋಚ್ಛ ನ್ಯಾಯಾಲಯ ಕೂಡ ಈ ಕುರಿತು ಕೇಂದ್ರ ಸರ್ಕಾರಕ್ಕೆ ನಿರ್ದೇಶನಗಳನ್ನು ನೀಡಿತ್ತು. ಅಷ್ಟೇ ಅಲ್ಲ ಈ ಕುರಿತು ತನ್ನ ಕಳೆದ ಬಜೆಟ್ ನಲ್ಲಿ ಉಲ್ಲೇಖಿಸಿದ್ದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಕೂಡ ಹೆಣ್ಣುಮಕ್ಕಳ ವಿವಾಹ ವಯೋಮಿತಿಯನ್ನು ಪರಿಶೀಲಿಸಲು ಟಾಸ್ಕ್ ಫೋರ್ಸ್ ವೊಂದನ್ನು ರಚಿಸಲಾಗುವುದು ಎಂದು ಹೇಳಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.
Comments are closed.