
ಭಾರತದ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಬೆನ್ನಿಗೆ ಮತ್ತೋರ್ವ ಸ್ಟಾರ್ ಆಟಗಾರ ಸುರೇಶ್ ರೈನಾ ಸಹ ಇಂದು ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ ಹೇಳಿದ್ದಾರೆ.
ಅಂಡರ್19 ಭಾರತ ತಂಡದಲ್ಲಿ ಸ್ಟಾರ್ ಆಟಗಾರನಾಗಿ ಮಿಂಚಿದ್ದ ಸುರೇಶ್ ರೈನಾ 2005ರಲ್ಲಿ ಶ್ರೀಲಂಕಾ ವಿರುದ್ಧ ದಂಬುಲಾದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಭಾರತ ತಂಡಕ್ಕೆ ಪಾದಾರ್ಪಣೆ ಮಾಡಿದ್ದರು. ಅಲ್ಲಿಂದ ಹಿಂದಿರುಗಿ ನೋಡದ ಸುರೇಶ್ ರೈನಾ ಭಾರತದ ಪರ 226 ಏಕದಿನ ಪಂದ್ಯದಲ್ಲಿ 5615ರನ್ ಗಳಿಸಿದ್ದಾರೆ. ಇದರಲ್ಲಿ 5 ಶತಕ ಮತ್ತು 36 ಅರ್ಧ ಶತಕ ಒಳಗೊಂಡಿದೆ. 116 ಇವರ ವ್ಯಯಕ್ತಿಕ ಗರಿಷ್ಠ ಮೊತ್ತ.
ಇನ್ನೂ ಭಾರತದ ಪರ 18 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಸುರೇಶ್ ರೈನಾ 768 ರನ್ ಭಾರಿಸಿದ್ದರು. ಒಂದು ಶತಕ, ಏಳು ಅರ್ಧ ಶತಕವನ್ನು ಗಳಿಸಿದ್ದರು. 120 ವ್ಯಯಕ್ತಿಕ ಗರಿಷ್ಠ ಮೊತ್ತ.
ಏಕದಿನ ಕ್ರಿಕೆಟ್ನಲ್ಲಿ ಅದ್ಭುತ ಫಿನಿಶರ್ ಎಂದು ಹೆಸರು ಗಳಿಸಿದ್ದ ಸುರೇಶ್ ರೈನಾ ಅಪಾಯದ ಸಂದರ್ಭದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿ ಅನೇಕ ಪಂದ್ಯಗಳಲ್ಲಿ ಭಾರತ ವಿಜಯಿಯಾಗಲು ಕಾರಣರಾಗಿದ್ದರು. ಇದೇ ಕಾರಣಕ್ಕೆ ಅವರನ್ನು ಭಾರತದ ಮೈಕ್ ಹಸ್ಸಿ ಎಂದು ಕರೆಯಲಾಗುತ್ತಿತ್ತು.
ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಭಾರತ 2011ರಲ್ಲಿ ವಿಶ್ವಕಪ್ ಜಯಿಸಿದ್ದ ತಂಡದಲ್ಲಿ ಸುರೇಶ್ ರೈನಾ ಅವಿಭಾಜ್ಯ ಅಂಗವಾಗಿದ್ದರು. ಅಲ್ಲದೆ, ಐಪಿಎಲ್ನಲ್ಲಿ ಭಾರತದ ಪರ ಅತಿಹೆಚ್ಚು ರನ್ ಭಾರಿಸಿದ್ದ ಹಿರಿಮೆಗೂ ಪಾತ್ರರಾಗಿದ್ದರು.
ಆದರೆ, 2017ರ ನಂತರ ಸುರೇಶ್ ರೈನಾ ಸತತವಾಗಿ ವೈಫಲ್ಯ ಅನುಭವಿಸುವ ಮೂಲಕ ಅಂತಾರಾಷ್ಟ್ರೀಯ ತಂಡದಿಂದ ಹೊರಗುಳಿದಿದ್ದರು. ಈ ನಡುವೆ ಫಿಟ್ನೆಸ್ ಸಮಸ್ಯೆಯೂ ಅವರನ್ನೂ ಕಾಡಿತ್ತು. 2018 ಜುಲೈ17ರಂದು ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ಅವರು ಸ್ಥಾನ ಪಡೆದಿದ್ದರಾದರೂ ಉತ್ತಮ ಪ್ರದರ್ಶನ ನೀಡುವಲ್ಲಿ ಎಡವಿದ್ದರು. ಆನಂತರ ಅವರು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ.
ಇದೀಗ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸುತ್ತಿದ್ದಂತೆ ಸುರೇಶ್ ರೈನಾ ಸಹ ಅವರ ಬೆನ್ನ ಹಿಂದೆಯೇ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದಾರೆ. ಆದರೆ, ಐಪಿಎಲ್ನಲ್ಲಿ ಮಾತ್ರ ಅವರು ಸಿಎಸ್ಕೆ ಪರ ಎಂದಿನಂತೆ ಬ್ಯಾಟ್ ಬೀಸಲಿದ್ದಾರೆ.
Comments are closed.