ಕರಾವಳಿ

ಕುಂದಾಪುರದಲ್ಲಿ ಸರಳವಾಗಿ ನಡೆದ 74ನೇ ಸ್ವಾತಂತ್ರ್ಯ ದಿನ: ಕೋರೋನಾ ಯೋಧರಿಗೆ ಸನ್ಮಾನ

Pinterest LinkedIn Tumblr

ಕುಂದಾಪುರ: ಸಾವಿರಾರು ದೇಶಪ್ರೇಮಿಗಳ ಬದಲಿದಾನ, ತ್ಯಾಗದ ಫಲ ಸ್ವತಂತ್ರ್ಯ. ನಂತರದ ದಿನಗಳಲ್ಲಿ ಹಲವಾರು ಸವಾಲುಗಳ ದಿಟ್ಟವಾಗಿ ಎದುರಿಸಿ, ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತ ಶ್ರೇಷ್ಠತೆ ಪಡೆದಿರುವುದು ದೇಶವಾಸಿಗಳಿಗೆ ಹೆಮ್ಮೆ ಸಂಗತಿ. ಅಹಿಂಸೆ ಸತ್ಯಾಗ್ರಹದ ಮೂಲಕ ವಿಶ್ವಕ್ಕೆ ಹೊಸ ಹೋರಾಟದ ದಿಕ್ಕು ತೆರೆದಿಟ್ಟಿರುವುದು ಭಾರತವಾಗಿದೆ ಎಂದು ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು ಬಣ್ಣಿಸಿದ್ದಾರೆ.

ಕುಂದಾಪುರ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ತಾಲೂಕು ಪಂಚಾಯಿತಿ, ಪುರಸಭೆ ಆಶ್ರಯದಲ್ಲಿ ಇಲ್ಲಿನ ಗಾಂಧಿ ಮೈದಾನದಲ್ಲಿ ಶನಿವಾರ ನಡೆದ 74ನೇ ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನೆರವೇರಿಸಿ, ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.

ಉಡುಪಿ ಜಿಲ್ಲೆ ಸ್ವತಂತ್ರ ಸಂಗ್ರಮದಲ್ಲಿ ಮಾಡಿದ ಹೋರಾಟ ಅವಿಸ್ಮರಣೀಯವಾಗಿದ್ದು, ಕೋಟ ಶಿವರಾಮ ಕಾರಂತ ಸ್ವಾತಂತ್ರ ಚಳವಳಿಯಲ್ಲಿ ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಉಡುಪಿ ಆರ್.ಎಸ್ ಶೆಣೈ ಅವರ ಭಾರತೋದಯ ನಾಟಕ ಪ್ರದರ್ಶನ ಇಂಗ್ಲಿಷರು ನಿಷೇಧ ಹೇರಿದ್ದು, ಸ್ವಾತಂತ್ರ್ಯ ಸಂಗ್ರಾಮದ ಹೆಜ್ಜೆಯ ಗುರುತಾಗಿದೆ. ಗಾಂಧಿ ಕೂಡಾ ಕುಂದಾಪುರಕ್ಕೆ ಬಂದು ಭಾಷಣ ಮಾಡಿರುವುದು ಹೆಮ್ಮೆ ಸಂಗತಿ. ಕೋಟ ರಾಮಕೃಷ್ಣ ಕಾರಂತ, ಕಾರ್ಕಳ ಪದ್ಮನಾಭ ಕಾಮತ್, ಉಡುಪಿ ಪಾಂಡುರಂಗ ನಾಯಡು, ಕುಂದಾಪುರ ಮಹಾಬಲ ಹೊಳ್ಳ ಅವರು ವಕೀಲ ವೃತ್ತಿಗೆ ರಾಜಿನಾಮೆ ಸಲ್ಲಿಸುವ ಮೂಲಕ ಪ್ರತಿಭಟಿಸಿದ್ದರು, ಪರಿಸರದ ಮುಖಂಡರು ಉಪ್ಪಿನ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು ಎಂದು ನೆನಪು ಮಾಡಿಕೊಂಡರು.

ದೇಶದ ಹಿತಕ್ಕೆ ಆಧ್ಯತೆ ನೀಡುವ ಸಮಯ ಇದಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಪುಲ ಅಕಾಶ ಹೊಂದಿದ್ದು, ಕುಂದಾಪುರ ಉಪವಿಭಾಗಕ್ಕೆ ಹೆಚ್ಚಿನ ಆಧ್ಯತೆ ನೀಡಿ ರೂಪಿಸಲು ನೀಲಿನಕ್ಷೆ ಸಿದ್ದವಾಗಿದೆ. ದೇಶದ ವೈಶಿಷ್ಠ್ಯ ಜಿಲ್ಲೆಯಲ್ಲಿ ಉಡುಪಿ ಒಂದಾಗಿದ್ದು, ಜಿಲ್ಲೆಯ ಧಾರ್ಮಿಕ, ಪ್ರಾಕೃತಿಕ, ಪ್ರವಾಸೋಧ್ಯಮಕ್ಕೆ ಆಧ್ಯತೆ ಹೆಚ್ಚಿಸಿ, ಮೂಲ ಸೌಕರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಅತ್ಯಂತ ಸಂಭ್ರದ ನಡುವೆಯೂ ಇಡೀ ಪ್ರಪಂಚ ಕರೋನಾ ಸಾಂಕ್ರಾಮಿಕ ಸವಾಲು ಎದುರಿಸುತ್ತಿದ್ದು, ನಾವುಗಳು ಸ್ವಯಂ ಜಾಗೃತಿ, ಸಾಮಾಜಿಕ ಅಂತರ, ಮುಖಕವಚ ಧಾರಣೆ, ಪೌಷ್ಠಿಕ ಆಹಾರ ಸೇವನೆಯ ಅಗತ್ಯತೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ. ಕರೋನಾ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಅನೇಕ ಕಾರ್‍ಯಕ್ರಮ ಹಾಕಿಕೊಳ್ಳಲಾಗಿದ್ದು, ಎಲ್ಲರ ಸೇವೆ ಶ್ಲಾಘನೀಯ ಎಂದರು.

ಇದೇ ಸಂದರ್ಭದಲ್ಲಿ ಕರೋನಾ ಯೋಧರಾಗಿ ಸೇವೆ ಸಲ್ಲಿಸುತ್ತಿರುವ ಕುಂದಾಪುರ ತಾಲೂಕು ಆರೋಗ್ಯಾಧಿಕಾರಿ ಡಾ.ರಾಬರ್ಟ್, ಅರಿವಳಿಕೆ ತಜ್ಞ ಡಾ. ವಿಜಯಶಂಕರ್, ಕಂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಡಾ.ಲತಾ ನಾಯಕ್, ಶುಶ್ರೂಷಕಿಯರಾದ ಆಶಾ ಸುವರ್ಣ, ದೀಪ್ತಿ ಫರ್ನಾಂಡಿಸ್, ಆಶಾ ಕಾರ್‍ಯಕರ್ತೆಯರಾದ ಶಶಿಕಲಾ ಕುಂದಾಪುರ, ಶಂಕರನಾರಾಯಣ ಪಿಹೆಚ್‌ಸಿ ಗಾಯತ್ರಿ, ಗ್ರಾಮ ಕರಣಿಕರಾದ ಶಿವಶಂಕರ್ ಕುಂದಾಪುರ, ಶಿವರಾಮ್ ತ್ರಾಸಿ, ವಿಘ್ನೇಶ್ ಹಕ್ಲಾಡಿ, ಪೌರ ಕಾರ್ಮಿಕರಾದ ಶಂಕರ್, ಅಶೋಕ್, ಪಿಡಿಒ ತೇಜಪ್ಪ ಕುಲಾಲ್, ಕರೋನಾ ಮುಕ್ತರಾದ ರಾಜೇಶ್ ವಡೇರಹೋಬಳಿ, ಸತೀಶ್ ನಾಯಕ್, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಇದರ ಸರ್ವೀಸ್ ವಾಲಿಂಟಿಯರ್ ನಿರಕ್ಷಿತಾ, ವಿಜಿತ್, ಶಮಂತ್, ನಾಗರಾಜ್, ಶಂಕರನಾರಾಯಣ ಪೊಲೀಸ್ ಠಾಣೆಯ ಎಎಸ್ಐ ಆಚಾರ್ಯ ರಾಜಾಗಣಪತಿ ಮತ್ತು ಕುಂದಾಪುರ ಠಾಣಾ ಸಿಬ್ಬಂಸಿ ಪ್ರಸನ್ನ ಅವರನ್ನು ಕುಂದಾಪುರ ಎಸಿ ಕೆ.ರಾಜು, ತಾಪಂ ಅಧ್ಯಕ್ಷೆ ಇಂದಿರಾ ಶೆಟ್ಟಿ, ಎಎಸ್ಪಿ ಹರಿರಾಮ್ ಶಂಕರ್ ಸನ್ಮಾನಿಸಿದರು.

ಕುಂದಾಪುರ ತಾಪಂ ಅಧ್ಯಕ್ಷೆ ಇಂದಿರಾ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಮ್‌ಕಿಶನ್ ಹೆಗ್ಡೆ, ಕುಂದಾಪುರ ಪುರಸಭೆ ಸದಸ್ಯರಾದ ಪ್ರಭಾಕರ್, ಸಂತೋಷ್ ಶೆಟ್ಟಿ, ದೇವಕಿ ಸಣ್ಣಯ್ಯ, ಶ್ರೀಧರ ಶೇರೆಗಾರ್, ಮಾಜಿ ಪುರಸಭೆ ಅಧ್ಯಕ್ಷೆ ಗುಣರತ್ನಾ, ಮಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ, ಎಎಸ್ಪಿ ಹರಿರಾಮ್ ಶಂಕರ್, ಸಮಾಜ ಕಲ್ಯಾಣ ಅಧಿಕಾರಿ ರಾಘವೇಂದ್ರ ವರ್ಣಿಕರ್, ಕ್ರೀಡಾಧಿಕಾರಿ ಕುಸುಮಾಕರ್ ಶೆಟ್ಟಿ, ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ತಾಪಂ ಇಒ ಕೇಶವ ಶೆಟ್ಟಿಗಾರ್, ಕಂಡ್ಲೂರು ಠಾಣೆ ಪಿಎಸ್ಐ ರಾಜಕುಮಾರ್ ಇದ್ದರು.ಕುಂದಾಪುರ ಠಾಣೆ ಪಿಎಸ್ಐ ಹರೀಶ್ ಆರ್.ನಾಯ್ಕ್ ನೇತೃತ್ವದಲ್ಲಿ ಪೊಲೀಸರು ಧ್ವಜವಂದನೆ ನಡೆಯಿತು.

ಕುಂದಾಪುರ ಪ್ರಭಾರ ತಹಸೀಲ್ದಾರ್ ಆನಂದಪ್ಪ ನಾಯ್ಕ್ ಸ್ವಾಗತಿಸಿದರು. ಶ್ರೀ ವೆಂಕಟರಮಣ ಆಂಗ್ಲ ಮಾಧ್ಯಮ ಶಾಲೆ ಶಿಕ್ಷಕಿಯರು ಧ್ವಜಗೀತೆ ಹಾಗೂ ವಂದೇ ಮಾತರಂ ಹಾಡಿದರು. ಶಿಕ್ಷಕ ಚಂದ್ರಶೇಖರ ಬೀಜಾಡಿ ನಿರೂಪಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅರುಣ್ ಕುಮಾರ್ ಶೆಟ್ಟಿ ವಂದಿಸಿದರು.

Comments are closed.