
ಕೊರೋನಾ ಹರಡದಂತೆ ತಡೆಯಲು ಮುನ್ನೆಚರಿಕೆಯಾಗಿ ಲಾಕ್ಡೌನ್ ಘೋಷಿಸಲಾಗಿದೆ. ಅದರೊಂದಿಗೆ ಈ ವೈರಾಣು ದೇಹ ಪ್ರವೇಶಿಸದಂತೆ ತಡೆಯುವ ಸಲುವಾಗಿ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವೈದ್ಯಕೀಯ ತಜ್ಞರು ತಿಳಿಸಿದ್ದಾರೆ. ಆದರೆ ಇದನ್ನೇ ಗೇಲಿ ಮಾಡಿದ್ದ ಯುವಕ ಈಗ ಅದೇ ಕೊರೋನಾ ಸೋಂಕಿಗೆ ತುತ್ತಾಗಿದ್ದಾನೆ.
ಮಧ್ಯಪ್ರದೇಶ ಸಾಗರ್ ನಿವಾಸಿಯಾಗಿರುವ ಸಮೀರ್ ಖಾನ್ ಕೆಲ ದಿನಗಳ ಹಿಂದೆ ಟಿಕ್ ಟಾಕ್ನಲ್ಲಿ ವಿಡಿಯೋವೊಂದನ್ನು ಹರಿಬಿಟ್ಟಿದ್ದರು. ಟಿಕ್ ಟಾಕ್ನಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದ ಈತ ಕೊರೋನಾ ಕುರಿತಾಗಿ ಹಾಕಿದ ವಿಡಿಯೋ ಭಾರೀ ವೈರಲ್ ಕೂಡ ಆಗಿತ್ತು.
ವಿಡಿಯೋದಲ್ಲಿ ನೀನು ಮಾಸ್ಕ್ ಧರಿಸುವುದಿಲ್ಲವೇ ಎಂಬ ಹಿನ್ನೆಲೆ ಧ್ವನಿಯೊಂದಿಗೆ ಕಾಣಿಕೊಂಡ ಸಮೀರ್…ತುಂಡು ಬಟ್ಟೆಯ (ಮಾಸ್ಕ್) ಮೇಲೆ ನೀವೇಕೆ ವಿಶ್ವಾಸ ಇಡುತ್ತೀರಿ. ನೀವು ವಿಶ್ವಾಸ ಇಡುವುದಾದರೆ ಮೇಲಿರುವವನ ಮೇಲೆ ಇಡಿ ಎಂದು ಸ್ಟೈಲಿಸ್ಟ್ ಆಗಿ ಡೈಲಾಗ್ ಹೊಡೆದಿದ್ದರು. ಈ ವಿಡಿಯೋ ಟಿಕ್ಟಾಕ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು.
ಇದರ ನಡುವೆ ಸಮೀರ್ ಜಬಲ್ಪುರದಲ್ಲಿರುವ ಸಹೋದರಿ ಮನೆಗೆ ಹೋಗಿದ್ದಾರೆ. ಈ ಕಾರಣದಿಂದ ಈತನನ್ನು ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ. ಇದೀಗ ವೈದ್ಯಕೀಯ ಪರೀಕ್ಷೆಯಲ್ಲಿ ಟಿಕ್ ಟಾಕ್ ಸ್ಟಾರ್ಗೆ ಕೊರೋನಾ ಸೋಂಕು ಇರುವುದು ದೃಢಪಟ್ಟಿದೆ. ಅದರ ಬೆನ್ನಲ್ಲೇ ಆಸ್ಪತ್ರೆಯ ವಾರ್ಡ್ನಿಂದ ಸಮೀರ್ ಮತ್ತೊಂದು ವಿಡಿಯೋ ಕಳುಹಿಸಿದ್ದಾರೆ.
ನಾನು ಇಂದಿನಿಂದ ಟಿಕ್ ಟಾಕ್ನಲ್ಲಿ ವಿಡಿಯೋ ಹಾಕಲಾಗುವುದಿಲ್ಲ. ಏಕೆಂದರೆ ನನಗೆ ಕೊರೋನಾ ಇರುವುದು ದೃಢಪಟ್ಟಿದೆ. ನನಗಾಗಿ ಎಲ್ಲರೂ ಪಾರ್ಥಿಸಬೇಕು ಎಂದು ಈ ವಿಡಿಯೋದಲ್ಲಿ ಸಮೀರ್ ಖಾನ್ ವಿನಂತಿಸಿಕೊಂಡಿದ್ದಾರೆ.
ಇದೀಗ ಮಾಸ್ಕ್ ವಿರುದ್ಧ ಗೇಲಿ ಮಾಡಿದ ವಿಡಿಯೋ ಮತ್ತು ವಿನಂತಿಸಿಕೊಳ್ಳುತ್ತಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಯಾರೂ ಕೂಡ ಕೊರೋನಾವನ್ನು ಹಗುರವಾಗಿ ಕಾಣಬೇಡಿ ಎಂಬುದಕ್ಕೆ ಇದುವೇ ಉತ್ತಮ ಉದಾಹರಣೆ ಎನ್ನಲಾಗುತ್ತಿದೆ.
Comments are closed.